ಕ್ರೀಡೆ

ಇದು ನಮ್ಮ ಪ್ರತಿಷ್ಠೆ, ಯಾವುದೇ ಕಾರಣಕ್ಕೂ ಟೂರ್ನಿ ಹೈಬ್ರಿಡ್​ ಮಾದರಿಯಲ್ಲಿ ನಡೆಯಲ್ಲ; Champions Trophy ವಿಚಾರವಾಗಿ ಪಾಕ್​ ಮೊಂಡಾಟ​

ನವದೆಹಲಿ: 2025ರ ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ನಡೆಯಲಿರುವ  ಚಾಂಪಿಯನ್ಸ್​ ಟ್ರೋಫಿಗೆ (Champions Trophy) ಸಂಬಂಧಿಸಿದ ವಿಚಾರಗಳು ದಿನ ಕಳೆದಂತೆ ಕಗ್ಗಂಟಾಗುತ್ತಿದ್ದು, ಭಾರತ ಹಾಗೂ ಪಾಕಿಸ್ತಾನ ನಡುವಿನ ಕಿತ್ತಾಟಕ್ಕೆ ಹೆಚ್ಚು ಸದ್ದು ಮಾಡುತ್ತಿದ್ದು, ಈವರೆಗೆ ಯಾವುದೇ ಙರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ. ಭದ್ರತೆಯ ಕಾರಣ (Security Reasons) ನೀಡಿ ಭಾರತ ಈಗಾಗಲೇ ಟೂರ್ನಿಯಿಂದ ಹಿಂದೆ ಸರಿಯುವುದಾಗಿ ಹೇಳಿದ್ದು, ಹೈಬ್ರಿಡ್​ ಮಾದರಿಯಲ್ಲಿ (Hybrid Model) ಟೂರ್ನಿ ನಡೆಸಿದರೆ ಮಾತ್ರ ಭಾಗಿಯಾಗುವುದಾಗಿ ಹೇಳಿದೆ. ಆದರೆ, ಪಾಕಿಸ್ತಾನ ತನ್ನ ನೆಲದಲ್ಲಿ ಭಾರತ ಆಡಬೇಕೆಂದು ಹಠ ಹಿಡಿದಿದ್ದು, ಭಾರತ ಮತ್ತು ಪಾಕಿಸ್ತಾನ ನಡುವಿ ಕಿತ್ತಾಟದಿಂದಾಗಿ ಐಸಿಸಿ ಈವರೆಗೆ ವೇಳಾಪಟ್ಟಿಯನ್ನು ಪ್ರಕಟಿಸಿಲ್ಲ.

ಭಾರತ (India) ಹಾಗೂ ಪಾಕಿಸ್ತಾನ (Pakistan) ನಡುವಿನ ಕಿತ್ತಾಟದಿಂದಲೇ ಚಾಂಪಿಯನ್ಸ್​ ಟ್ರೋಫಿ (Champions Trophy) ಆರಂಭವಾಗುವುದಕ್ಕೆ ತಿಂಗಳುಗಳು ಬಾಕಿ ಉಳಿದಿದ್ದು, ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಬಿಕ್ಕಟ್ಟಿನಿಂದಾಗಿ ಐಸಿಸಿ (ICC) ನಲುಗಿ ಹೋಗಿದೆ. ಇದೀಗ ಮಹತ್ವದ ಬೆಳವಣಿಗೆಯಲ್ಲಿ ಪಾಕಿಸ್ತಾನ ಭಾರತಕ್ಕೆ ನಿಲುವಿಗೆ ವಿರೋಧ ವ್ಯಕ್ತಪಡಿಸಿದ್ದು, ಟೂರ್ನಿಯನ್ನು ಹೈಬ್ರಿಡ್​ ಮಾದರಿಯಲ್ಲಿ (Hybrid Model) ನಡೆಸುವುದಿಲ್ಲ ಎಂದು ಹೇಳಿದೆ. ಈ ಸಂಬಂಧ ಪಿಸಿಬಿ ಅಧ್ಯಕ್ಷ ಮೊಹ್ಸಿನ್​ ನಖ್ವಿ (Mohsin Kaqvi) ಮಾತನಾಡಿದ್ದಾರೆ.

ಲಾಹೋrffn​ ಗಡಾಫಿ ಸ್ಟೇಡಿಯಂನಲ್ಲಿ ಈ ಬಗ್ಗೆ ಮಾತನಾಡಿದ ನಖ್ವಿ, ಪಾಕಿಸ್ತಾನಕ್ಕೆ ಪ್ರಯಾಣಿಸದಿರುವ ಬಗ್ಗೆ ಬಿಸಿಸಿಐಯಿಂದ ಸ್ಪಷ್ಟನೆ ಕೇಳುವಂತೆ ನಾವು ಐಸಿಸಿಗೆ ಪತ್ರ ಬರೆದಿದ್ದೇವೆ. ಇದೀಗ ನಾವು ಐಸಿಸಿಯ ಉತ್ತರಕ್ಕಾಗಿ ಕಾಯುತ್ತಿದ್ದೇವೆ. ಐಸಿಸಿಯಿಂದ ಉತ್ತರ ಬಂದ ನಂತರವೇ ನಾವು ಮುಂದಿನ ಕ್ರಮವನ್ನು ತೆಗೆದುಕೊಳ್ಳುತ್ತೇವೆ. ಜೊತೆಗೆ ಹೈಬ್ರಿಡ್ ಮಾದರಿಯಲ್ಲಿ ಪಂದ್ಯಾವಳಿಯನ್ನು ಆಯೋಜಿಸಲು ಪಾಕಿಸ್ತಾನ ಸಿದ್ದವಾಗಿಲ್ಲ ಎಂದು ಹೇಳಿದ್ದಾರೆ.

ಚಾಂಪಿಯನ್ಸ್ ಟ್ರೋಫಿಗೆ (Champions Trophy) ಅರ್ಹತೆ ಪಡೆದ ಇತರ ತಂಡಗಳು ಪಾಕಿಸ್ತಾನಕ್ಕೆ ಬರಲು ಸಿದ್ಧವಾಗಿವೆ. ಯಾವ ತಂಡಕ್ಕೂ ಪಾಕಿಸ್ತಾನಕ್ಕೆ ಬರಲು ಆತಂಕವಿಲ್ಲ. ಭಾರತಕ್ಕೆ (India) ಯಾವುದೇ ರೀತಿಯ ಸಮಸ್ಯೆ ಇದ್ದಲ್ಲಿ ನಾವು ಅದನ್ನು ಪರಿಹರಿಸುತ್ತೇವೆ. ಭಾರತವು ಪಾಕಿಸ್ತಾನಕ್ಕೆ (Pakistan) ಭೇಟಿ ನೀಡದಿರಲು ಯಾವುದೇ ಕಾರಣವಿಲ್ಲ ಎಂದು ನಾನು ಭಾವಿಸುತ್ತೇನೆ. ಹೀಗಾಗಿ ಚಾಂಪಿಯನ್ಸ್ ಟ್ರೋಫಿಯನ್ನು (Champions Trophy) ಆಡಲು ಎಲ್ಲ ತಂಡಗಳು ಪಾಕಿಸ್ತಾನಕ್ಕೆ ಬರುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.

ಕ್ರೀಡೆ ಮತ್ತು ರಾಜಕೀಯ ಎರಡು ವಿಭಿನ್ನ ವಿಷಯಗಳಾಗಿದ್ದು, ದೇಶವು ಇದನ್ನು ಒಟ್ಟಿಗೆ ನೋಡಬಾರದು ಎಂಬುದು ನನ್ನ ಭಾವನೆ. ಐಸಿಸಿ ವೇಳಾಪಟ್ಟಿಯನ್ನು ಪ್ರಕಟಿಸಬೇಕಾಗಿದ್ದು, ಶೀಘ್ರದಲ್ಲೇ ಐಸಿಸಿ ಈ ಕೆಲಸವನ್ನು ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ ಇದರಿಂದ ನಾವು ಸಿದ್ಧತೆಗಳನ್ನು ಅಂತಿಮಗೊಳಿಸಬಹುದು. ಪಂದ್ಯಾವಳಿಯಲ್ಲಿ ಬಾಗವಹಿಸುವುದರ ಬಗ್ಗೆ ಬಿಸಿಸಿಐ ಬಳಿ ಏನೇ ಪ್ರಶ್ನೆಗಳಿದ್ದರೂ, ನಾವು ಅದನ್ನು ಲಿಖಿತವಾಗಿ ಕೇಳಿದ್ದೇವೆ.

ಇಡೀ ಟೂರ್ನಿ (Champions Trophy) ಪಾಕಿಸ್ತಾನದಲ್ಲೇ ನಡೆಯಲಿದೆ ಎಂಬ ಭರವಸೆ ನನಗಿದೆ. ಇದು ನಮ್ಮ ಪ್ರತಿಷ್ಠಯಾಗಿದ್ದು, ದೇಶದ ಗೌರವಕ್ಕೆ ಮೊದಲ ಸ್ಥಾನ, ಭವಿಷ್ಯದಲ್ಲಿ ಏನಾಗುತ್ತದೆ ಎಂದು ನೀವೇ ನೋಡುತ್ತೀರಿ. ನಮ್ಮ ನಿಲುವು ತುಂಬಾ ಸ್ಪಷ್ಟವಾಗಿದೆ, ನಾವು ಈ ಹಿಂದೆಯೂ ಈ ಬಗ್ಗೆ ಸ್ಪಷ್ಟಪಡಿಸಿದ್ದೇವೆ ಎಂದು ಪಿಸಿಬಿ ಅಧ್ಯಕ್ಷ ಮೊಹ್ಸಿನ್​ ನಖ್ವಿ (Mohsin Naqvi) ಹೇಳಿದ್ದಾರೆ.