ಕ್ರೀಡೆ

ಮಹಿಳಾ ಟಿ20 ವಿಶ್ವಕಪ್​ನಲ್ಲಿ ಕೈಹಿಡಿಯದ ಪಾಕಿಸ್ತಾನ; ಸೆಮೀಸ್​ಗೆ ಕಿವೀಸ್​, ಲೀಗ್​ನಲ್ಲೇ ಹೊರಬಿದ್ದ ಭಾರತ!

ದುಬೈ: ಸಂಟಿತ ಬೌಲಿಂಗ್​ ನಿರ್ವಹಣೆ ತೋರಿದ ನ್ಯೂಜಿಲೆಂಡ್​ ತಂಡ ಮಹಿಳಾ ಟಿ20 ವಿಶ್ವಕಪ್​ ಟೂರ್ನಿಯ ನಿರ್ಣಾಯಕ ಲೀಗ್​ ಪಂದ್ಯದಲ್ಲಿ ಪಾಕಿಸ್ತಾನವನ್ನು 54 ರನ್​ಗಳಿಂದ ಮಣಿಸುವ ಮೂಲಕ 8 ವರ್ಷಗಳ ಬಳಿಕ ಉಪಾಂತ್ಯಕ್ಕೇರಿದೆ. ಇದರೊಂದಿಗೆ ಹರ್ಮಾನ್​ಪ್ರೀತ್​ ಕೌರ್​ ಸಾರಥ್ಯದ ಭಾರತ ತಂಡ ಲೀಗ್​ ಹಂತದಲ್ಲೇ ಹೊರಬಿದ್ದು ನಿರಾಸೆ ಅನುಭವಿಸಿದೆ. ಪಾಕಿಸ್ತಾನ ಗೆದ್ದರಷ್ಟೇ ಭಾರತಕ್ಕೆ ಸೆಮಿಫೈನಲ್​ಗೇರುವ ಅವಕಾಶವಿತ್ತು.

ದುಬೈ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಕಾದಾಟದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿದ ಕಿವೀಸ್​, 6 ವಿಕೆಟ್​ಗೆ 110 ರನ್​ ಗಳಿಸಲಷ್ಟೇ ಶಕ್ತವಾಯಿತು. ಇದರಿಂದ ಭಾರತೀಯರ ಮನದಲ್ಲಿ ಆಶಾಕಿರಣ ಮೂಡಿದರೂ, ಪಾಕಿಸ್ತಾನ ದಯನೀಯ ಬ್ಯಾಟಿಂಗ್​ ನಿರ್ವಹಣೆ ತೋರಿ ಅದನ್ನು ಭಗ್ನಗೊಳಿಸಿತು. 11.4 ಓವರ್​ಗಳಲ್ಲೇ ಕೇವಲ 56 ರನ್​ಗಳಿಗೆ ಪಾಕ್​ ಸರ್ವಪತನ ಕಂಡಿತು.

ನ್ಯೂಜಿಲೆಂಡ್​ ತಂಡ 8 ವರ್ಷಗಳ ಬಳಿಕ ಮಹಿಳಾ ಟಿ20 ವಿಶ್ವಕಪ್​ನಲ್ಲಿ ಸೆಮಿಫೈನಲ್​ಗೇರಿತು. 2016ರಲ್ಲಿ ಕೊನೆಯದಾಗಿ ಈ ಸಾಧನೆ ಮಾಡಿತ್ತು. ಭಾರತ ತಂಡ ಮಹಿಳಾ ಟಿ20 ವಿಶ್ವಕಪ್​ನ 9 ಆವೃತ್ತಿಗಳ ಪೈಕಿ 4ನೇ ಬಾರಿ ಸೆಮಿಫೈನಲ್​ಗೇರಲು ವಿಫಲವಾಯಿತು. ಈ ಮುನ್ನ 2012, 2014, 2016ರಲ್ಲೂ ಲೀಗ್​ನಲ್ಲೇ ಹೊರಬಿದ್ದಿತ್ತು.

ನ್ಯೂಜಿಲೆಂಡ್​: 6 ವಿಕೆಟ್​ಗೆ 110 (ಬೇಟ್ಸ್​ 28, ಪ್ಲಿಮ್ಮರ್​ 17, ಅಮೆಲಿಯಾ ಕೆರ್​ 9, ಡಿವೈನ್​ 19, ಹಾಲಿಡೇ 22, ಮ್ಯಾಡಿ ಗ್ರೀನ್​ 9, ನಶ್ರಾ ಸಂಧು 18ಕ್ಕೆ 3, ನಿದಾ 26ಕ್ಕೆ 1, ಸಾದಿಯಾ 23ಕ್ಕೆ 1), ಪಾಕಿಸ್ತಾನ: 11.4 ಓವರ್​ಗಳಲ್ಲಿ 56 (ಮುನೀಬಾ ಅಲಿ 15, ಇರಾಮ್​ 3, ಫಾತಿಮಾ ಸನಾ 21, ನಿದಾ 9, ತಹುಹು 8ಕ್ಕೆ 1, ಅಮೆಲಿಯಾ ಕೆರ್​ 14ಕ್ಕೆ 3, ಕರ್ಸನ್​ 7ಕ್ಕೆ 1).

ಬಿ ಗುಂಪಿನಲ್ಲೂ ಕುತೂಹಲ

ಸೆಮಿಫೈನಲ್​ಗೇರಲು ಬಿ ಗುಂಪಿನಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಇಂಗ್ಲೆಂಡ್​ ಆಡಿದ 3 ಪಂದ್ಯದಲ್ಲೂ ಗೆದ್ದು ಅಗ್ರಸ್ಥಾನದಲ್ಲಿದ್ದರೆ, ದ. ಆಫ್ರಿಕಾ 4ರಲ್ಲಿ 3 ಗೆದ್ದು 2ನೇ ಸ್ಥಾನದಲ್ಲಿದೆ. ವಿಂಡೀಸ್​ 3ರಲ್ಲಿ 2 ಗೆದ್ದು 3ನೇ ಸ್ಥಾನದಲ್ಲಿದೆ. ಇಂಗ್ಲೆಂಡ್​-ವಿಂಡೀಸ್​ ನಡುವೆ ಮಂಗಳವಾರ ಅಂತಿಮ ಲೀಗ್​ ಪಂದ್ಯ ನಡೆಯಲಿದ್ದು, ಆಂಗ್ಲರು ಗೆದ್ದರೆ ಆಫ್ರಿಕಾವನ್ನೂ ಉಪಾಂತ್ಯಕ್ಕೇರಿಸಲಿದ್ದಾರೆ. ವಿಂಡೀಸ್​ ಗೆದ್ದರೆ ಮೂರೂ ತಂಡಗಳು ತಲಾ 6 ಅಂಕ ಗಳಿಸಲಿದ್ದು, ಉತ್ತಮ ರನ್​ರೇಟ್​ ಹೊಂದಿರುವ 2 ತಂಡಗಳು ಉಪಾಂತ್ಯಕ್ಕೇರಲಿವೆ.