ಕ್ರೀಡೆ

ತಾಳ್ಮೆ ಕಳೆದುಕೊಂಡ ಪಾಕ್​ ವೇಗಿ! ಕಿವೀಸ್​ ಎದುರು 2ನೇ ಪಂದ್ಯ ಸೋತ ಬೆನ್ನಲ್ಲೇ ಕೆಂಡಾಮಂಡಲ | Pakistan

Pakistan: ಪ್ರಸ್ತುತ ಪಾಕಿಸ್ತಾನ ಕ್ರಿಕೆಟ್​ನಲ್ಲಿ ಯಾವುದೂ ಸರಿಯಿಲ್ಲ. ಆಥಿತೇಯರಾಗಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಹೀನಾಯ ಸೋಲು ಅನುಭವಿಸಿದ ಪಾಕ್​, ಎರಡೇ ಎರಡು ಪಂದ್ಯಗಳನ್ನಾಡಿ ಟೂರ್ನಿಯಿಂದ ಅಧಿಕೃತವಾಗಿ ಹೊರಬಿದ್ದಿತು. ಇದು ಪಿಸಿಬಿಯಲ್ಲಿ ದೊಡ್ಡ ಬಿರುಕನ್ನು ಮೂಡಿಸಿದೆ. ಮೊದಲೇ ಚಾಂಪಿಯನ್ಸ್ ಟ್ರೋಫಿ ಸೋಲಿನಿಂದ ಕಂಗೆಟ್ಟಿದ್ದ ಪಾಕ್ ಈಗ ನ್ಯೂಜಿಲೆಂಡ್​ ವಿರುದ್ಧದ ಸೋಲಿನಿಂದ ಮತ್ತಷ್ಟು ಕುಗ್ಗಿದೆ.

ಪ್ರಸಕ್ತ ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಬ್ಯಾಕ್ ಟು ಬ್ಯಾಕ್ ಎರಡು ಪಂದ್ಯಗಳನ್ನು ಸೋತ ಸಲ್ಮಾನ್ ಅಗಾ ನಾಯಕತ್ವದ ಪಾಕಿಸ್ತಾನ ತಂಡ, ಮತ್ತೊಮ್ಮೆ ಭಾರೀ ಟೀಕೆ, ವ್ಯಂಗ್ಯಗಳಿಗೆ ಗುರಿಯಾಗಿದೆ. ತಮ್ಮವರನ್ನು ಹೀಯಾಳಿಸಿ ಮಾತನಾಡುವವರ ವಿರುದ್ಧ ಆಕ್ರೋಶ ಹೊರಹಾಕಿರುವ ವೇಗಿ ಹ್ಯಾರಿಸ್​ ರೌಫ್​, ಇಲ್ಲಿ ಕೆಳಗಾಕಿ ಮಾತನಾಡುವುದು ತೀರ ಸಾಮಾನ್ಯ ಎಂದಿದ್ದಾರೆ.

ಪಂದ್ಯ ಮುಗಿದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೌಫ್, "ಪಾಕಿಸ್ತಾನದಲ್ಲಿ ಆಟಗಾರರನ್ನು ಟೀಕಿಸುವುದು ತೀರ ಸಾಮಾನ್ಯ ಸಂಗತಿ. ನಮ್ಮಲ್ಲಿ ಯುವ ಆಟಗಾರರಿಗೆ ಹೆಚ್ಚು ಅವಕಾಶ ಕಲ್ಪಿಸಿಕೊಡಲಾಗಿದೆ. ನೀವು ಉಳಿದ ತಂಡಗಳನ್ನು ನೋಡಿದರೆ, ಪಾಕಿಸ್ತಾನದಲ್ಲಿ ಯುವ ಕ್ರಿಕೆಟಿಗರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ" ಎಂದರು.

"ಆಟಗಾರರಿಗೆ 10ರಿಂದ 15 ಪಂದ್ಯಗಳನ್ನು ನೀಡಲಾಗುತ್ತದೆ. ಮೊದಲು ನೀವು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪ್ರವೇಶಿಸಿದಾಗ ಭಾರೀ ಶ್ರಮ ಪಟ್ಟಿರುತ್ತೀರಿ. ಆದರೆ, ಇಲ್ಲಿ ಅದೆಲ್ಲ ಮಾಯ. ಅದ್ಯಾವುದು ಲೆಕ್ಕಕ್ಕೆ ಬರುವುದಿಲ್ಲ. ಪಾಕಿಸ್ತಾನದಲ್ಲಿ ಇಂತಹ ಟೀಕೆಗಳು ಈಗ ತೀರ ಸಾಮಾನ್ಯವಾಗಿದೆ. ನಾವು ಸೋಲುವುದನ್ನು ನೋಡಲು ಕೆಲವರು ಕುತೂಹಲದಿಂದ ಕಾಯುತ್ತಿರುತ್ತಾರೆ" ಎಂದು ರೌಫ್ ಹೇಳಿದ್ದಾರೆ,(ಏಜೆನ್ಸೀಸ್).