ಕ್ರೀಡೆ

ವೇಗದ ಬೌಲರ್​ ಆಗಬೇಕಾಗಿದ್ದ ಕನ್ನಡಿಗ ಮನು ಈಗ ಜಾವೆಲಿನ್​ ಥ್ರೋ ತಾರೆ!

ಬೆಂಗಳೂರು: ಹಾಸನ ಜಿಲ್ಲೆಯ ಬೇಲೂರಿನ ಕಾಫಿ ಬೆಳೆಗಾರರ ಪುತ್ರ ಮನು ಡಿ.ಪಿ. ವಿಶ್ವ ಅಥ್ಲೆಟಿಕ್ಸ್​ ಚಾಂಪಿಯನ್​ಷಿಪ್​ನ ಜಾವೆಲಿನ್​ ಸ್ಪರ್ಧೆಯಲ್ಲಿ 6ನೇ ಸ್ಥಾನ ಸಂಪಾದಿಸುವ ಮೂಲಕ ಗಮನಸೆಳೆದಿದ್ದಾರೆ. ನೀರಜ್​ ಚೋಪ್ರಾ ಸ್ವರ್ಣ ಪದಕ ಗೆಲುವಿನ ಸಾಧನೆ ನಡುವೆ ಭಾರತದ ಮತ್ತಿಬ್ಬರು ಸ್ಪರ್ಧಿಗಳಾದ ಒಡಿಶಾದ ಕಿಶೋರ್​ ಜೇನಾ (84.77 ಮೀ.) ಮತ್ತು ಕನ್ನಡಿಗ ಮನು ಡಿ.ಪಿ. (84.14 ಮೀ) ಪದಕ ವಂಚಿತರಾದರೂ, ಕ್ರಮವಾಗಿ 5, 6ನೇ ಸಮಾಧಾನ ಕಂಡರು. ಇದರೊಂದಿಗೆ ಅಗ್ರ 6ರೊಳಗೆ ಭಾರತದ ಮೂವರು ಸ್ಪರ್ಧಿಗಳು ಕಾಣಿಸಿಕೊಂಡ ವಿಶೇಷ ಮೈಲಿಗಲ್ಲು ದಾಖಲಾಯಿತು.

ಬಾಲ್ಯದಲ್ಲಿ ಕ್ರಿಕೆಟಿಗನಾಗುವ ಕನಸು ಕಂಡಿದ್ದ ಮನು, ವೇಗದ ಬೌಲರ್​ ಆಗಿದ್ದರು. ಆದರೆ ಶಾಲಾ ದಿನಗಳಲ್ಲಿ ದೈಹಿಕ ಶಿಕ್ಷಕರ ಸಲಹೆಯ ಮೇರೆಗೆ ಜಾವೆಲಿನ್​ ಎಸೆತವನ್ನು ಪ್ರಯತ್ನಿಸಿದರು. ಬಡತನದ ಕಾರಣ ಜಾವೆಲಿನ್​ ಕೊಂಡುಕೊಳ್ಳಲು ಸಾಧ್ಯವಾಗದೆ, ಬಿದಿರಿನಲ್ಲೇ ಈಟಿಗಳನ್ನು ತಯಾರಿಸಿ ಅಭ್ಯಾಸ ಮಾಡಿದ್ದರು. 2019ರ ಖೇಲೋ ಇಂಡಿಯಾ ಯೂತ್​ ಗೇಮ್ಸ್​ನಲ್ಲಿ ರಾಜ್ಯದ ಮಾಜಿ ಜಾವೆಲಿನ್​ ಎಸೆತಗಾರ ಕಾಶಿನಾಥ್​ ನಾಯ್ಕ್​ ಕಣ್ಣಿಗೆ ಬಿದ್ದರು. ಬಳಿಕ 19ನೇ ವಯಸ್ಸಿನಲ್ಲಿ ಪುಣೆಯ ಸೇನಾ ಕ್ರೀಡಾ ಇನ್​ಸ್ಟಿಟ್ಯೂಟ್​ಗೆ ಸೇರಿಸಲ್ಪಟ್ಟ ಮನು, ನಂತರದಲ್ಲಿ ಕಾಶಿನಾಥ್​ರಿಂದ ವೃತ್ತಿಪರ ತರಬೇತಿಯನ್ನು ಪಡೆದುಕೊಂಡರು.

ಮೊದಲಿಗೆ 70 ಕೆಜಿ ಇದ್ದ ಮನು, ಸರಿಯಾದ ಡಯೆಟ್​ನಿಂದ 86 ಕೆಜಿಗೆ ದೇಹತೂಕ ಏರಿಸಿಕೊಂಡ ಬಳಿಕ ಅವರ ಜಾವೆಲಿನ್​ ಎಸೆತವೂ 65ರಿಂದ 75 ಮೀ.ಗೆ ಏರಿಕೆ ಕಂಡಿತು. ಬುಡಾಪೆಸ್ಟ್​ನಲ್ಲಿ 23 ವರ್ಷದ ಮನು ಕೊನೇ ಯತ್ನದಲ್ಲಿ ಗರಿಷ್ಠ 84.14 ಮೀ. ಎಸೆದರು. ಈ ವೇಳೆ ಮನು ಸರಿಯಾದ ಸಮಯದಲ್ಲಿ ಭರ್ಜಿ ಬಿಟ್ಟಿದ್ದರೆ, ಇನ್ನೂ 2 ಮೀಟರ್​ ದೂರ ಹೋಗುತ್ತಿತ್ತು ಮತ್ತು ಪದಕ ಗೆಲ್ಲುವ ಅವಕಾಶವೂ ಇರುತಿತ್ತು ಎಂದು ಕಾಶಿನಾಥ್​ ನಾಯ್ಕ್​ ವಿವರಿಸಿದ್ದಾರೆ.