ಕ್ರೀಡೆ

ಪಾಕ್​ ಕ್ರಿಕೆಟಿಗರ ವೇತನ 4 ಪಟ್ಟು ಏರಿಕೆ ನಿರೀಕ್ಷೆ, ಆದರೂ ಭಾರತದ ಕ್ರಿಕೆಟಿಗರ ಸನಿಹಕ್ಕೆ ಬರಲ್ಲ!

ಲಾಹೋರ್​: ನಾಯಕ ಬಾಬರ್​ ಅಜಮ್​, ವಿಕೆಟ್​ ಕೀಪರ್​ ಮೊಹಮದ್​ ರಿಜ್ವಾನ್​ ಮತ್ತು ವೇಗಿ ಶಹೀನ್​ ಅಫ್ರಿದಿ ಸಹಿತ ಪಾಕಿಸ್ತಾನದ ಅಗ್ರ ಕ್ರಿಕೆಟಿಗರ 4 ಪಟ್ಟು ಏರಿಕೆ ಕಾಣಲಿದೆ. ಪಾಕ್​ ಕ್ರಿಕೆಟಿಗರು ವಿದೇಶಿ ಟಿ20 ಲೀಗ್​ಗಳಿಗೆ ಹೋಗುವುದನ್ನು ತಡೆಯಲು ಪಿಸಿಬಿ ಈ ಕ್ರಮಕ್ಕೆ ಮುಂದಾಗಿದೆ. ಅಲ್ಲದೆ ಒಪ್ಪಂದದ ಅನ್ವಯ ವಾರ್ಷಿಕ ವೇತನಕ್ಕೆ ಬದಲಾಗಿ ಮಾಸಿಕ ವೇತನ ನೀಡಲಿದೆ ಎನ್ನಲಾಗಿದೆ.

ಹೊಸ ವೇತನದ ಅನ್ವಯ, ಎ ಶ್ರೇಣಿ ಆಟಗಾರರು ಮಾಸಿಕ 13.22 ಲಕ್ಷ ರೂ. (45 ಲಕ್ಷ ಪಾಕ್​ ರೂ.) ಪಡೆಯಲಿದ್ದಾರೆ. ಬಿ ಶ್ರೇಣಿ ಆಟಗಾರರು ಮಾಸಿಕ 8.81 ಲಕ್ಷ ರೂ. ಪಡೆಯಲಿದ್ದಾರೆ ಎನ್ನಲಾಗಿದೆ. ಆದರೂ ಭಾರತದ ಕ್ರಿಕೆಟಿಗರಿಗೆ ಬಿಸಿಸಿಐ ನೀಡುವ ವೇತನಕ್ಕೆ ಹೋಲಿಸಿದರೆ ಇದು ಬಹಳ ಕಡಿಮೆಯಾಗಿದೆ. ಭಾರತದಲ್ಲಿ ಎ ಪ್ಲಸ್​ ಶ್ರೇಣಿ ಗುತ್ತಿಗೆಯ ಆಟಗಾರರು ಮಾಸಿಕ 58 ಲಕ್ಷದಂತೆ ವಾರ್ಷಿಕ 7 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ.

ಪಾಕಿಸ್ತಾನದ ರೂಪಾಯಿ ಮೌಲ್ಯ ಕುಸಿತ ಪರಿಣಾಮ?

ಪಾಕಿಸ್ತಾನ ಕ್ರಿಕೆಟಿಗರ ವೇತನವನ್ನು ಇಷ್ಟು ಪ್ರಮಾಣದಲ್ಲಿ ಏರಿಸುತ್ತಿರುವುದು ಕಳೆದೊಂದು ವರ್ಷದಲ್ಲಿ ಪಾಕಿಸ್ತಾನದ ರೂಪಾಯಿ ಮೌಲ್ಯ ಡಾಲರ್​ ಎದುರು ಭಾರಿ ಕುಸಿತ ಕಂಡಿರುವುದರ ಪರಿಣಾಮ ಎಂದೂ ಹೇಳಲಾಗುತ್ತಿದೆ. ಡಾಲರ್​ ಲೆಕ್ಕಾಚಾರದ ಪ್ರಕಾರ ನೋಡಿದರೆ ಕ್ರಿಕೆಟಿಗರ ವೇತನವನ್ನು 4 ಪಟ್ಟು ಅಲ್ಲ 2 ಪಟ್ಟು ಮಾತ್ರ ಏರಿಸಲಾಗಿದೆ. ಪಾಕಿಸ್ತಾನದ ರೂಪಾಯಿ ಇತ್ತೀಚೆಗೆ ಸಾರ್ವಕಾಲಿಕ ಕುಸಿತ ಕಂಡಿದ್ದು, ಒಂದು ಅಮೆರಿಕನ್​ ಡಾಲರ್​ ಈಗ 239.37 ಪಾಕಿಸ್ತಾನ ರೂಪಾಯಿಗೆ ಸಮನಾಗಿದೆ. ಅಲ್ಲದೆ ಪಾಕಿಸ್ತಾನದ ಒಂದು ರೂಪಾಯಿ ಭಾರತದ 29 ಪೈಸೆಗೆ ಸಮನಾಗಿದೆ.