ಅಡಿಲೇಡ್: ಇಲ್ಲಿನ ಅಡಿಲೇಡ್ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಅಹರ್ನಿಶಿ ಟೆಸ್ಟ್ ಪಂದ್ಯದಲ್ಲಿ ಆತಿಥೇಯರು ಮೊದಲ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟಕ್ಕೆ 86 ರನ್ ಗಳಿಸಿದ್ದು, ಮೊದಲ ದಿನದಾಟದ ಗೌರವ ಸಂಪಾದಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವನ್ನು ಇನ್ನಿಲ್ಲದಂತೆ ಕಾಡಿದ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ (48ಕ್ಕೆ 6) ಜೀವನಶ್ರೇಷ್ಠ ಬೌಲಿಂಗ್ ದಾಳಿಗೆ ತತ್ತರಿಸಿ 180 ರನ್ಗಳಿಗೆ ಆಲೌಟ್ ಆಯಿತು. ಇದಕ್ಕೆ ಪ್ರತಿಯಾಗಿ ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾ ತಂಡವು ನಾಥನ್ ಮೆಕ್‌ಸ್ವೀನಿ (38 ರನ್, 97 ಎಸೆತ, 6 ಬೌಂಡರಿ) ಹಾಗೂ ಅನುಭವಿ ಮಾರ್ನಸ್ ಲಬುಶೇನ್ (20 ರನ್,67 ಎಸೆತ, 3 ಬೌಂಡರಿ) ಜತೆಯಾಟದ ಫಲವಾಗಿ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟಕ್ಕೆ 86 ರನ್ಗಳಿಸಿದೆ.
ಇನ್ನೂ ಮೊದಲ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದ್ದ ಯುವ ಆರಂಭಿಕ ಯಶಸ್ವಿ ಜೈಸ್ವಾಲ್ (Yashasvi Jaiswal) ತಮ್ಮ ಅಮೋಘ ಪ್ರದರ್ಶನವನ್ನು ಎರಡನೇ ಪಂದ್ಯದಲ್ಲೂ ಮುಂದುವರೆಸಲಿದ್ದಾರೆ ಎಂದು ಊಹಿಸಲಾಗಿತ್ತು. ಆದರೆ. ಮೊದಲ ಎಸೆತದಲ್ಲೇ ವೇಗಿ ಮಿಚೆಲ್ ಸ್ಟಾರ್ಕ್ಗೆ ವಿಕೆಟ್ ಒಪ್ಪಿಸುವ ಮೂಲಕ ಅನಪೇಕ್ಷಿತ ದಾಖಲೆಗಳಿಗೆ ಯುವ ಆಟಗಾರ (Yashasvi Jaiswal) ಕೊರಳೊಡ್ಡಿದ್ದು, ಈ ಬಗ್ಗೆ ವೇಗಿ ಮಿಚೆಲ್ ಸ್ಟಾರ್ಕ್ ಮಾತನಾಡಿದ್ಧಾರೆ.
ಮೊದಲ ದಿನದಾಟದ ಬಳಿಕ ಮಾತನಾಡಿದ ಸ್ಟಾರ್ಕ್, ಅದರಲ್ಲಿ ಏನು ವಿಶೇಷವಿಲ್ಲ ಎಂದು ಹೇಳಿದ್ದಾರೆ. ನನ್ನ ಪಾತ್ರವನ್ನು ನಾನು ನಿಭಾಯಿಸಿದ್ದೇನೆ. ಆರಂಭಿಕ ಹಂತದಲ್ಲೇ ಬ್ಯಾಟಿಂಗ್ ಲೈನ್ಅಪ್ಅನ್ನು ಪ್ರವೇಶ ಮಾಡುವುದು ಅಷ್ಟು ಸುಲಭದ ಮಾತಲ್ಲ. ಈ ವಿಚಾರ ಎಷ್ಟು ಮುಖ್ಯ ಎಂದು ನಮಗೆ ತಿಳಿದಿದೆ. ದೊಡ್ಡ ಸರಣಿಗಳಲ್ಲಿ ಈ ರೀತಿ ಆಡುವುದು ಉತ್ತಮ ಮಾರ್ಗವಾಗಿದೆ. ಟೆಸ್ಟ್ ಕ್ರಿಕೆಟ್ನ ಸ್ವರೂಪ ಬದಲಾಗಿದ್ದು, ಹಲವರು ಇದನ್ನು ಟಿ20 ರೀತಿಯಲ್ಲಿ ಆಡುತ್ತಾರೆ. ಕೆಲವರು ಐಪಿಎಲ್ನಂತಹ ಟೂರ್ನಿಗಳಲ್ಲಿ ಗುರುತಿಸಿಕೊಂಡು ಮುನ್ನೆಲೆಗೆ ಬರುತ್ತಾರೆ. ಇವರಲ್ಲಿ ನಾನು ಯಾವುದೇ ಭಯವನ್ನು ಕಂಡಿಲ್ಲ.
ಜೈಸ್ವಾಲ್ (Yashasvi Jaiswal) ಹಾಗೂ ನಿತೀಶ್ ರೆಡ್ಡಿ ಆಟವನ್ನು ನಾವು ಗಮನಿಸಿದ್ದೇವೆ. ಅವರ ಕೆಲ ಹೊಡೆತಗಳು ತುಂಬಾ ವಿಶೇಷವಾಗಿದ್ದವು. ಯಾವುದೇ ಮಾದರಿಯ ಕ್ರಿಕೆಟ್ ಆಗಿರಲಿ ಮುಂಬರುವ ಪೀಳಿಗೆಯಿಂದ ನಾವು ಬದಲಾವಣೆಯನ್ನು ನೋಡುತ್ತೇವೆ. ಯಶಸ್ವಿ ಜೈಸ್ವಾಲ್ ಒಬ್ಬ ಫಿಯರ್ಲೆಸ್ ಕ್ರಿಕೆಟಿಗ. ಮೊದಲ ಪಂದ್ಯದಲ್ಲಿ ಆತ ಏನು ಹೇಳಿದ್ದ ಎಂಬುದನ್ನು ನಾನು ಕೇಳಿಸಿಕೊಂಡಿರಲಿಲ್ಲ ಎಂದು ವೇಗಿ ಮಿಚೆಲ್ ಸ್ಟಾರ್ಕ್ ಮೊದಲ ದಿನದಾಟದ ಬಳಿಕ ಹೇಳಿದ್ದಾರೆ.