ಕ್ರೀಡೆ

ಟಿ20 ವಿಶ್ವಕಪ್​ನಲ್ಲಿ ಮೊದಲ ಜಯ ಸಾಧಿಸಿದ ಪಾಕಿಸ್ತಾನ; ಸೂಪರ್​-8 ಆಸೆ ಜೀವಂತ

ನ್ಯೂಯಾರ್ಕ್​: ವೇಗಿಗಳ ಸಂಟಿತ ದಾಳಿ ಮತ್ತು ವಿಕೆಟ್​ ಕೀಪರ್​-ಬ್ಯಾಟರ್​ ಮೊಹಮದ್​ ರಿಜ್ವಾನ್​ (53*ರನ್​, 53 ಎಸೆತ, 2 ಬೌಂಡರಿ, 1 ಸಿಕ್ಸರ್​) ಜವಾಬ್ದಾರಿಯುತ ಬ್ಯಾಟಿಂಗ್​ ನೆರವಿನಿಂದ ಪಾಕಿಸ್ತಾನ ತಂಡ ಐಸಿಸಿ ಟಿ20 ವಿಶ್ವಕಪ್​ನಲ್ಲಿ ಗೆಲುವಿನ ಖಾತೆ ತೆರೆದಿದೆ. ಮಾಡು ಇಲ್ಲವೆ ಮಡಿ ಎನಿಸಿದ ತನ್ನ 3ನೇ ಲೀಗ್​ ಪಂದ್ಯದಲ್ಲಿ ಪಾಕಿಸ್ತಾನ ತಂಡ ಕೆನಡಾ ವಿರುದ್ಧ 7 ವಿಕೆಟ್​ಗಳಿಂದ ಗೆಲುವು ಸಾಧಿಸಿ ಸೂಪರ್​-8 ಪ್ರವೇಶಿಸುವ ಆಸೆ ಜೀವಂತ ಉಳಿಸಿಕೊಂಡಿದೆ.

ನಾಸೌ ಕೌಂಟಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಎ ಗುಂಪಿನ ಕಾದಾಟದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಕೆನಡಾ, ಮೊಹಮದ್​ ಆಮೀರ್​ (13ಕ್ಕೆ 2), ಹ್ಯಾರಿಸ್​ ರೌಫ್​ (26ಕ್ಕೆ 2) ಬಿಗಿ ದಾಳಿಯ ನಡುವೆ ಆರಂಭಿಕ ಆರೋನ್​ ಜಾನ್ಸನ್​ (52 ರನ್​, 44 ರನ್​, 4 ಬೌಂಡರಿ, 4 ಸಿಕ್ಸರ್​) ಅರ್ಧಶತಕದ ಹೋರಾಟದಿಂದ 7 ವಿಕೆಟ್​ಗೆ 106 ರನ್​ಗಳಿಗೆ ಸಮಾಧಾನ ಕಂಡಿತು. ಪ್ರತಿಯಾಗಿ ಪಾಕ್​, 17.3 ಓವರ್​ಗಳಲ್ಲಿ 3 ವಿಕೆಟ್​ಗೆ 107 ರನ್​ ಗಳಿಸಿ ಜಯ ದಾಖಲಿಸಿತು.

ಪಾಕ್​ಗೆ ಜಾನ್ಸನ್​ ಪ್ರತಿರೋಧ

ಸತತ 2 ಎಸೆತದಲ್ಲಿ ಬೌಂಡರಿ ಸಿಡಿಸಿ ಖಾತೆ ತೆರೆದ ಜಾನ್ಸನ್​ ಕೆನಡಾ ಪರ ಗರಿಷ್ಠ ರನ್​ ಸ್ಕೋರರ್​ ಎನಿಸಿದರು. ಇತರ ಬ್ಯಾಟರ್​ಗಳ ವೈಫಲ್ಯದ ನಡುವೆಯೂ ಏಕಾಂಗಿಯಾಗಿ ಮೊತ್ತ ಏರಿಸಿದ ಜಾನ್ಸನ್​ ಪಾಕ್​ ಬೌಲರ್​ಗಳನ್ನು ಕಾಡಿದರು. ಆರಂಭಿಕ ನವನೀತ್​ (4) 3ನೇ ಓವರ್​ನಲ್ಲಿ ಅಮೀರ್​ಗೆ ಬೌಲ್ಡ್​ ಆದರು. ಬಳಿಕ ಪರ್ಗತ್​ ಸಿಂಗ್​ (2) ನಿರಾಸೆ ಮೂಡಿಸಿದರು. ಕಳೆದ ಪಂದ್ಯದ ಹೀರೋ ನಿಕೋಲಸ್​ ಕೀರ್ಟನ್​ (2) ರನ್​ ಓಡುವ ಗೊಂದಲದಲ್ಲಿ ಔಟ್​ ಆದರು. ಇನಿಂಗ್ಸ್​ನ 10ನೇ ಓವರ್​ನಲ್ಲಿ ಶ್ರೇಯಸ್​ ಮೊವ್ವ (2), ರವೀಂದ್ರಪಾಲ್​ ಸಿಂಗ್​ (0) ಡಬಲ್​ ವಿಕೆಟ್​ ಪಡೆದ ರೌಫ್​ ಕೆನಡಾಗೆ ಕಡಿವಾಣ ಹೇರಿದರು. 55 ರನ್​ಗಳಿಗೆ 5 ವಿಕೆಟ್​ ಕಳೆದುಕೊಂಡ ಕೆನಡಾ 100ರ ಗಡಿದಾಟುವುದು ದುಸ್ತರ ಎನಿಸಿತು. ಆಗ ಜಾನ್ಸನ್​ 39 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ನೆರವಿಗೆ ನಿಂತರು. ಕೊನೆಯಲ್ಲಿ ಸಾದ್​ ಬೀನ್​ ಜಾರ್​ (10), ಕಲೀಮ್​ ಸನಾ (13*) ಕೊಡುಗೆಯಿಂದ ಕೆನಡಾ 100ರ ಗಡಿ ದಾಟಿತು.

ಕೆನಡಾ: 7 ವಿಕೆಟ್​ಗೆ 106 (ಜಾನ್ಸನ್​ 52, ರ್ಕಿಟನ್​ 1, ಶ್ರೇಯಸ್​ 2, ಬೀನ್​ ಜಾರ್​ 10, ಕಲೀಮ್​ 13*, ಹೈಯಾಲಿಗರ್​ 9*, ಶಾಹೀನ್​ ಷಾ 21ಕ್ಕೆ 1, ರೌಫ್ 26ಕ್ಕೆ 2, ಅಮೀರ್​ 13ಕ್ಕೆ 2). ಪಾಕಿಸ್ತಾನ: 17.3 ಓವರ್​ಗಳಲ್ಲಿ 3 ವಿಕೆಟ್​ಗೆ 107 (ರಿಜ್ವಾನ್​ 53*, ಬಾಬರ್​ 33, ಹೈಯಾಲಿಗರ್​ 18ಕ್ಕೆ 2). ಪಂದ್ಯಶ್ರೇಷ್ಠ: ಮೊಹಮದ್ ಆಮೀರ್​.