ಕ್ರೀಡೆ

ಕ್ರೀಡೆ ಹೆಸರಿನಲ್ಲಿ ವ್ಯಾಪಾರ ಶುರು ಮಾಡಿದ ಪಾಕ್​ ಆಟಗಾರರು; ತನಿಖೆಗೆ ಆಗ್ರಹಿಸಿದ ಮಾಜಿ ಕ್ರಿಕೆಟಿಗರು

ಯುಎಸ್​ಎ: ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ಪಾಕಿಸ್ತಾನ ಸದಾ ಒಂದಿಲ್ಲೊಂದು ಕಾರಣಕ್ಕೆ ವಿಶ್ವದ ಮುಂದೆ ತನ್ನ ಮಾನವನ್ನು ತನ್ನ ಕೈಯಾರೆ ತೆಗೆದುಕೊಳ್ಳುವ ಮೂಲಕ ಬೆತ್ತಲಾಗುತ್ತಿರುತ್ತದೆ. ಯುಎಸ್​ಎ ಹಾಗೂ ವೆಸ್ಟ್​ ಇಂಡೀಸ್​ ಆತಿಥ್ಯದಲ್ಲಿ ಈ ಬಾರಿ ಟಿ-20 ವಿಶ್ವಕಪ್​ ನಡೆಯುತ್ತಿದ್ದು, ತನ್ನ ಅಭಿಯಾನ ಮುನ್ನ ಪಾಕಿಸ್ತಾನ್ ಆಟಗಾರರು ದಂಧೆಗೆ ಇಳಿದು ವಿವಾದಕ್ಕೀಡಾಗಿದ್ದಾರೆ.

ಯುಎಸ್​ಎ ವಿರುದ್ಧ ತನ್ನ ಲೀಗ್​ ಪಂದ್ಯ ಆಡುವುದಕ್ಕೂ ಮುನ್ನ ಪಾಕಿಸ್ತಾನದ ಆಟಗಾರರು ಖಾಸಗಿ ಔತಣಕೂಟ ಒಂದನ್ನು ಆಯೋಜಿಸಿದ್ದಾರೆ. ಈ ಔತಣಕೂಟದಲ್ಲಿ ಅಭಿಮಾನಿಗಳು ಕೂಡ ಪಾಲ್ಗೊಳ್ಳಬಹುದು ಎಂದು ಹೇಳಲಾಗಿದ್ದು, ಇದಕ್ಕೆ 25 ಯುಎಸ್​ ಡಾಲರ್​ ಪಾವತಿಸಬೇಕು ಎಂದು ಹೇಳಲಾಗಿದೆ. ಆದರೆ, ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಪಾಕ್​ ಆಟಗಾರರನ್ನು ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸಲಾಗುತ್ತಿದೆ.

ಪಾಕ್​ ಆಟಗಾರರು ಯುಎಸ್​ಎನಲ್ಲಿ ತಮ್ಮ ಅಭಿಮಾನಿಗಳಿಗಾಗಿ ಖಾಸಗಿ ಔತಣಕೂಟವನ್ನು ಆಯೋಜಿಸಿ ಅದರಿಂದ ಹಣ ಗಳಿಸಲು ಮುಂದಾಗಿದೆ ಎಂದು ವರದಿಯಾಗಿದೆ. ಈ ಮೂಲಕ ತಮ್ಮನ್ನು ಭೇಟಿಯಾಗಲು ಪಾಕ್ ಆಟಗಾರರು ಅಭಿಮಾನಿಗಳಿಗೆ ಬಿಗ್ ಆಫರ್ ನೀಡಿದ್ದಾರೆ. ಈ ಆಫರ್ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗರು ಆಕ್ರೋಶ ಹೊರಹಾಕಿದ್ದಾರೆ. ಏಕೆಂದರೆ ಕ್ರಿಕೆಟ್ ಆಡಲು ತೆರಳಿದ ತಂಡವೊಂದು ಔತಣಕೂಟ ಏರ್ಪಡಿಸಿದ ಅದರಿಂದ ದುಡ್ಡುಗಳಿಸಲು ಮುಂದಾಗುತ್ತಿರುವ ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದು ಅನೇಕರು ಕಿಡಿಕಾರಿದ್ದಾರೆ.

ಈ ಕುರಿತು ಮಾತನಾಡಿರುವ ಮಾಜಿ ಕ್ರಿಕೆಟಿಗ ರಶೀದ್​ ಲತೀಫ್​, ಕ್ರಿಕೆಟ್​ ಹೆಸರಿನಲ್ಲಿ ಪಾಕಿಸ್ತಾನ ಊಈ ರೀತಿ ಮಾಡುತ್ತಿರುವುದು ಸೂಕ್ತವಲ್ಲ. ಮೊದಲಿಗೆ ಇಂತಹ ಐಡಿಯಾ ಕೊಟ್ಟವರು ಯಾರು ಎಂದು ಪ್ರಶ್ನಿಸಿರುವ ಅವರು, ಇದು ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದ್ದಾರೆ. ಪಾಕಿಸ್ತಾನ ಕ್ರಿಕೆಟ್​ ಮಂಡಳಿಯೂ ಕೂಡಲೇ ಇದರ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ರಶೀದ್​ ಲತೀಫ್​ ಆಗ್ರಹಿಸಿದ್ದಾರೆ.

ಒಟ್ಟಿನಲ್ಲಿ ಟಿ20 ವಿಶ್ವಕಪ್​ ಆಡಲು ತೆರಳಿರುವ ಪಾಕಿಸ್ತಾನ ತಂಡದ ಆಟಗಾರರು ಅಭಿಮಾನಿಗಳ ಭೇಟಿಗಾಗಿ ಔತಣಕೂಟದ ಆಫರ್ ನೀಡಿ ಹಣ ಮಾಡಲು ಮುಂದಾಗಿರುವುದು ಹಲವರ ಕೆಂಗಣ್ಣಿಗೆ ಗುರಿಯಾಗಿದೆ. ಒಂದು ವೇಳೆ ಪಾಕ್​ ಕ್ರಿಕೆಟ್ ತಂಡದ ಈ ನಿರ್ಧಾರದ ಹಿಂದೆ ಮಂಡಳಿಯ ಕೈವಾಡವಿದೆ ಎಂದು ಹೇಳಲಾಗಿದ್ದು, ಇಷ್ಟೆಲ್ಲಾ ನಡೆದರೂ ಯಾವುದೇ ಪ್ರತಿಕ್ರಿಯೆ ನೀಡದಿರುವುದು ಹಲವು ಅನುಮಾನಗಳಿಗೆ ಆಸ್ಪದ ಮಾಡಿಕೊಟ್ಟಿದೆ.