Jasprit Bumrah : ಟೀಮ್ ಇಂಡಿಯಾದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ವೇಗದ ಬೌಲರ್‌ಗಳಲ್ಲಿ ವಿಶೇಷ ಸ್ಥಾನವನ್ನು ಗಳಿಸಿದ್ದಾರೆ. ಏಕಾಂಗಿಯಾಗಿ ಪಂದ್ಯದ ದಿಕ್ಕನ್ನೇ ಬದಲಿಸುವ ಸಾಮರ್ಥ್ಯ ಹೊಂದಿರುವ ಈ ಬಲಗೈ ವೇಗಿ ಈಗಾಗಲೇ ಭಾರತಕ್ಕೆ ಹಲವು ಗೆಲುವುಗಳನ್ನು ತಂದುಕೊಟ್ಟಿದ್ದಾರೆ. ಅವರ ವಿಶಿಷ್ಟ ಬೌಲಿಂಗ್ ಶೈಲಿಯನ್ನು ಮೆಚ್ಚಿ ಅನೇಕ ಮಾಜಿ ಕ್ರಿಕೆಟಿಗರು ಅವರನ್ನು ವಿಶ್ವದ ಅತ್ಯುತ್ತಮ ವೇಗದ ಬೌಲರ್ ಎಂದು ಹೊಗಳುತ್ತಿದ್ದಾರೆ.
ಆದರೆ, ಬುಮ್ರಾ ಬಗ್ಗೆ ಪಾಕಿಸ್ತಾನದ ಮಾಜಿ ಬ್ಯಾಟ್ಸ್‌ಮನ್ ಅಹ್ಮದ್ ಶೆಹಜಾದ್ ವಿಭಿನ್ನ ಅಭಿಪ್ರಾಯವನ್ನು ಹೊಂದಿದ್ದಾರೆ. ಬುಮ್ರಾ ಈ ಪೀಳಿಗೆಯ ಬೌಲರ್‌ಗಳಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಆದರೆ, ಶೆಹಜಾದ್ ಅವರ ಅಭಿಪ್ರಾಯದಲ್ಲಿ, ಪಾಕಿಸ್ತಾನದ ದಂತಕಥೆ ವಾಸಿಂ ಅಕ್ರಮ್ ಅತ್ಯುತ್ತಮ ವೇಗದ ಬೌಲರ್ ಎಂದು ಹೇಳಿದ್ದಾರೆ.
ಇತ್ತೀಚೆಗೆ ಶೆಹಜಾದ್ ಅವರು ನಾದಿರ್ ಅಲಿ ಪಾಡ್‌ಕಾಸ್ಟ್‌ನಲ್ಲಿ ಭಾಗವಹಿಸಿದ್ದರು. ಈ ವೇಳೆ ವಾಸಿಂ ಅಕ್ರಮ್, ವಾಕರ್ ಯೂನಿಸ್, ಶೇನ್ ಎಡ್ವರ್ಡ್ ಬಾಂಡ್, ಜಸ್ಪ್ರೀತ್ ಬುಮ್ರಾ, ಶಾನ್ ಟೈಟ್ ಮತ್ತು ಮಿಚೆಲ್ ಸ್ಟಾರ್ಕ್ ಹೆಸರುಗಳನ್ನು ಹೇಳಿ ಉತ್ತಮ ವೇಗದ ಬೌಲರ್ ಅನ್ನು ಆಯ್ಕೆ ಮಾಡುವಂತೆ ಕೇಳಲಾಯಿತು. ಇದಕ್ಕೆ ಉತ್ತರಿಸಿದ ಶೆಹಜಾದ್, ಇದು ತುಂಬಾ ಸುಲಭದ ಪ್ರಶ್ನೆ. ನೀವು ಹೇಳಿದ ಎಲ್ಲರಲ್ಲಿ ವಾಸಿಂ ಅಕ್ರಮ್ ಅತ್ಯುತ್ತಮ ವೇಗಿ ಎಂದರು.
ಇದೇ ಸಂದರ್ಭದಲ್ಲಿ ಬುಮ್ರಾ ಬಗ್ಗೆ ಮಾತನಾಡಿದ ಶೆಹಜಾದ್, ಬುಮ್ರಾ ಪ್ರಸ್ತುತ ಬೌಲರ್‌ಗಳಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅವರು ವಿಶ್ವ ದರ್ಜೆಯ ಬೌಲರ್. ಅವರು ಏಕಾಂಗಿಯಾಗಿ ಟೀಮ್ ಇಂಡಿಯಾವನ್ನು ಗೆಲುವಿನತ್ತ ಕೊಂಡೊಯ್ಯುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಹೇಳಿದರು. ಅದೇ ರೀತಿ ಉತ್ತಮ ವಿಕೆಟ್ ಕೀಪರ್ ಯಾರು ಎಂಬ ಪ್ರಶ್ನೆಗೆ ಶೆಹಜಾದ್, ರಿಷಭ್ ಪಂತ್ಗಿಂತ ರಶೀದ್ ಲತೀಫ್ ಉತ್ತಮ ಕೀಪರ್ ಎಂದಿದ್ದಾರೆ.
ಇನ್ನು ಬುಮ್ರಾ ಮತ್ತು ರಿಷಭ್ ಪಂತ್ ಪ್ರಸ್ತುತ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ನಿರತರಾಗಿದ್ದಾರೆ. ಬಾರ್ಡರ್-ಗವಾಸ್ಕರ್ ಟ್ರೋಫಿ ಆಡಲು ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಿರುವ ಭಾರತ ಮಿಶ್ರಫಲ ಅನುಭವಿಸುತ್ತಿದೆ. ಮೊದಲ ಟೆಸ್ಟ್ ಗೆದ್ದಿದ್ದ ಟೀಮ್ ಇಂಡಿಯಾ ಎರಡನೇ ಟೆಸ್ಟ್ನಲ್ಲಿ ಕಾಂಗರೂಗಳ ಎದುರು ಸೋತಿದೆ. ಮೂರನೇ ಟೆಸ್ಟ್ ಡ್ರಾಗೊಂಡಿದ್ದು, ಉಭಯ ತಂಡಗಳ ನಡುವಿನ ಉಳಿದ ಎರಡು ಪಂದ್ಯಗಳು ಮೆಲ್ಬೋರ್ನ್ ಮತ್ತು ಸಿಡ್ನಿಯಲ್ಲಿ ನಡೆಯಲಿವೆ. (ಏಜೆನ್ಸೀಸ್)