ಕ್ರೀಡೆ

ಟೀಮ್​ ಇಂಡಿಯಾದ ಈ ಬ್ಯಾಟ್ಸ್​ಮನ್​ ಔಟ್​ ಮಾಡೋದು ಕಷ್ಟ ಅಂದ್ರು ಪಾಕ್​ ವೇಗಿ ಮೊಹಮ್ಮದ್​ ಅಮೀರ್​!

ನವದೆಹಲಿ: ಟಿ20 ವಿಶ್ವಕಪ್ ಅಂಗವಾಗಿ ಭಾನುವಾರ (ಜೂನ್​ 09) ಭಾರತ-ಪಾಕಿಸ್ತಾನ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ವಿಶ್ವಾದ್ಯಂತ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳು ಈ ಹೈವೋಲ್ಟೇಜ್​ ಪಂದ್ಯಕ್ಕಾಗಿ ಎದುರು ನೋಡುತ್ತಿದ್ದಾರೆ. ಈಗಾಗಲೇ ಕ್ರಿಕೆಟ್​ ದಿಗ್ಗಜರು ಮತ್ತು ಮಾಜಿ ಕ್ರಿಕೆಟಿಗರು ಪಂದ್ಯದ ಕುರಿತು ಚರ್ಚಿಸುತ್ತಿದ್ದಾರೆ. ಇದರ ನಡುವೆ ಪಂದ್ಯಕ್ಕೂ ಮುನ್ನ ಪಾಕಿಸ್ತಾನದ ಸ್ಟಾರ್ ವೇಗಿ ಮೊಹಮ್ಮದ್ ಅಮೀರ್, ಹಲವು ಕುತೂಹಲಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ಅಲ್ಲ, ಟೀಮ್​ ಇಂಡಿಯಾದ ಆ ಬ್ಯಾಟ್ಸ್​ಮನ್​ ಔಟ್​ ಮಾಡುವುದು ಕಷ್ಟ ಎಂದಿದ್ದಾರೆ. ಹಾಗಾದರೆ, ಆ ಬ್ಯಾಟ್ಸ್​ಮನ್​ ಯಾರು ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.

ಇದೀಗ ವಿಶ್ವದ ಗಮನ ಭಾರತ-ಪಾಕ್ ಪಂದ್ಯದತ್ತ ನೆಟ್ಟಿದೆ. ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂದು (ಜೂನ್ 9) ರಾತ್ರಿ 8 ಗಂಟೆಗೆ ಕಿರು ವಿಶ್ವಕಪ್​ನ ಮಹಾಯುದ್ಧಕ್ಕೆ ವೇದಿಕೆ ಸಿದ್ಧವಾಗಿದೆ. ಈ ಪಂದ್ಯಕ್ಕೂ ಮುನ್ನ ಟೀಮ್​ ಇಂಡಿಯಾ ನಾಯಕ ರೋಹಿತ್ ಶರ್ಮ ಅವರನ್ನು ಪಾಕಿಸ್ತಾನದ ಸ್ಟಾರ್ ವೇಗಿ ಮೊಹಮ್ಮದ್ ಅಮೀರ್ ಕೊಂಡಾಡಿದರು. ವಿಶ್ವಕಪ್‌ನ ಅಧಿಕೃತ ಪ್ರಸಾರಕರಾದ ಸ್ಟಾರ್​ ಸ್ಪೋರ್ಟ್ಸ್​ ಜತೆ ಮಾತನಾಡುತ್ತಾ ಕುತೂಹಲಕಾರಿ ಸಂಗತಿಗಳನ್ನು ಬಿಚ್ಚಿಟ್ಟರು.

ರೋಹಿತ್ ಶರ್ಮ ವಿಶ್ವ ದರ್ಜೆಯ ಆಟಗಾರ. ಒಮ್ಮೆ ಅವರು ಕ್ರೀಸ್‌ಗೆ ಬಂದರೆ ಯಾರು ಕೂಡ ಅವರನ್ನು ತಡೆಯಲಾರರು. ಯಾವುದೇ ಬೌಲರ್ ಆಗಲಿ ಅವರನ್ನು ಬಿಡದೆ ಕಾಡುತ್ತಾರೆ. ಹಾಗಾಗಿ ರೋಹಿತ್‌ ಅವರನ್ನು ಬೇಗನೇ ಔಟ್ ಮಾಡಬೇಕು. ಅವರು 15 ರಿಂದ 20 ಎಸೆತಗಳನ್ನು ಎದುರಿಸಿದರೆ ಸಾಕು ಬೌಲರ್‌ಗಳಿಗೆ ತಮ್ಮ ಸಾರ್ವತ್ರಿಕ ಫಾರ್ಮ್ ತೋರಿಸುತ್ತಾರೆ ಎಂದು ಅಮೀರ್​ ಹೇಳಿದರು.

ಇತರ ಆಟಗಾರರಿಗಿಂತ ಹಿಟ್ ಮ್ಯಾನ್ ಔಟ್ ಮಾಡುವುದು ಹೆಚ್ಚು ಕಷ್ಟ. ಆದರೆ ಅವರ ಸಾಮರ್ಥ್ಯ ಮತ್ತು ದೌರ್ಬಲ್ಯ ನನಗೆ ತಿಳಿದಿದೆ. ಹೊಸ ಚೆಂಡಿನಿಂದ ಅವರ ಪ್ಯಾಡ್‌ಗಳ ಮೇಲೆ ಗುರಿಯಿಟ್ಟುಕೊಂಡು ಎಸೆದರೆ ಸಾಕು ರೋಹಿತ್​ ಔಟ್ ಆಗುತ್ತಾರೆ. ಈ ಹಿಂದೆ ನಾನು ರೋಹಿತ್‌ರನ್ನು ಪೆವಿಲಿಯನ್‌ಗೆ ಸೇರಿಸಿದ್ದೆ ಎಂದು ಪಾಕ್ ವೇಗಿ ಅಮೀರ್​ ಹೇಳಿದರು. ಇದೇ ಸಂದರ್ಭದಲ್ಲಿ ಅಮೀರ್ 2019ರ ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ ಆಡಿದ ಅತ್ಯುತ್ತಮ ಇನ್ನಿಂಗ್ಸ್‌ಗಳನ್ನು ನೆನಪಿಸಿಕೊಂಡರು. (ಏಜೆನ್ಸೀಸ್​)