ಕ್ರೀಡೆ

ದಯವಿಟ್ಟು ಇದೊಂದನ್ನು ಮಾಡಿ... ಐಸಿಸಿ ನೂತನ ಅಧ್ಯಕ್ಷ ಜಯ್​ ಷಾಗೆ ಬೇಡಿಕೆಯಿಟ್ಟ ಪಾಕ್​ ಕ್ರಿಕೆಟ್​ ದಿಗ್ಗಜ

ನವದೆಹಲಿ: 2025ರ ಫೆಬ್ರವರಿ-ಮಾರ್ಚ್​ ತಿಂಗಳಲ್ಲಿ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯಲಿರುವ ಚಾಂಪಿಯನ್ಸ್​ ಟ್ರೋಫಿ ಆರಂಭವಾಗುವುದಕ್ಕೆ ತಿಂಗಳುಗಳು ಬಾಕಿ ಉಳಿದಿದ್ದು, ಭಾರತ ಹಾಗೂ ಪಾಕಿಸ್ತಾನ ನಡುವಿನ ಕಿತ್ತಾಟಕ್ಕೆ ಹೆಚ್ಚು ಸದ್ದು ಮಾಡುತ್ತಿದೆ. ಏಕೆಂದರೆ ಈ ಬಾರಿಯ ಟೂರ್ನಿಯೂ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯುತ್ತಿದ್ದು, ಭಾರತ ಭದ್ರತೆ ಹಾಗೂ ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಬಿಕ್ಕಟ್ಟಿನ ವಿಚಾರವಾಗಿ ಪಾಕ್​ಗೆ ತೆರಳುವುದಿಲ್ಲ ಎಂದು ಹೇಳಿದೆ. ಈ ವಿಚಾರ ಇದೀಗ ಐಸಿಸಿಯ ನೂತನ ಅಧ್ಯಕ್ಷ ಜಯ್​ ಷಾ ಪಾಲಿಗೆ ಕಗ್ಗಂಟಾಗಿ ಪರಿಣಮಿಸಿದೆ.

ಏಕೆಂದರೆ ಚಾಂಪಿಯನ್ಸ್​ ಟ್ರೋಫಿ ಜೊತೆಜೊತೆಗೆ ಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜಯ್​ ಷಾ ಅವರು ಕೂಡ ಸುದ್ದಿಯಲ್ಲಿದ್ದಾರೆ. ಏಕೆಂದರೆ ಜಯ್​ ಷಾ ಅವರ ಆಯ್ಕೆಯನ್ನು ಪಾಕ್​ ಕ್ರಿಕೆಟ್​ ಮಂಡಳಿ ಕೂಡ ಬೆಂಬಲಿಸಿದ್ದು, ಭಾರತ ತಂಡ ಚಾಂಪಿಯನ್ಸ್​​ ಟ್ರೋಫಿ ಆಡಲು ಪಾಕಿಸ್ತಾನಕ್ಕೆ ಬರಲಿದೆ ಎಂಬ ನಂಬಿಕೆ ಮೇಲೆ. ಆದರೆ, ಭಾರತ ಮಾತ್ರ ಹೈಬ್ರಿಡ್​ ಮಾದರಿಯಲ್ಲಿ ನಡೆಸಿದರೆ ಮಾತ್ರ ಭಾಗಿಯಾಗುವುದಾಗಿ ಹೇಳಿದೆ. ಆದರೆ, ಪಾಕಿಸ್ತಾನವು ಭಾರತ ತಂಡಕ್ಕೆ ಸಂಪೂರ್ಣವಾಗಿ ಭದ್ರತೆ ಒದಗಿಸುವುದಾಗಿ ಹೇಳಿದ್ದು, ಲಾಹೋರ್​ನಲ್ಲಿ ಕ್ರೀಡಾಂಗಣದ ಬಳಿ ಫೈವ್​​ ಸ್ಟಾರ್​ ಹೋಟೆಲ್​ ಕಟ್ಟಿಸುವುತ್ತಿರುವುದಾಗಿ ಹೇಳಿದೆ.

ಒಂದು ವೇಳೆ ಹೈಬ್ರಿಡ್​ ಮಾದರಿಯಲ್ಲಿ ಟೂರ್ನಿ ನಡೆಸಿದರೆ ಭಾಗಿಯಾಗುವುದಾಗಿ ಹೇಳಿರುವ ಭಾರತವು ಯಾವುದೇ ಕಾರಣಕ್ಕೂ ಪಾಕಿಸ್ತಾನಕ್ಕೆ ಕಾಲಿಡುವುದಿಲ್ಲ ಎಂದು ಹೇಳಿದೆ. ಆದರೆ, ಬಿಸಿಸಿಐ ಮನವಿಗೆ ಸೆಡ್ಡು ಹೊಡೆದಿರುವ ಪಿಸಿಬಿ ಐಸಿಸಿಗೆ ನಿರ್ಧಾರ ಪ್ರಕಟಿಸುವಂತೆ ಹೇಳಿದೆ. ಈ ವಿಚಾರ ನೂತನ ಅಧ್ಯಕ್ಷರಾದ ಜಯ್​ ಷಾ ಪಾಲಿಗೆ ಕಗ್ಗಂಟಾಗಿ ಪರಿಣಮಿಸಿದ್ದು, ತೀರ್ಪು ಭಾರತದ ಪರವಾಗಿ ಬರುವ ನಿರೀಕ್ಷೆ ಇದೆ. ಆದರೆ, ಭಾರತ ತಂಡವನ್ನು ದಯವಿಟ್ಟು ಕಳಿಸಿ ಎಂದು ಜಯ್​ ಷಾಗೆ ಪಾಕ್​ನ ಮಾಜಿ ನಾಯಕ ಯೂನಿಸ್​ ಖಾನ್​ ಮನವಿ ಮಾಡಿದ್ದಾರೆ.

ಈ ಕುರಿತು ಮಾತನಾಡಿರುವ ಯೂನಿಸ್​, ಜಯ್ ಷಾ ಅವರನ್ನು ಐಸಿಸಿ ಮುಖ್ಯಸ್ಥರನ್ನಾಗಿ ನೇಮಕ ಮಾಡುವುದರೊಂದಿಗೆ ಕ್ರಿಕೆಟ್ ಉನ್ನತಿಯಾಗಬೇಕು. ಐಸಿಸಿ ಮುಖ್ಯಸ್ಥರ ಉತ್ತಮ ಉಪಕ್ರಮಗಳೊಂದಿಗೆ ಭಾರತವು ಕ್ರಿಕೆಟ್ ಆಡಲು ಪಾಕಿಸ್ತಾನಕ್ಕೆ ಬರುವಂತೆ ಜಯ್ ಷಾ ಕ್ರೀಡಾ ಸ್ಫೂರ್ತಿಯನ್ನು ತೋರಬೇಕಿದೆ. ಭಾರತವು ಚಾಂಪಿಯನ್ಸ್​ ಟ್ರೋಫಿ ಆಡಲು ಪಾಕಿಸ್ತಾನಕ್ಕೆ ಭೇಟಿ ನೀಡಿದರೆ ಮುಂದಿನ ದಿನಗಳಲ್ಲಿ ನಾವು ಕೂಡ ಅವರ ದೇಶಕ್ಕೆ ಭೇಟಿ ನೀಡಲಿದ್ದೇವೆ ಎಂದು ಯೂನಿಸ್​ ಖಾನ್​ ಹೇಳಿದ್ದಾರೆ.

ಆರ್ಥಿಕ ಸಂಕಷ್ಟದ ಭಯ

ಭಾರತ ತಂಡ ಚಾಂಪಿಯನ್ಸ್ ಟ್ರೋಫಿ ಆಡಲು ಪಾಕಿಸ್ತಾನಕ್ಕೆ ತೆರಳದಿದ್ದರೆ ಆ ದೇಶದ ಕ್ರಿಕೆಟ್ ಮಂಡಳಿಗೆ ಭಾರಿ ನಷ್ಟವಾಗುವ ಸಾಧ್ಯತೆ ಇದೆ. ಈಗಾಗಲೇ ಪಾಕಿಸ್ತಾನ ನಷ್ಟದ ಹಾದಿಯಲ್ಲಿದ್ದು, ಕ್ರಿಕೆಟ್​ನಲ್ಲಿ ಟೀಮ್​ ಇಂಡಿಯಾಗೆ ಇರುವ ಕ್ರೇಜ್​ ಬೇರೆ ಯಾವ ದೇಶಕ್ಕೂ ಇಲ್ಲ. ಹೀಗಾಗಿ ಟೀಮ್​ ಇಂಡಿಯಾ ಪಾಕಿಸ್ತಾನಕ್ಕೆ ಹೋದಲ್ಲಿ ಅದರಿಂದ ಆರ್ಥಿಕವಾಗಿಯೂ ಲಾಭವಾಗಲಿದೆ ಮತ್ತು ಪಾಕ್​ ಮೇಲೆ ಇರುವ ಕಳಂಕವೂ ದೂರವಾಗಲಿದೆ ಎಂಬ ನಂಬಿಕೆಯಲ್ಲಿ ಅಲ್ಲಿನ ಕ್ರಿಕೆಟ್​ ಮಂಡಳಿ ಕಾದು ಕುಳಿತಿದೆ. ಅಲ್ಲದೇ, ಉಭಯ ದೇಶಗಳ ನಡುವಿನ ಸಂಬಂಧವೂ ಕೂಡ ಕ್ರಿಕೆಟ್​ ಮೂಲಕ ಮತ್ತೆ ಚಿಗುರಲಿದೆ ಎಂಬ ನಿರೀಕ್ಷೆಯಲ್ಲಿದೆ. ಆದರೆ, ಪಿಸಿಬಿ ನಿರೀಕ್ಷೆಗೆ ಬಿಸಿಸಿಐ ಆಘಾತ ನೀಡಿದ್ದು, ಬಹುತೇಕ ಟೀಮ್​ ಇಂಡಿಯಾ ಪಾಕಿಸ್ತಾನ ತೆರಳುವುದು ಅನುಮಾನವಾಗಿದೆ.

ಇದಲ್ಲದೆ ಭದ್ರತೆಯ ಕಾರಣದಿಂದಾಗಿ ಭಾರತದ ಪಂದ್ಯಗಳನ್ನು ಲಾಹೋರ್​ನ ಗಡಾಫಿ ಕ್ರೀಡಾಂಗಣದಲ್ಲಿ ನಡೆಸುವುದಾಗಿ ತಿಳಿಸಿದ್ದು, ಇದಕ್ಕಾಗಿ ಕ್ರೀಡಾಂಗಣದ ಪಕ್ಕದಲ್ಲಿರುವ ಐದು ಎಕರೆ ಜಮೀನನ್ನು ಸ್ವಾದೀನಪಡಿಸಿಕೊಳ್ಳಲಾಗಿದ್ದು, ಭಾರತದ ಆಟಗಾರರು ಹಾಗೂ ಸಿಬ್ಬಂದಿ ಉಳಿದುಕೊಳ್ಳಲು 5 ಸ್ಟಾರ್​ ಹೋಟೆಲ್​ ನಿರ್ಮಿಸುತಿವುದಾಗಿ ಪಿಸಿಬಿ ತಿಳಿಸಿದೆ. ಇದಲ್ಲದೆ ಭಾರತ ತಂಡ ಪಾಕಿಸ್ತಾನಕ್ಕೆ ಬರುವುದರಿಂದ ಉಭಯ ದೇಶಗಳ ನಡುವಿನ ಸಂಬಂಧ ಸ್ವಲ್ಪಮಟ್ಟಿಗೆ ಸರಿಹೋಗಬಹುದು ಎಂದು ಪಿಸಿಬಿ ಆಶಿಸಿದೆ. ಆದರೆ, ಮುಂದಿನ ದಿನಗಳಲ್ಲಿ ಭಾರತ ಸರ್ಕಾರ ಇದಕ್ಕೆ ಹೇಗೆ ಪ್ರತಿಕ್ರಿಯಿಸಲಿದೆ ಎಂದು ಕಾದು ನೋಡಬೇಕಿದೆ.