ಕ್ರೀಡೆ

ಇಂದಿನಿಂದ ಕ್ರಿಕೆಟ್​ ಮಹಾಯುದ್ಧ; ಗೆದ್ದು ಬಾ ಭಾರತ…

ಕ್ರಿಕೆಟ್​ ಜಗತ್ತಿನ ಮಹಾಸಮರ ಏಕದಿನ ವಿಶ್ವಕಪ್​ಗೆ ಗುರುವಾರ ಚಾಲನೆ ಸಿಗಲಿದೆ. ಹಾಲಿ ಚಾಂಪಿಯನ್​ ಇಂಗ್ಲೆಂಡ್​ ಮತ್ತು ಹಾಲಿ ರನ್ನರ್​ಅಪ್​ ನ್ಯೂಜಿಲೆಂಡ್​ ತಂಡಗಳ ನಡುವೆ ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದೊಂದಿಗೆ 13ನೇ ಆವೃತ್ತಿ ಶುರುವಾಗಲಿದೆ. ದೇಶದ 10 ನಗರಗಳಲ್ಲಿ 46 ದಿನಗಳ ಕಾಲ 48 ಪಂದ್ಯಗಳು ನಡೆಯಲಿವೆ. ಆತಿಥೇಯ ಭಾರತ ತಂಡ ಭಾನುವಾರ ಚೆನ್ನೈನಲ್ಲಿ ಆಸ್ಟ್ರೆಲಿಯಾ ತಂಡವನ್ನು ಎದುರಿಸುವ ಮೂಲಕ ಅಭಿಯಾನ ಆರಂಭಿಸಲಿದೆ.

ಅಹಮದಾಬಾದ್​: ಭಾರತದಲ್ಲಿ ಈಗ ಹಬ್ಬಗಳ ಪರ್ವಕಾಲ. ಒಂದರ ಹಿಂದೆ ಇನ್ನೊಂದು ಹಬ್ಬ ಬರುವ ಸಮಯವಿದು. ಇದರ ನಡುವೆ ಕ್ರಿಕೆಟ್​ ಲೋಕದ ಮಹಾಹಬ್ಬವೂ ಭಾರತದಲ್ಲಿ ಆಯೋಜನೆಗೊಂಡಿದೆ. ನವರಾತ್ರಿಗೆ ಮುನ್ನ ಆರಂಭಗೊಂಡು ದೀಪಾವಳಿಯ ನಂತರ ಮುಕ್ತಾಯಗೊಳ್ಳುವ ಐಸಿಸಿ ಏಕದಿನ ಕ್ರಿಕೆಟ್​ ವಿಶ್ವಕಪ್​ 13ನೇ ಆವೃತ್ತಿಯನ್ನು ಸಂಭ್ರಮಿಸಲು ವೇದಿಕೆ ಸಜ್ಜಾಗಿದೆ. ವಿಕೆಟ್​ಗಳ ದಾಂಡಿಯಾ, ಸಿಕ್ಸರ್​-ಬೌಂಡರಿಗಳ ಪಟಾಕಿ ಕ್ರಿಕೆಟ್​ ಪ್ರೇಮಿಗಳ ಹಬ್ಬದ ಹರ್ಷವನ್ನು ಇನ್ನಷ್ಟು ಹೆಚ್ಚಿಸಲಿದೆ. ಜಾಗತಿಕ ಕ್ರಿಕೆಟ್​ನಲ್ಲಿ ಶ್ರೀಮಂತ ದೇಶವಾಗಿ ಬೆಳೆದಿರುವ ಭಾರತ 4ನೇ ಸಲ ಮತ್ತು ಮೊದಲ ಬಾರಿ ಏಕಾಂಗಿಯಾಗಿ ಟೂರ್ನಿಯ ಆತಿಥ್ಯ ವಹಿಸಿಕೊಳ್ಳುವ ಸವಾಲಿಗೆ ಸನ್ನದ್ಧಗೊಂಡಿದೆ.

ಭಾರತೀಯ ಕ್ರಿಕೆಟ್​ ಶ್ರೀಮಂತವಾಗಿ ಬೆಳೆಯಲು 1983ರ ವಿಶ್ವಕಪ್​ ಗೆಲುವು ಮತ್ತು 1987ರ ವಿಶ್ವಕಪ್​ ಆತಿಥ್ಯ ಪ್ರಮುಖ ಕಾರಣ. 2011ರಲ್ಲಿ ಇವೆರಡೂ ಸಾಧನೆ ಭಾರತದಲ್ಲಿ ಏಕಕಾಲದಲ್ಲಿ ದಾಖಲಾಗಿತ್ತು. 12 ವರ್ಷಗಳ ಬಳಿಕ ಅದನ್ನು ಪುನರಾವರ್ತಿಸುವ ಹಂಬಲದೊಂದಿಗೆ ಟೀಮ್​ ಇಂಡಿಯಾ ಸಜ್ಜಾಗಿದೆ. ಕಪಿಲ್​ ಡೆವಿಲ್ಸ್​ ಮತ್ತು ಎಂಎಸ್​ ಧೋನಿ ಬಳಗದ ಸಾಧನೆಯ ನಂತರ 1.40 ಕೋಟಿ ಭಾರತೀಯರ ನಿರೀಕ್ಷೆಯ ಭಾರ ಈಗ ರೋಹಿತ್​ ಶರ್ಮ ಬಳಗದ ಹೆಗಲೇರಿದೆ. ಇತ್ತೀಚೆಗೆ ಕಂಡ ಏಷ್ಯಾಕಪ್​ ಗೆಲುವು, ವಿಶ್ವ ನಂ.1 ಪಟ್ಟ ಮತ್ತು ಪ್ರಮುಖ ಆಟಗಾರರೆಲ್ಲ ಗಾಯದಿಂದ ಚೇತರಿಸಿಕೊಂಡು ಫಿಟ್​ ಆಗಿರುವುದರಿಂದ ಆತಿಥೇಯ ಭಾರತ ಹಾಟ್​ ಫೇವರಿಟ್​ ಪಟ್ಟದೊಂದಿಗೆ ಕಣಕ್ಕಿಳಿಯಲಿದೆ. ಆದರೆ, ಭಾರತದ 3ನೇ ವಿಶ್ವಕಪ್​ ಗೆಲುವಿನ ಹಾದಿ ಸುಲಭವಾಗಿಲ್ಲ.

ಎರಡು ಬಾರಿಯ ಚಾಂಪಿಯನ್​ ವೆಸ್ಟ್​ ಇಂಡೀಸ್​ ತಂಡವೇ ಈ ಬಾರಿ ಟೂರ್ನಿಗೆ ಅರ್ಹತೆ ಪಡೆದಿಲ್ಲವೆಂದರೆ ಪೈಪೋಟಿ ಎಷ್ಟರ ಮಟ್ಟಿಗೆ ನಿಕಟವಾಗಿರಬಹುದು ಎಂದು ಅಂದಾಜಿಸಬಹುದು. ಹಾಲಿ ಚಾಂಪಿಯನ್​ ಇಂಗ್ಲೆಂಡ್​ ಪ್ರಶಸ್ತಿ ಉಳಿಸಿಕೊಳ್ಳಲು ಕಾರ್ಯತಂತ್ರ ರೂಪಿಸಿದ್ದರೆ, ಆಸ್ಟ್ರೆಲಿಯಾ ಆರನೇ ಬಾರಿ ಪ್ರಶಸ್ತಿ ಗೆದ್ದು ಮತ್ತೆ ವಿಶ್ವ ಕ್ರಿಕೆಟ್​ನಲ್ಲಿ ಪ್ರಾಬಲ್ಯ ಸಾಧಿಸುವತ್ತ ದೃಷ್ಟಿನೆಟ್ಟಿದೆ. ಪಾಕಿಸ್ತಾನ ತಂಡ ಭಾರತದ ನೆಲದಲ್ಲಿ ವಿಶ್ವಕಪ್​ ಕನಸು ನನಸಾಗಿಸುವ ತವಕದಲ್ಲಿದ್ದರೆ, ನ್ಯೂಜಿಲೆಂಡ್​ ಸತತ 3ನೇ ಪ್ರಯತ್ನದಲ್ಲಾದರೂ ಟ್ರೋಫಿಗೆ ಮುತ್ತಿಡುವ ಹಂಬಲದಲ್ಲಿದೆ.

ದಕ್ಷಿಣ ಆಫ್ರಿಕಾ ಈ ಸಲವಾದರೂ ವಿಶ್ವಕಪ್​ ಒಲಿಸಿಕೊಳ್ಳುವ ಹುರುಪಿನಲ್ಲಿದೆ. ಶ್ರೀಲಂಕಾ ವಿಶ್ವಕಪ್​ನಲ್ಲಿ ಮತ್ತೆ ಸದ್ದು ಮಾಡುವ ಜೋಶ್​ನಲ್ಲಿದೆ. ಬಾಂಗ್ಲಾದೇಶ, ಅಫ್ಘಾನಿಸ್ತಾನ, ನೆದರ್ಲೆಂಡ್​ ಪ್ರಮುಖ ತಂಡಗಳ ಲೆಕ್ಕಾಚಾರ ತಲೆಕೆಳಗಾಗಿಸಿ ಗಮನಸೆಳೆಯುವ ಯೋಜನೆಯಲ್ಲಿವೆ. ಒಟ್ಟಾರೆ ನವೆಂಬರ್​ 19ರ ಫೈನಲ್​ ಹಣಾಹಣಿಯವರೆಗೆ ರೋಚಕ ಕಾದಾಟವನ್ನು ಕ್ರಿಕೆಟ್​ ಪ್ರೇಮಿಗಳ ಸವಿಯುವುದು ನಿಶ್ಚಿತ.

ಒಟ್ಟು ಬಹುಮಾನ: 82.91 ಕೋಟಿ ರೂ.

ಚಾಂಪಿಯನ್​: 33.18 ಕೋಟಿ ರೂ

ರನ್ನರ್​ಅಪ್​: 16.58 ಕೋಟಿ ರೂ

ಸೆಮಿೈನಲಿಸ್ಟ್​: 6.63 ಕೋಟಿ ರೂ.

ಲೀಗ್​ ಹಂತ: 82.91 ಲಕ್ಷ ರೂ.

ಪ್ರತಿ ಪಂದ್ಯ ಜಯ: 33.16 ಲಕ್ಷ ರೂ.