ಕ್ರೀಡೆ

ಆಂಡರ್​ಸನ್​ ಮಧ್ಯಮ ವೇಗಿ ಎಂದು ಕರೆದು ಟ್ರೋಲ್​ ಆದ ಶೋಯಿಬ್​ ಅಖ್ತರ್​..!-

ಬೆಂಗಳೂರು: ಇಂಗ್ಲೆಂಡ್​ನ ಅನುಭವಿ ವೇಗದ ಬೌಲರ್​ ಜೇಮ್ಸ್​ ಆಂಡರ್​ಸನ್​ ಮಂಗಳವಾರವಷ್ಟೇ 600 ವಿಕೆಟ್​ ಪಡೆಯುವ ಮೂಲಕ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಿದ್ದರು. ಈ ಸಾಧನೆ ಮಾಡಿದ ಮೊದಲ ವೇಗಿ ಹಾಗೂ ವಿಶ್ವದ 4ನೇ ಬೌಲರ್​ ಎನಿಸಿದ್ದರು. ಆಂಡರ್​ಸನ್​ ಸಾಧನೆಗೆ ವಿಶ್ವ ಕ್ರಿಕೆಟ್​ ವಲಯದಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಪಾಕಿಸ್ತಾನದ ಮಾಜಿ ವೇಗಿ ಶೋಯಿಬ್​ ಅಖ್ತರ್​, ಆಂಡರ್​ಸನ್​ ಅವರನ್ನು ಅಭಿನಂದಿಸುವ ಬರದಲ್ಲಿ ಮಧ್ಯಮ ವೇಗಿ ಎಂದು ಟ್ವೀಟ್​ ಮಾಡುವ ಮೂಲಕ ಭಾರೀ ಟ್ರೋಲ್​ಗೆ ಸಿಲುಕಿದ್ದಾರೆ.

ಆಂಡರ್​ಸನ್​ಗೆ ಟ್ವಿಟರ್​ ಮೂಲಕ ಅಭಿನಂದನೆ ಸಲ್ಲಿಸಿರುವ ಶೋಯಿಬ್​ ಅಖ್ತರ್​, ಇಂಗ್ಲೆಂಡ್​ ದಿಗ್ಗಜ ಮಧ್ಯಮ ವೇಗಿ ನಿಮ್ಮ ಸಾಧನೆ ನಿಜಕ್ಕೂ ಮೆಚ್ಚುವಂಥದ್ದು. ಮಧ್ಯಮ ವೇಗಿಯೊಬ್ಬರು 156 ಟೆಸ್ಟ್​ ಪಂದ್ಯಗಳಲ್ಲಿ 600 ವಿಕೆಟ್​ ಕಬಳಿಸಿರುವುದು ಸಾಧನೆಯೇ ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಹಲವು ಮಂದಿ ವಿವಿಧ ರೀತಿಯಲ್ಲಿ ಟ್ವೀಟ್​ ಮಾಡುವ ಮೂಲಕ ಅಖ್ತರ್​ ಕಾಲೆಳೆದಿದ್ದಾರೆ. ಮೀಡಿಯಂ ಫೇಸ್​ ಆದರೂ ನಿಮಗಿಂತ ಉತ್ತಮ ಎಂದರೆ, ಮತ್ತೊಬ್ಬರು ಅವರು ಸ್ಪಿನ್ನರ್​ ಇರಬೇಕು ಗಮನಿಸಿ ಎಂದಿದ್ದಾರೆ.

ಇಂಗ್ಲೆಂಡ್​ನ ಸೌಥಾಂಪ್ಟನ್​ನಲ್ಲಿ ಮಂಗಳವಾರ ಅಂತ್ಯಗೊಂಡ 3ನೇ ಟೆಸ್ಟ್​ ಪಂದ್ಯದ ಅಂತಿಮ ದಿನದಾಟದಲ್ಲಿ ಪಾಕಿಸ್ತಾನದ ನಾಯಕ ಅಜರ್​ ಅಲಿ ವಿಕೆಟ್​ ಕಬಳಿಸುವ ಮೂಲಕ 38 ವರ್ಷದ ಆಂಡರ್​ಸನ್​ ಟೆಸ್ಟ್​ ಕ್ರಿಕೆಟ್​ನಲ್ಲಿ 600 ವಿಕೆಟ್​ ಪೂರೈಸಿದರು. ವಿಶ್ವ ಕ್ರಿಕೆಟ್​ನಲ್ಲಿ 600 ವಿಕೆಟ್​ ಕಬಳಿಸಿದ ವಿಶ್ವದ 4ನೇ ಬೌಲರ್​ ಆಂಡರ್​ಸನ್​. ಇದಕ್ಕೂ ಮೊದಲು ಭಾರತದ ಮಾಜಿ ಲೆಗ್​ ಸ್ಪಿನ್ನರ್​ ಅನಿಲ್​ ಕುಂಬ್ಳೆ (619), ಆಸ್ಟ್ರೆಲಿಯಾದ ದಿಗ್ಗಜ ಸ್ಪಿನ್ನರ್​ ಶೇನ್​ ವಾರ್ನರ್​ (708) ಹಾಗೂ ಶ್ರೀಲಂಕಾದ ದಂತಕಥೆ ಮುತ್ತಯ್ಯ ಮುರಳೀಧರನ್​ (800) ಈ ಸಾಧನೆ ಮಾಡಿದ್ದರು.