ನವದೆಹಲಿ: ಮಹೇಂದ್ರ ಸಿಂಗ್ ಧೋನಿ ಟೀಮ್ ಇಂಡಿಯಾಗೆ ಸಿಕ್ಕಂತಹ ಅದ್ಭುತ ಪ್ರತಿಭೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ತಮ್ಮ ನಾಯಕತ್ವದಲ್ಲಿ ಎರಡನೇ ಏಕದಿನ ವಿಶ್ವಕಪ್ ಟ್ರೋಫಿ ಗೆಲ್ಲಿಸಿಕೊಟ್ಟಂತಹ ಐತಿಹಾಸಿಕ ಕ್ಷಣವನ್ನು ಎಂದು ಮರೆಯಲಾಗದು. ಬ್ಯಾಟ್ಸ್ಮನ್ ಹಾಗೂ ವಿಕೆಟ್ ಕೀಪರ್ ಆಗಿ ಮಿಂಚು ಹರಿಸಿದ ಧೋನಿ ಹೆಚ್ಚಾಗಿ ನಾಯಕತ್ವದಿಂದಲೇ ಸುದ್ದಿ ಮಾಡಿದವರು. ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ತಮ್ಮದೇ ಛಾಪು ಮೂಡಿಸಿರುವ ಧೋನಿ ಪಾಲಿಗೆ ಈ ದಿನ ಮರೆಯಲಾರದ ಸುದಿನ ಎಂದರೆ ಅತಿಶಯೋಕ್ತಿಯೇನಲ್ಲ.
ಕೂಲ್ ಕ್ಯಾಪ್ಟನ್ ಎಂದೇ ವಿಶ್ವ ವಿಖ್ಯಾತಿಯಾಗಿರುವ ಮಾಹಿ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಮೊದಲ ಶತಕ ಸಿಡಿಸಿದ ದಿನವಿದು. 2020ರ ಏಪ್ರಿಲ್ 5ಕ್ಕೆ ಧೋನಿ ಅವರು ಮೊದಲ ಶತಕದ 15ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. 2005ರಲ್ಲಿ ಇದೇ ದಿನದಂದು ವಿಶಾಖಪಟ್ಟಣದ ಎಸಿಎ-ವಿಡಿಸಿಎ ಸ್ಟೇಡಿಯಂನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ ಧೋನಿ 148 ರನ್ಗಳನ್ನು ಸಿಡಿಸಿದ್ದರು.
ಸಚಿನ್ ತೆಂಡೂಲ್ಕರ್ ಬಹುಬೇಗನೆ ಔಟ್ ನಿರ್ಗಮಿಸಿದ್ದರಿಂದ ಮೂರನೇ ಕ್ರಮಾಂಕದಲ್ಲಿ ಮೈದಾನಕ್ಕಿಳಿದ ಧೋನಿ, ವೀರೇಂದ್ರ ಸೆಹ್ವಾಗ್ ಜತೆಗೂಡಿ 96 ರನ್ ಜತೆಯಾಟವಾಡಿದ್ದರು. ಬಳಿಕ ರಾಹುಲ್ ಡ್ರಾವಿಡ್ರೊಂದಿಗೆ 149 ರನ್ಗಳು ಭರ್ಜರಿ ಜತೆಯಾಟ ಆಡಿದ್ದರು. ಬಹಳ ಹೊತ್ತು ಕ್ರೀಸ್ನಲ್ಲಿ ಉಳಿದಿದ್ದ ಧೋನಿ ಪಾಕ್ ಬೌಲರ್ಗಳನ್ನು ಮನಸೋ ಇಚ್ಛೆ ದಂಡಿಸಿ ಕೇವಲ 123 ಎಸೆತಗಳಲ್ಲಿ 15 ಬೌಂಡರಿ ಮತ್ತು 4 ಸಿಕ್ಸರ್ನೊಂದಿಗೆ 148 ರನ್ ಗಳಿಸಿದ್ದರು.
ಧೋನಿ ಅವರ ಭರ್ಜರಿ ಫಾರ್ಮ್ ನೆರವಿನಿಂದ ಟೀಮ್ ಇಂಡಿಯಾ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 356 ರನ್ ಕಲೆಹಾಕಿತ್ತು. ಇದನ್ನು ಬೆನ್ನಟ್ಟಿದ ಪಾಕ್ 298 ರನ್ಗೆ ಆಲೌಟ್ ಆಗಿತ್ತು. (ಏಜೆನ್ಸೀಸ್)