ಕ್ರೀಡೆ

ಭಾರತಕ್ಕೆ ತಪ್ಪಿದ ವಿಶ್ವ ನಂ. 1 ಪಟ್ಟಕ್ಕೇರುವ ಅವಕಾಶ; ಬಾಂಗ್ಲಾ ಎದುರು ಸೋಲಿನಿಂದ ಹಿನ್ನಡೆ

ಬೆಂಗಳೂರು: ಏಷ್ಯಾಕಪ್​ ಗೆಲುವಿನೊಂದಿಗೆ ಐಸಿಸಿ ಏಕದಿನ ರ್ಯಾಂಕಿಂಗ್​ನಲ್ಲಿ ನಂ. 1 ಪಟ್ಟಕ್ಕೇರುವ ಅವಕಾಶವನ್ನು ಭಾರತ ತಂಡ, ಬಾಂಗ್ಲಾ ವಿರುದ್ಧ ಕಂಡ ಸೋಲಿನಿಂದಾಗಿ ಕಳೆದುಕೊಂಡಿದೆ. ಭಾರತ ಈಗ 2ರಿಂದ ಮತ್ತೆ 3ನೇ ಸ್ಥಾನಕ್ಕೆ ಜಾರಿದ್ದರೆ, ಪಾಕಿಸ್ತಾನ 2ನೇ ಸ್ಥಾನಕ್ಕೇರಿದೆ. ಆಸ್ಟ್ರೆಲಿಯಾ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 4ನೇ ಏಕದಿನದಲ್ಲಿ ಕಂಡ ಸೋಲಿನ ನಡುವೆಯೂ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ.

ಹರಿಣಗಳ ವಿರುದ್ಧದ 5ನೇ ಹಾಗೂ ಅಂತಿಮ ಏಕದಿನದಲ್ಲಿ ಮತ್ತೆ ಆಸೀಸ್​ ಸೋತರೆ, ಪಾಕ್​ಗೆ ನಂ. 1 ಪಟ್ಟವನ್ನು ಬಿಟ್ಟುಕೊಡಲಿದೆ. ಭಾರತ ಈಗ ಏಷ್ಯಾಕಪ್​ ಗೆದ್ದರೂ ನಂ. 1 ಪಟ್ಟ ಒಲಿಯದು ಆದರೆ, ನಂತರ ಆಸ್ಟ್ರೆಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಗೆದ್ದರೆ ವಿಶ್ವಕಪ್​ಗೆ ಮುನ್ನ ಅಗ್ರಸ್ಥಾನಕ್ಕೇರುವ ಅವಕಾಶವಿದೆ. ಇತ್ತ ಆಸೀಸ್​ಗೆ ದಕ್ಷಿಣ ಆಫ್ರಿಕಾ ವಿರುದ್ಧ ಕೊನೇ ಪಂದ್ಯ ಮತ್ತು ಭಾರತ ವಿರುದ್ಧ ಸರಣಿ ಗೆದ್ದರೆ ವಿಶ್ವಕಪ್​ವರೆಗೂ ನಂ. 1 ಪಟ್ಟ ಕಾಯ್ದುಕೊಳ್ಳಬಹುದಾಗಿದೆ.

ಪಾಕ್​ಗೆ ಮತ್ತೆ ನಂ. 1 ಪಟ್ಟ ಒಲಿಯಬೇಕಾದರೆ ಭಾರತ ಏಷ್ಯಾಕಪ್ ಫೈನಲ್​ ಮತ್ತು ಆಸೀಸ್​ ವಿರುದ್ಧ ಸರಣಿ ಸೋಲಬೇಕು ಮತ್ತು ಆಸೀಸ್​ ದಕ್ಷಿಣ ಆಫ್ರಿಕಾ ವಿರುದ್ಧ ಕಡೇ ಪಂದ್ಯ ಸೋಲಬೇಕು ಅಥವಾ ಭಾರತ ವಿರುದ್ಧ ಸರಣಿ ಕ್ಲೀನ್​ಸ್ವೀಪ್​ ಸಾಧಿಸಬಾರದು.