ಬೆಂಗಳೂರು: ಒಡಿಶಾದಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತದಿಂದಾಗಿ ರೈಲು ಸಂಚಾರ ಸ್ಥಗಿತಗೊಂಡ ಪರಿಣಾಮ ರಾಷ್ಟ್ರಮಟ್ಟದ ಪಂದ್ಯಕ್ಕೆ ತೆರಳಿ ಕೋಲ್ಕತದಲ್ಲಿ ತೊಂದರೆ ಎದುರಿಸುತ್ತಿದ್ದ ಕರ್ನಾಟಕ ವಾಲಿಬಾಲ್ ತಂಡಕ್ಕೆ ವಿಮಾನದಲ್ಲಿ ಪ್ರಯಾಣಿಸಲು ವ್ಯವಸ್ಥೆ ಮಾಡಿಕೊಡಲಾಗಿದೆ.
ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರ ಸೂಚನೆ ಮೇರೆಗೆ ಈ ವ್ಯವಸ್ಥೆ ಕೈಗೊಳ್ಳಲಾಗಿದೆ. ಒಡಿಶಾದ ಬಾಲಸೋರ್ ಜಿಲ್ಲೆಯ ಬಹನಾಗಾ ರೈಲು ನಿಲ್ದಾಣದ ಬಳಿ ನಿನ್ನೆ ನಡೆದ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ಅಪಘಾತದಲ್ಲಿ ಈ ವರೆಗೆ ಸುಮಾರು 300 ಮಂದಿ ಸಾವಿಗೀಡಾಗಿದ್ದು, ನೂರಾರು ಮಂದಿ ಗಾಯಗೊಂಡಿದ್ದಾರೆ.
ಈ ಅಪಘಾತದ ಪರಿಣಾಮವಾಗಿ ಬೆಂಗಳೂರು-ಕೋಲ್ಕತ ನಡುವೆ ಸಂಚರಿಸು ಎಲ್ಲ ರೈಲುಗಳು ಸ್ಥಗಿತಗೊಂಡಿದ್ದರಿಂದ, ಕೋಲ್ಕತಕ್ಕೆ ತೆರಳಿದ್ದ ಕರ್ನಾಟಕ ವಾಲಿಬಾಲ್ ತಂಡದ ಸದಸ್ಯರು ಅಲ್ಲಿನ ರೈಲು ನಿಲ್ದಾಣದಲ್ಲಿ ಪರದಾಟ ಅನುಭವಿಸುವಂತಾಗಿತ್ತು. ಈ ಹಿನ್ನೆಲೆಯಲ್ಲಿ ಕೋಚ್ಗಳು ಸೂಕ್ತ ವ್ಯವಸ್ಥೆ ಮಾಡುವಂತೆ ಸಂಬಂಧಪಟ್ಟವರಲ್ಲಿ ವಿನಂತಿ ಮಾಡಿಕೊಂಡಿದ್ದರು.
ಹೀಗಾಗಿ ಹುಡುಗರು-ಹುಡುಗಿಯರು ಹಾಗೂ ಕೋಚ್ಗಳು ಸೇರಿ ಕರ್ನಾಟಕ ವಾಲಿಬಾಲ್ ತಂಡದ 32 ಮಂದಿಗೆ ವಿಮಾನದಲ್ಲಿ ತಾಯ್ನಾಡಿಗೆ ಬರಲು ವ್ಯವಸ್ಥೆ ಮಾಡಿಕೊಡಲಾಗಿದೆ. ಈ 32 ಜನರು ನಾಳೆ ಬೆಳಗ್ಗೆ 4.15ಕ್ಕೆ ಕೋಲ್ಕತದಿಂದ ಹೊರಡಲಿರುವ ಇಂಡಿಗೋ ಏರ್ಲೈನ್ಸ್ನಲ್ಲಿ ಹೊರಟು ಬೆಂಗಳೂರಿಗೆ 6.50ರ ಸುಮಾರಿಗೆ ಬಂದಿಳಿಯಲಿದ್ದಾರೆ.