ಕ್ರೀಡೆ

ಭಾರತಕ್ಕೆ ಈಗ ಡ್ರಾವಿಡ್​ ನೆನಪಾಗ್ತಿರಬೇಕು; ಗೌತಿ ಪ್ಲ್ಯಾನಿಂಗ್ ವಿರುದ್ಧ ಕಿಡಿಕಾರಿದ ಪಾಕ್​ ಮಾಜಿ ಕ್ರಿಕೆಟಿಗ | Pak

ಲಾಹೋರ್​: ಇತ್ತೀಚೆಗಷ್ಟೇ ನ್ಯೂಜಿಲೆಂಡ್ ವಿರುದ್ಧ ಮೂರು ಪಂದ್ಯಗಳ ಟೆಸ್ಟ್​ ಸರಣಿಯನ್ನು ಹೀನಾಯವಾಗಿ ಸೋತ ಟೀಮ್ ಇಂಡಿಯಾ, ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಪಟ್ಟಿಯಲ್ಲಿ ಈಗಿದ್ದ ತನ್ನ ಸ್ಥಾನದಿಂದ ಕುಸಿತ ಕಂಡಿದ್ದು, ಅಗ್ರಸ್ಥಾನವನ್ನು ಆಸ್ಟ್ರೇಲಿಯಾಗೆ ಬಿಟ್ಟುಕೊಟ್ಟಿದೆ. ರಿಷಭ್ ಪಂತ್​ ಬಿಟ್ಟರೆ, ನಾಯಕ ರೋಹಿತ್ ಶರ್ಮ ಮತ್ತು ವಿರಾಟ್​ ಕೊಹ್ಲಿ ತಮ್ಮ ಬ್ಯಾಟ್​ನಿಂದ ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ನೀಡಲಿಲ್ಲ ಎಂಬುದು ಕ್ರಿಕೆಟ್​ ಅಭಿಮಾನಿಗಳು ಹಾಗೂ ತಂಡದ ಬೇಸರಕ್ಕೆ ಕಾರಣವಾಗಿದೆ. ಇನ್ನು ಟೆಸ್ಟ್​ ಪಂದ್ಯಗಳಲ್ಲಿ ಭಾರತದ ಹೀನಾಯ ಸೋಲಿಗೆ ಹೆಡ್ ಕೋಚ್​ ಗೌತಮ್ ಗಂಭೀರ್​ ಅವರ ಪ್ಲ್ಯಾನಿಂಗ್​ಗಳೇ ಕಾರಣ ಎಂದು ಪಾಕಿಸ್ತಾನದ ಮಾಜಿ ಆಟಗಾರ (Pak Former Cricketer) ಟೀಕಿಸಿ, ಮಾತನಾಡಿದ್ದಾರೆ.

ಐಪಿಎಲ್​ನಲ್ಲಿ ಕೋಲ್ಕತ ನೈಟ್​ ರೈಡರ್ಸ್ ತಂಡದ ಮೆಂಟರ್​ ಆಗಿರುವ ಗೌತಮ್ ಗಂಭೀರ್, ಇಲ್ಲಿಯೂ ಸಹ ಅದೇ ಪ್ಲ್ಯಾನಿಂಗ್ ಮಾಡಲು ಹೋಗಿ ಮುಗ್ಗರಿಸಿದ್ದಾರೆ ಎಂದು ಟೀಕಿಸಿರುವ ಬಸಿತ್​ ಅಲಿ, ​ "ಐಪಿಎಲ್​ ಲೀಗ್​ನಲ್ಲಿ ಆಡಿದಂತೆ ಟೆಸ್ಟ್​ ಪಂದ್ಯಗಳಲ್ಲಿ ಆಡಲು ಸಾಧ್ಯವಿಲ್ಲ. ಐದು ದಿನಗಳ ಆಟವನ್ನು ಐದು ದಿನದಂತೆಯೇ ಆಡಬೇಕು. ಟೆಸ್ಟ್​ ಹಾಗೂ ಐಪಿಎಲ್​ಗೆ ಬಹಳ ದೊಡ್ಡ ವ್ಯತ್ಯಾಸವಿದೆ. ಟೆಸ್ಟ್​ ಕ್ರಿಕೆಟ್​ ಅನ್ನು ಟಿ20 ಸಂಪೂರ್ಣವಾಗಿ ನಾಶಗೊಳಿಸುತ್ತದೆ" ಎಂದಿದ್ದಾರೆ.

ಉತ್ತಮ ಫಲಿತಾಂಶ ತಂದುಕೊಡಲಿಲ್ಲ

"ಭಾರತಕ್ಕೆ ಈಗ ರಾಹುಲ್ ದ್ರಾವಿಡ್​ ಅವರ ನೆನಪು ಕಾಡ್ತಿದೆ ಅನಿಸುತ್ತಿದೆ. ಮುಂಬೈನಲ್ಲಿ ಸ್ಪಿನ್ನಿಂಗ್ ಟ್ರ್ಯಾಕ್ ಟೀಮ್ ಇಂಡಿಯಾ ಆಟಗಾರರಿಗೆ ಉತ್ತಮ ಫಲಿತಾಂಶ ತಂದುಕೊಡಲಿಲ್ಲ. ಈಗ ನೀವು ಆಸ್ಟ್ರೇಲಿಯಾದಲ್ಲಿ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದ್ದೀರಿ. ನ್ಯೂಜಿಲೆಂಡ್​ ವಿರುದ್ಧದ ಸೋಲು ಆಟಗಾರರ ಆತ್ಮವಿಶ್ವಾಸಕ್ಕೆ ಪೆಟ್ಟು ಬಿದ್ದಿದೆ" ಎಂದು ಗೌತಮ್ ಗಂಭೀರ್ ಅವರ​ ಐಪಿಎಲ್​ ಪ್ಲ್ಯಾನಿಂಗ್ ಕಿವೀಸ್ ವಿರುದ್ಧದ ಸೋಲಿಗೆ ಕಾರಣವಾಯಿತು ಎಂದು ಬಸಿತ್​ ಟೀಕಿಸಿದ್ದಾರೆ,(ಏಜೆನ್ಸೀಸ್). ​