ಕ್ರೀಡೆ

ಕಂಚಿನ ಪದಕ ಗೆದ್ದ ಪಾಕಿಸ್ತಾನ​ ಹಾಕಿ ಆಟಗಾರರಿಗೆ ಸಿಕ್ಕಿದ್ದು ಜುಜುಬಿ ಬಹುಮಾನ!

ಲಾಹೋರ್​: ಕಳೆದ 3 ಒಲಿಂಪಿಕ್ಸ್​ಗಳಿಗೆ ಅರ್ಹತೆಯನ್ನೇ ಗಳಿಸಲು ವಿಫಲವಾಗಿ ದು:ಸ್ಥಿತಿಗೆ ತಲುಪಿರುವ ಪಾಕಿಸ್ತಾನದ ಹಾಕಿಗೆ ಏಷ್ಯನ್​ ಚಾಂಪಿಯನ್ಸ್​ ಟ್ರೋಫಿಯಲ್ಲಿ ಒಲಿದ ಕಂಚಿನ ಪದಕ ತುಸು ಆಕ್ಸಿಜನ್​ ತುಂಬಿದೆ. ಹೀಗಾಗಿ ಪಾಕಿಸ್ತಾನ ಹಾಕಿ ಒಕ್ಕೂಟ (ಪಿಎಚ್​ಎಫ್​) ತಂಡದ ಎಲ್ಲ ಆಟಗಾರರಿಗೆ ಬಹುಮಾನ ನೀಡಲು ನಿರ್ಧರಿಸಿದೆ. ಆದರೆ ಪಿಎಚ್ಎಫ್​ ಸದ್ಯ ಬಡತನದಲ್ಲಿರುವುದರಿಂದ ಆಟಗಾರರಿಗೆ ಜುಜುಬಿ ಮೊತ್ತದ ಬಹುಮಾನವಷ್ಟೇ ಲಭಿಸಿದೆ.

ಕಂಚಿನ ಪದಕ ವಿಜೇತ ಪಾಕ್​ ಹಾಕಿ ತಂಡದ ಎಲ್ಲ ಆಟಗಾರರಿಗೆ ತಲಾ 100 ಡಾಲರ್​ ಅಂದರೆ 8,370 ರೂಪಾಯಿ (28 ಸಾವಿರ ಪಾಕಿಸ್ತಾನಿ ರೂಪಾಯಿ) ಬಹುಮಾನ ನೀಡಲು ಪಿಎಚ್​ಎಫ್​ ನಿರ್ಧರಿಸಿದೆ. ಇದು ಪಾಕಿಸ್ತಾನ ಹಾಕಿಯ ಬಡತನಕ್ಕೂ ಸಾಕ್ಷಿಯಾಗಿದೆ.

ಪಾಕ್​ ತಂಡದ ಆಟಗಾರ ಘಜನ್​ರ್​ ಅಲಿ, ತನ್ನ ತಂದೆ ನಿಧನ ಹೊಂದಿದ ನಡುವೆಯೂ ಟೂರ್ನಿಯಲ್ಲಿ ಆಟ ಮುಂದುವರಿಸಿದ್ದರು. ಹೀಗಾಗಿ ಪಿಎಚ್​ಎಫ್​​ ಈ ಕಂಚಿನ ಪದಕ ಗೆಲುವನ್ನು ಘಜನ್​ರ್​ಗೆ ಅರ್ಪಿಸಲು ನಿರ್ಧರಿಸಿದೆ. ಅಂದಹಾಗೆ, 5ನೇ ಬಾರಿ ಏಷ್ಯನ್​ ಚಾಂಪಿಯನ್ಸ್​ ಟ್ರೋಫಿ ಗೆದ್ದ ಭಾರತ ತಂಡದ ಆಟಗಾರರಿಗೆ ಹಾಕಿ ಇಂಡಿಯಾ ತಲಾ 3 ಲಕ್ಷ ರೂ. ಬಹುಮಾನ ಘೋಷಿಸಿದೆ.