ಕ್ರೀಡೆ

ಟಿ20 ವಿಶ್ವಕಪ್​ನಲ್ಲಿ ಶ್ರೀಲಂಕಾವನ್ನು ಅಲ್ಪ ಮೊತ್ತಕ್ಕೆ ನಿಯಂತ್ರಿಸಿ ಗೆಲುವು ಸಾಧಿಸಿದ ದಕ್ಷಿಣ ಆಫ್ರಿಕಾ

ನ್ಯೂಯಾರ್ಕ್​: ವೇಗಿ ಅನ್ರಿಚ್​ ನೋಕಿಯಾ (7ಕ್ಕೆ 4) ಮಾರಕ ಬೌಲಿಂಗ್​ ದಾಳಿ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡ ಟಿ20 ವಿಶ್ವಕಪ್​ ಟೂರ್ನಿಯ ಡಿ ಗುಂಪಿನ ಮೊದಲ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಅಲ್ಪ ಮೊತ್ತಕ್ಕೆ ನಿಯಂತ್ರಿಸಿ 6 ವಿಕೆಟ್​ಗಳಿಂದ ಗೆಲುವು ದಾಖಲಿಸಿದೆ.

ನಾಸೌ ಕೌಂಟಿ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದ ಲಂಕಾ ರನ್​ ಗಳಿಸಲು ತಿಣುಕಾಡಿ 19.1 ಓವರ್​ಗಳಲ್ಲಿ ಕೇವಲ 77 ರನ್​ಗಳಿಗೆ ಆಲೌಟ್​ ಆಯಿತು. ಇದು ಟಿ20 ಕ್ರಿಕೆಟ್​ನಲ್ಲಿ ಲಂಕಾದ ಕನಿಷ್ಠ ಮೊತ್ತವಾಗಿದೆ. ಪ್ರತಿಯಾಗಿ ದ. ಆಫ್ರಿಕಾ 16.2 ಓವರ್​ಗಳಲ್ಲಿ 4 ವಿಕೆಟ್​ಗೆ 80 ರನ್​ ಗಳಿಸಿ ಟೂರ್ನಿಯಲ್ಲಿ ಶುಭಾರಂಭ ಕಂಡಿತು. ಕ್ವಿಂಟನ್​ ಡಿಕಾಕ್​ (20) ಮತ್ತು ಹೆನ್ರಿಕ್​ ಕ್ಲಾಸೆನ್​ (19*) ಬ್ಯಾಟಿಂಗ್​ಗೆ ಕಠಿಣವೆನಿಸಿದ ಪಿಚ್​ನಲ್ಲಿ ಹರಿಣಗಳ ಚೇಸಿಂಗ್​ಗೆ ನೆರವಾದರು. ಲಂಕಾ ಮತ್ತು ಆಫ್ರಿಕಾ ಇನಿಂಗ್ಸ್​ನಲ್ಲಿ ತಲಾ 3 ಬೌಂಡರಿ, ಸಿಕ್ಸರ್​ಗಳಷ್ಟೇ ಸಿಡಿದವು.

ಲಂಕಾಗೆ ಲಗಾಮು: ಆಫ್ರಿಕಾ ಬಿಗಿ ದಾಳಿ ಎದುರು ಪವರ್​ಪ್ಲೇನಲ್ಲಿ ಕೇವಲ 24 ರನ್​ ಗಳಿಸಿದ ಲಂಕಾ, ನಂತರದಲ್ಲಿ ನಿರಂತರ ವಿಕೆಟ್​ ಕಳೆದುಕೊಂಡಿತು. 10ನೇ ಓವರ್​ನಲ್ಲಿ 40 ರನ್​ಗಳಿಗೆ 5 ವಿಕೆಟ್​ ಕಳೆದುಕೊಂಡು ಸಂಕಷ್ಟ ಎದುರಿಸಿದ ಲಂಕಾಗೆ ಕಗಿಸೊ ರಬಾಡ (21ಕ್ಕೆ 2) ಮತ್ತು ಸ್ಪಿನ್ನರ್​ ಕೇಶವ್​ ಮಹಾರಾಜ್​ (22ಕ್ಕೆ 2) ಕೂಡ ಕಡಿವಾಣ ಹೇರಿದರು.

ಪಂದ್ಯದಲ್ಲಿ ಒಟ್ಟಾರೆ 35.3 ಓವರ್​ಗಳಲ್ಲಿ 157 ರನ್​ಗಳಷ್ಟೇ ದಾಖಲಾದವು. ಇದರಲ್ಲಿ ತಲಾ 6 ಸಿಕ್ಸರ್​, ಬೌಂಡರಿಗಳಿದ್ದವು. ಪ್ರತಿ ಓವರ್​ಗೆ 4.42ರ ಸರಾಸರಿಯಲ್ಲಿ ರನ್​ ಸಿಡಿಯಿತು. ಇದು ಟಿ20 ವಿಶ್ವಕಪ್​ ಪಂದ್ಯದಲ್ಲಿ ಕನಿಷ್ಠ ರನ್​ರೇಟ್​ ಆಗಿದೆ.

ಶ್ರೀಲಂಕಾ: 19.1 ಓವರ್​ಗಳಲ್ಲಿ 77 (ನಿಸ್ಸಂಕಾ 3, ಕುಸಲ್​ ಮೆಂಡಿಸ್​ 19, ಕಮಿಂಡು 11, ಹಸರಂಗ 0, ಸಮರವಿಕ್ರಮ 0, ಅಸಲಂಕಾ 6, ಮ್ಯಾಥ್ಯೂಸ್​ 16, ಶನಕ 9, ನೋಕಿಯಾ 7ಕ್ಕೆ 4, ಮಹಾರಾಜ್​ 22ಕ್ಕೆ 2, ರಬಾಡ 21ಕ್ಕೆ 2). ದಕ್ಷಿಣ ಆಫ್ರಿಕಾ: 16.2 ಓವರ್​ಗಳಲ್ಲಿ 4 ವಿಕೆಟ್​ಗೆ 80 (ಡಿಕಾಕ್​ 20, ಮಾರ್ಕ್ರಮ್​ 12, ಸ್ಟಬ್ಸ್​ 13, ಕ್ಲಾಸೆನ್​ 19*, ಮಿಲ್ಲರ್​ 6, ಹಸರಂಗ 22ಕ್ಕೆ 2, ಶನಕ 6ಕ್ಕೆ 1, ತುಷಾರ 18ಕ್ಕೆ 1).