ನವದೆಹಲಿ: ಮುಂಬರುವ ಇಂಗ್ಲೆಂಡ್ ಪ್ರವಾಸಕ್ಕೆ ಮೀಸಲು ಆಟಗಾರನಾಗಿ ಆಯ್ಕೆಯಾಗಿರುವ ಕರ್ನಾಟಕದ ವೇಗದ ಬೌಲರ್ ಪ್ರಸಿದ್ಧ ಕೃಷ್ಣ ಹಾಗೂ ಅನುಭವಿ ಸ್ಪಿನ್ನರ್ ಅಮಿತ್ ಮಿಶ್ರಾ ಕೋವಿಡ್ನಿಂದ ಚೇತರಿಸಿಕೊಂಡಿದ್ದಾರೆ. ಇದೇ ತಿಂಗಳ ಆರಂಭದಲ್ಲಿ 14ನೇ ಐಪಿಎಲ್ ಅನಿದಿರ್ಷ್ಟಾವಧಿವರೆಗೆ ಮುಂದೂಡಿಕೆಯಾದ ಬೆನ್ನಲ್ಲೇ ಪ್ರಸಿದ್ಧ ಕೃಷ್ಣ ಹಾಗೂ ಅಮಿತ್ ಮಿಶ್ರಾಗೆ ಕೋವಿಡ್-19 ಕಾಣಿಸಿಕೊಂಡಿತ್ತು. ಅಮಿತ್ ಮಿಶ್ರಾಗೆ ಮೇ 4 ರಂದು ಹಾಗೂ ಮೇ 8 ರಂದು ಪ್ರಸಿದ್ಧ ಕೃಷ್ಣಗೆ ಕರೊನಾ ವೈರಸ್ ಕಾಣಿಸಿಕೊಂಡಿತ್ತು. ಪ್ರಸಿದ್ಧ ಕೃಷ್ಣ ಪೂರ್ಣ ಪ್ರಮಾಣದಲ್ಲಿ ಕೋವಿಡ್ನಿಂದ ಚೇತರಿಸಿಕೊಂಡಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಮತ್ತೊಂದೆಡೆ, ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸ್ಪಿನ್ನರ್ ಅಮಿತ್ ಮಿಶ್ರಾ ಕೋವಿಡ್ನಿಂದ ಚೇತರಿಕೆ ಕಂಡಿರುವ ಕುರಿತು ಟ್ವಿಟರ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಅಲ್ಲದೆ, ಕೋವಿಡ್ ವಾರಿಯರ್ಸ್ಗಳಿಗೆ ಧನ್ಯವಾದ ಅಪಿರ್ಸಿದ್ದಾರೆ. ಪ್ರಸಿದ್ಧ ಕೃಷ್ಣ, ಕೋವಿಡ್ ಸೋಂಕು ಕಾಣಿಸಿಕೊಂಡ ಕೆಕೆಆರ್ ತಂಡದ ನಾಲ್ಕನೇ ಆಟಗಾರನಾಗಿದ್ದರು. ಇದಕ್ಕೂ ಮೊದಲು ವರುಣ್ ಚಕ್ರವತಿರ್, ಸಂದೀಪ್ ವಾರಿಯರ್, ಟಿಮ್ ಸೀರ್ಟ್ಗೂ ಕೋವಿಡ್ ಕಾಣಿಸಿಕೊಂಡಿತ್ತು. ಲೀಗ್ ಮುಂದೂಡಿಕೆಯಾದ ಬಳಿಕ ಬೆಂಗಳೂರಿಗೆ ಆಗಮಿಸಿದ ಪ್ರಸಿದ್ಧ ಕೃಷ್ಣಗೆ ಕೋವಿಡ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮನೆಯಲ್ಲೇ ಐಸೋಲೇಷನ್ಗೆ ಒಳಗಾಗಿದ್ದರು.
ಪ್ರಸಿದ್ಧ ಪೂರ್ಣ ಪ್ರಮಾಣದಲ್ಲಿ ಚೇತರಿಕೆ ಕಂಡಿರುವ ಹಿನ್ನೆಲೆಯಲ್ಲಿ ಇಂಗ್ಲೆಂಡ್ಗೆ ತೆರಳಲಿರುವ ರಾಷ್ಟ್ರೀಯ ತಂಡವನ್ನು ಕೂಡಿಕೊಳ್ಳಲು ಬುಧವಾರ ಮುಂಬೈಗೆ ಪ್ರಯಾಣಿಸಲಿದ್ದಾರೆ. ಮುಂಬೈನಲ್ಲಿ 14 ದಿನಗಳ ಕಾಲ ಆಟಗಾರರು ಕ್ವಾರಂಟೈನ್ಗೆ ಒಳಗಾಗಲಿದ್ದು, ಜೂನ್ 2ರಂದು ಇಂಗ್ಲೆಂಡ್ನತ್ತ ಪ್ರಯಾಣ ಬೆಳೆಸಲಿದೆ. ವಿರಾಟ್ ಕೊಹ್ಲಿ ಸಾರಥ್ಯದ ಭಾರತ ತಂಡ ಜೂನ್ 18 ರಿಂದ 22ರವರೆಗೆ ಸೌಥಾಂಪ್ಟನ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಚೊಚ್ಚಲ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಪಂದ್ಯವನ್ನಾಡಲಿದೆ. ಬಳಿಕ ಆಗಸ್ಟ್ ತಿಂಗಳಲ್ಲಿ ಆತಿಥೇಯ ಇಂಗ್ಲೆಂಡ್ ಎದುರು 5 ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ.