ಕ್ರೀಡೆ

ಇದು ಸಾಧ್ಯವಾಗಿದ್ದು ಕೇವಲ 'ರನ್​ ಮಷಿನ್'​ನಿಂದ ಮಾತ್ರ! ಕೊಹ್ಲಿ ಹೊಗಳಿದ ಮಾಜಿ ಕ್ರಿಕೆಟಿಗ | Ranji Trophy

Virat Kohli: ಪ್ರಸಕ್ತ ನಡೆಯುತ್ತಿರುವ ರಣಜಿ ಟ್ರೋಫಿ (Ranji Trophy) ಟೂರ್ನಿಯಲ್ಲಿ 12 ವರ್ಷಗಳ ಬಳಿಕ ಇಂದು ಡೆಲ್ಲಿ ತಂಡದ ಪರ ಅಖಾಡಕ್ಕಿಳಿದ ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್​, ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ, ದೇಶಿಯ ಕ್ರಿಕೆಟ್​ನಲ್ಲಿಯೂ ತಮ್ಮ ಕಳಪೆ ಫಾರ್ಮ್​ನ ಮುಂದುವರಿಸಿದ್ದಾರೆ. ಇದು ಸ್ಟೇಡಿಯಂನಲ್ಲಿ ಸೇರಿದ್ದ ಅಪಾರ ಸಂಖ್ಯೆಯ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿತು. ತಮ್ಮ ನೆಚ್ಚಿನ ಕ್ರಿಕೆಟಿಗ ಮೈದಾನದಲ್ಲಿ ಅಬ್ಬರಿಸುವುದನ್ನು ನೋಡಲು ನಿರೀಕ್ಷೆಗೂ ಮೀರಿದ ಸಂಖ್ಯೆಯಲ್ಲಿ ಸೇರಿದ್ದ ಕೊಹ್ಲಿ ಫ್ಯಾನ್ಸ್​ಗಳಿಗೆ ಅವರ ವಿಕೆಟ್​ ಪತನವಾಗಿದ್ದು, ಭಾರೀ ಬೇಸರ ಉಂಟುಮಾಡಿತು.

ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ದೆಹಲಿ ಮತ್ತು ರೈಲ್ವೇಸ್ ನಡುವಿನ ರಣಜಿ ಟ್ರೋಫಿ ಪಂದ್ಯದಲ್ಲಿ 12 ವರ್ಷಗಳ ಬಳಿಕ ವಿರಾಟ್​ ಅಖಾಡಕ್ಕಿಳಿಯುತ್ತಿರುವ ಸಂಗತಿ ತಿಳಿದ ಅವರ ಅಭಿಮಾನಿಗಳು, ಬರೋಬ್ಬರಿ 15,000ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಸ್ಟೇಡಿಯಂ ಆವರಿಸಿಕೊಂಡಿದ್ದರು. ಆದರೆ, ವಿರಾಟ್​ ಕೇವಲ ಆರು ರನ್​ಗೆ ಬೋಲ್ಡ್​ ಔಟ್​ ಆಗಿದ್ದು ಅಭಿಮಾನಿಗಳ ಕಾತರತೆ, ನಿರೀಕ್ಷೆಗಳನ್ನು ಹುಸಿ ಮಾಡಿತು. ಇನ್ನು ಮುಂದುವರೆದ ಕೊಹ್ಲಿ ಕಳಪೆ ಫಾರ್ಮ್ ಬಗ್ಗೆ ಟೀಕೆಗಳು ವ್ಯಕ್ತವಾಗುತ್ತಿದ್ದರೆ, ಇತ್ತ ಮಾಜಿ ಹಿರಿಯ ಆಟಗಾರ ಆಕಾಶ್​ ಚೋಪ್ರಾ ಕೊಹ್ಲಿಯನ್ನು ಮೆಚ್ಚಿ ಮಾತನಾಡಿದ್ದಾರೆ.

“ವಿರಾಟ್​ ಕ್ರಿಕೆಟ್‌ನ ಅತಿದೊಡ್ಡ ಶಕ್ತಿ. ಏಕಾಂಗಿಯಾಗಿ ಅಭಿಮಾನಿಗಳನ್ನು ಕ್ರೀಡಾಂಗಣಕ್ಕೆ ಕರೆತರುವ ಶಕ್ತಿ ಅವರಿಗಿದೆ. ಮುಂಬೈ, ಜಮ್ಮು ಮತ್ತು ಕಾಶ್ಮೀರ ವಿರುದ್ಧ ಆಡಿದ ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್ ಮತ್ತು ಶ್ರೇಯಸ್ ಅಯ್ಯರ್​ರನ್ನು ನೋಡಲು ಸ್ಟೇಡಿಯಂಗಳಲ್ಲಿ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಲಿಲ್ಲ. ಆಡಿದ ಅಷ್ಟು ಪಂದ್ಯಗಳಲ್ಲಿಯೂ ಅದು ಸಾಧ್ಯವಾಗಲಿಲ್ಲ, ಆದರೆ, ಕೇವಲ ಮೊದಲ ಪಂದ್ಯದಲ್ಲೇ ವಿರಾಟ್ ಸಹಸ್ರಾರು ಸಂಖ್ಯೆಯಲ್ಲಿ ತಮ್ಮ ಅಭಿಮಾನಿಗಳನ್ನು ಸ್ಟೇಡಿಯಂಗೆ ಕರೆಸಿದ್ದಾರೆ. ಇವರಾರಿಂದಲೂ ಆಗದ ಕೆಲಸ ವಿರಾಟ್​ರಿಂದ ಆಗಿರುವುದು ಶ್ಲಾಘನೀಯ" ಎಂದರು.

"ಈ ಬಾರಿ ವಿರಾಟ್​ ಆಫ್ ಸ್ಟಂಪ್ ಹೊರಗೆ ಔಟ್ ಆಗಲಿಲ್ಲ. ಬದಲಿಗೆ ಬೋಲ್ಡ್ ಆಗಿ ಪೆವಿಲಿಯನ್​ ಹಿಡಿದರು" ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ,(ಏಜೆನ್ಸೀಸ್).