ನವದೆಹಲಿ: ಪ್ಯಾರಿಸ್ ಒಲಂಪಿಕ್ಸ್ 2024ರ ಶೂಟಿಂಗ್ ಸ್ಪರ್ದೆಯಲ್ಲಿ ಎರಡು ಕಂಚಿನ ಪದಕ ಗೆದ್ದ ಮನು ಭಾಕರ್ (Manu Bhaker) ಇದೀಗ ಭಾರತದ ಒಲಂಪಿಕ್ಸ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಇಂದು (ಜುಲೈ 30) ನಡೆದ 10 ಮೀಟರ್ ಏರ್ ಪಿಸ್ತೂಲ್ ಡಬಲ್ಸ್ ಸ್ಪರ್ಧೆಯಲ್ಲಿ ಸರಬ್ಜೋತ್ ಸಿಂಗ್ ಜತೆ ಸೇರಿ ಕಂಚಿನ ಪದಕ ಗೆಲ್ಲುವ ಮೂಲಕ ಮನು ಭಾಕರ್ ಒಲಂಪಿಕ್ಸ್ನ ಒಂದೇ ಅವೃತ್ತಿಯಲ್ಲಿ ಎರಡು ಪದಕಗಳನ್ನು ಗೆದ್ದ ಭಾರತದ ಮೊದಲ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮನು ಸಾಧನೆಗೆ ಹೆಮ್ಮೆಪಟ್ಟ ಪೋಷಕರು, ಸಿಹಿ ತಿನಿಸಿ ಪುತ್ರಿಯ ಗೆಲುವನ್ನು ಸಂಭ್ರಮಿಸಿದರು. ಇದೇ ವೇಳೆ ಮನು ಭಾಕರ್ ಹುಟ್ಟೂರಾದ ಹರಿಯಾಣದ ಜಜ್ಜರ್ನಲ್ಲಿನ ಸಂಭ್ರಮಾಚರಣೆಯ ವಿಡಿಯೋ ಅಂದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿ, ಜನರ ಗಮನಸೆಳೆದಿತ್ತು.
ಜುಲೈ 28ರಂದು ನಡೆದ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ನಲ್ಲಿ ಅವರು ಮೊದಲ ಕಂಚಿನ ಪದಕಕ್ಕೆ ಮುತ್ತಿಟ್ಟರು. 2021ರಲ್ಲಿ ನಡೆದ ಟೋಕಿಯೋ ಒಲಂಪಿಕ್ಸ್ನಲ್ಲಿ ಪಿಸ್ತೂಲ್ ಕೈ ಕೊಟ್ಟ ಕಾರಣ ಪದಕ ಗೆಲ್ಲದೆ ನಿರಾಸೆ ಅನುಭವಿಸಿದ ಅವರು ಈ ಬಾರಿಯ ಎರಡು ಪದಕಗಳನ್ನು ಗೆಲ್ಲುವ ಮುಖೇನ ತಮ್ಮ ಒಲಂಪಿಕ್ಸ್ (Paris Olympics 2024) ಕನಸನ್ನು ನನಸಾಗಿಸಿಕೊಂಡಿದ್ದಾರೆ. ಭಾರತಕ್ಕೆ ಎರಡು ಪದಕ ಗೆದ್ದುಕೊಟ್ಟ ಭಾಕರ್ಗೆ ದೇಶವ್ಯಾಪಿ ಅಭಿನಂದನೆಗಳ ಮಹಾಪೂರವೇ ಹರಿದುಬಂದಿತ್ತು. ಇದಾದ ಬಳಿಕ ಭಾರತದ ಚಿನ್ನದ ಹುಡುಗ ಎಂದೇ ಖ್ಯಾತಿ ಗಳಿಸಿರುವ ನೀರಜ್ ಚೋಪ್ರಾ ಅವರೊಂದಿಗೆ ಪ್ರೀತಿಯಲ್ಲಿದ್ದಾರೆ ಮನು ಭಾಕರ್ ಎಂಬ ವದಂತಿಗಳಿಂದ ಭಾರೀ ಸುದ್ದಿಯಾಗಿದ್ದ ಮನು, ತದನಂತರ ಇದೆಲ್ಲಾ ಸುಳ್ಳು ಎಂದು ಹೇಳುವ ಮುಖೇನ ವದಂತಿಗಳಿಗೆ ತೆರೆಎಳೆದರು.
ಇದೀಗ ಮತ್ತೊಮ್ಮೆ ಮುನ್ನೆಲೆಗೆ ಬಂದಿರುವ ಮನು ಭಾಕರ್, ತಮ್ಮ ಪಯಣದ ಬಗ್ಗೆ ವಿಶೇಷ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದಾರೆ. "ನನ್ನ ರೈಫಲ್ ಶೂಟಿಂಗ್ ಪಯಣ ಆರಂಭವಾಗಿದ್ದು ನಾನು 14 ವರ್ಷವಿದ್ದಾಗ. ಈ ಹಂತ ತಲುಪುತ್ತೇನೆ ಎಂದು ಕನಸಿನಲ್ಲಿಯೂ ಯೋಚಿಸಿರಲಿಲ್ಲ. ನೀವು ಏನಾದರೂ ಪ್ರಾರಂಭಿಸಿದರೆ, ಅದನ್ನು ಪೂರ್ಣಗೊಳಿಸುವವರೆಗೂ ನಿಲ್ಲಿಸಬೇಡಿ. ಎಷ್ಟೇ ಕಷ್ಟವಾಗಲಿ, ಏನೇ ಇರಲಿ ನಿಮ್ಮ ಕನಸನ್ನು ಬೆಂಬಿಡದೆ ಬೆನ್ನಟ್ಟಿ. ನೀವು ನಿಮ್ಮ ಊಹೆಗೂ ಮೀರಿ ಹೆಚ್ಚು ಸಮರ್ಥರಾಗಿದ್ದೀರಿ. ಪ್ರತಿ ಸಣ್ಣ ಸಣ್ಣ ಹೆಜ್ಜೆಗಳು ಮುಂದೆ ನಿಮ್ಮ ದೊಡ್ಡ ಗೆಲುವಿಗೆ ಕಾರಣವಾಗುತ್ತದೆ. ಒಲಿಂಪಿಕ್ ಚಿನ್ನದ ಪದಕ ಗೆಲ್ಲುವ ನನ್ನ ಕನಸು ಮುಂದುವರಿಯುತ್ತದೆ" ಎಂದು ಬರೆದುಕೊಂಡಿದ್ದಾರೆ,(ಏಜೆನ್ಸೀಸ್).