ಯುಎಸ್ಎ: ಈ ಬಾರಿಯ ಚುಟುಕು ವಿಶ್ವ ಸಮರದಲ್ಲಿ ಗೆಲ್ಲುವ ವಿಶ್ವಾಸದೊಂದಿಗೆ ಕಣಕ್ಕಿಳಿದ ಪಾಕಿಸ್ತಾನ ಕ್ರಿಕೆಟ್ ತಂಡವು ಹೀನಾಯ ಪ್ರದರ್ಶನದಿಂದಾಗಿ ಸೂಪರ್ 08 ಹಂತ ಪ್ರವೇಶಿಸುವಲ್ಲಿ ವಿಫಲವಾಗಿದ್ದು, ತೀವ್ರ ಟೀಕೆಗೆ ಗುರಿಯಾಗಿದೆ. ಇತ್ತ ಪಾಕ್ ತಂಡದ ಕಳಪೆ ಪ್ರದರ್ಶನಕ್ಕೆ ನಾಯಕ ಬಾಬರ್ ಅಜಂ ಮಾತ್ರವಲ್ಲದೇ ತಂಡದಲ್ಲಿರುವ ಬೇರೆ ಆಟಗಾರರು ಸಂಕಷ್ಟಕ್ಕೆ ಸಿಲುಕಿದ್ದು, ತಲೆದಂಡ ಅಥವಾ ದೇಶದ್ರೋಹ ಪ್ರಕರಣ ದಾಖಲಾಗುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗಿದೆ. ಇದರ ನಡುವೆಯೇ ಬಾಬರ್ ಅಜಂ ತಮ್ಮ ತಂಡದ ಪ್ರದರ್ಶನ ಕುರಿತು ಪ್ರತಿಕ್ರಿಯಿಸಿದ್ದು, ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಐರ್ಲೆಂಡ್ ವಿರುದ್ಧದ ಪಂದ್ಯದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ನಲ್ಲಿ ಈ ಕುರಿತು ಮಾತನಾಡಿದ ಬಾಬರ್, ನನ್ನ ಪ್ರಕಾರ ಪಿಚ್ ಬೌಲರ್ಗಳಿಗೆ ಹೆಚ್ಚು ಸಹಕಾರಿಯಾಗಿ ಪರಿಣಮಿಸಿದೆ ಎಂದು ಭಾವಿಸುತ್ತೇನೆ. ಆದರೆ, ಬ್ಯಾಟಿಂಗ್ ವಿಭಾಗದಲ್ಲಿ ಆದ ವೈಫಲ್ಯಗಳಿಂದ ತಂಡ ಸೋಲುವಂತಾಯಿತು. ಇಲ್ಲಿ ನಾವು ಒಂದು ತಂಡವಾಗಿ ಆಡಲಿಲ್ಲ. ನಾವು ಇಲ್ಲಿ ಒಬ್ಬ ವ್ಯಕ್ತಿಯಿಂದ ಸೋಲಲಿಲ್ಲ ತಂಡವಾಗಿ ಸೋಲು ಕಂಡಿದ್ದೇವೆ.
ಪ್ರತಿಯೊಬ್ಬ ಆಟಗಾರನಿಗೂ ತನ್ನದೇ ಆದ ಜವಾಬ್ದಾರಿ ಇದ್ದು, ಮುಂದಿನದರ ಬಗ್ಗೆ ಚಿಂತಿಸಬೇಕಿದೆ. ನಾವು ತಂಡವಾಗಿ ಆಡಲಿಲ್ಲ ಎಂಬ ವಿಚಾರವನ್ನು ನಾನು ಈಗಲೂ ಒಪ್ಪಿಕೊಳ್ಳುತ್ತೇನೆ. ಬ್ಯಾಟಿಂಗ್ಗಿಂತ ನಾವು ಬೌಲಿಂಗ್ನಲ್ಲಿ ಚೆನ್ನಾಗಿ ಪ್ರದರ್ಶನ ನೀಡಿದ್ದೇವೆ ಎಂಬುದು ನನ್ನ ಭಾವನೆ. ತಂಡಕ್ಕೆ ಏನು ಮಾಡಬೇಕೆಂಬುದನ್ನು ಮೊದಲು ನೋಡಿಕೊಳ್ಳಬೇಕಿದೆ. ನಮ್ಮಲ್ಲಿ ಉತ್ತಮ ಆಟಗಾರರಿದ್ದು, ಯಾವುದರಲ್ಲಿ ನಮಗೆ ಹೆಚ್ಚು ಕೊರತೆಯಾಯಿತು ಎಂಬುದನ್ನು ಚರ್ಚಿಸಲಾಗುತ್ತದೆ.
ನಿರೀಕ್ಷಿತ ಮಟ್ಟದಲ್ಲಿ ನಾವು ಪ್ರದರ್ಶನ ನೀಡಿಲ್ಲ ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ. ತಂಡದಲ್ಲಿ ಸಮತೋಲನದ ಅವಶ್ಯಕತೆಯಿದ್ದು, ಮುಂದಿನ ದಿನಗಳಲ್ಲಿ ಅಗತ್ಯವಾಗಿ ಸರಿಪಡಿಸಲಾಗುವುದು. ಮುಂದಿನ ದಿನಗಳಲ್ಲಿ ಸ್ಟ್ರಾಂಗ್ ಕಮ್ಬ್ಯಾಕ್ ಮಾಡಲಾಗುವುದು ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಂ ಪೋಸ್ಟ್ ಮ್ಯಾಚ್ ಪ್ರಸೆಂಟೇಷನ್ನಲ್ಲಿ ಹೇಳಿದ್ದಾರೆ.