ಕ್ರೀಡೆ

ಈ ಒಂದು ಕಾರಣಕ್ಕೆ ಚುಟಕು ಮಾದರಿಗೆ ನಿವೃತ್ತಿ ಘೋಷಿಸಿದೆ; ಕೊನೆಗೂ ಕಾರಣ ತಿಳಿಸಿದ Rohit Sharma

ಕಾನ್ಪುರ: ಜೂನ್​ 29ರಂದು ಮುಕ್ತಾಯಗೊಂಡ ಟಿ20 ವಿಶ್ವಕಪ್​ನಲ್ಲಿ ಭಾರತ ಜಯ ಸಾಧಿಸಿದ್ದು, ಸುದೀರ್ಘ ಕಪ್​ ಬರವನ್ನು ನೀಗಿಸಿದೆ. ಚುಟುಕು ಮಾದರಿಯಲ್ಲಿ ಭಾರತಕ್ಕೆ ಎರಡನೇ ಬಾರಿ ಕಪ್​ ಗೆಲ್ಲಿಸಿಕೊಟ್ಟ ಕೀರ್ತಿ ನಾಯಕ ರೋಹಿತ್​ ಶರ್ಮಗೆ ಸಲ್ಲುತ್ತದೆ. ತಂಡ ಕಪ್​ ಗೆಲ್ಲುತ್ತಿದ್ದಂತೆ ಟಿ20 ಮಾದರಿಗೆ ನಿವೃತ್ತಿ ಘೋಷಿಸಿದ ರೋಹಿತ್​ ಶರ್ಮ (Rohit Sharma) ಯಾವುದೇ ಕಾರಣವನ್ನು ನೀಡಿರಲಿಲ್ಲ. ಹಿಟ್​ಮ್ಯಾನ್​ನ ದಿಢೀರ್​ ನಿರ್ಧಾರ ಹಲವರಿಗೆ ಅಚ್ಚರಿ ಮೂಡಿಸಿತ್ತು.

ಟಿ20 ಮಾದರಿಯಂತೆ ಟೆಸ್ಟ್​ ಹಾಗೂ ಏಕದಿನಕ್ಕೂ ರೋಹಿತ್​ ನಿವೃತ್ತಿ ಘೋಷಿಸಲಿದ್ದಾರೆ ಎಂದು ಹೇಳಲಾಗಿತ್ತಾದರೂ ಈ ಬಗ್ಗೆ ಇನ್ನೂ ನಿರ್ಧರಿಸಿಲ್ಲ ಎಂದು ಹಿಟ್​ಮ್ಯಾನ್​ ತಿಳಿಸಿದ್ದರು. ಇದೀಗ ತಾವು ಟಿ20 ಮಾದರಿಗೆ ನಿವೃತ್ತೀ ಘೋಷಿಸಿದರ ಕುರಿತು ರೋಹಿತ್​ ಶರ್ಮ ಮಾತನಾಡಿದ್ದು, ಈ ಬಗ್ಗೆ ಕಾರಣವನ್ನು ತಿಳಿಸಿದ್ದಾರೆ.

ನಾನು ಸಾಕಷ್ಟು ಸಮಯದವರೆಗೆ ಟಿ20 ಪಂದ್ಯಗಳನ್ನು ಆಡಿದ್ದೇನೆ ಇದೇ ಕಾರಣಕ್ಕೆ ನಿವೃತ್ತಿ ಹೊಂದಲು ಬಯಸಿದ್ದು. ನಾನು ಚುಟುಕು ಮಾದರಿಯಲ್ಲಿ 17 ವರ್ಷಗಳ ಕಾಲ ಉತ್ತಮವಾಗಿ ಆಡಿದ್ದು, ನೀವು ವಿಶ್ವಕಪ್ ಗೆದ್ದಾಗ, ಇಲ್ಲಿಂದ ಮುಂದುವರೆಯದಿರಲು ಮತ್ತು ಬೇರೆ ವಿಚಾರಗಳ ಬಗ್ಗೆ ಗಮನ ಹರಿಸಲು ಇದು ಸೂಕ್ತ ಸಮಯ ಎನಿಸಿತು. ಭಾರತಕ್ಕಾಗಿ ಉತ್ತಮ ಪ್ರದರ್ಶನ ನೀಡುವ ಸಾಕಷ್ಟು ಉತ್ತಮ ಆಟಗಾರರಿದ್ದಾರೆ. ನಿವೃತ್ತಿಗೆ ಇದು ಸರಿಯಾದ ಸಮಯ ಎಂದು ನಾನು ಭಾವಿಸಿದೆ. ಇನ್ನೂ ಕೂಡ ಎಲ್ಲಾ ಮೂರು ಸ್ವರೂಪಗಳನ್ನು ಸುಲಭವಾಗಿ ಆಡಬಲ್ಲೇ. ಅದಕ್ಕಾಗಿಯೇ ನಾನು ಮಾನಸಿಕವಾಗಿ ಫಿಟ್ ಆಗಿದ್ದೇನೆ. ಎಲ್ಲವೂ ನಮ್ಮ ಮನಸ್ಸಿನಲ್ಲಿದೆ ಎಂದು ನಾನು ನಂಬುತ್ತೇನೆ, ನನಗೆ ಸಾಕಷ್ಟು ಆತ್ಮ ವಿಶ್ವಾಸವಿದೆ ಏಕೆಂದರೆ ನಾನು ನನ್ನ ಮನಸ್ಸನ್ನು ನಿಯಂತ್ರಿಸಬಲ್ಲೇ.

17 ವರ್ಷಗಳ ಕಾಲ ಆಡಿದ ನಾನು ಈಗ ಭಾರತಕ್ಕಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ 500 ಪಂದ್ಯಗಳನ್ನು ಸಮೀಪಿಸುತ್ತಿದ್ದೇನೆ. ಜಾಗತಿಕವಾಗಿ ಬಹಳಷ್ಟು ಕ್ರಿಕೆಟಿಗರು 500 ಪಂದ್ಯಗಳನ್ನು ಆಡಿಲ್ಲ. ಇಷ್ಟು ಪಂದ್ಯ ಆಡಿರುವವರು ತುಂಬಾ ಕಡಿಮೆ ಮಂದಿ ಇರಬೇಕು. ಅಷ್ಟೊಂದು ಸುದೀರ್ಘವಾಗಿ ಕ್ರಿಕೆಟ್ ಆಡಬೇಕು ಎಂದರೆ ನಿಮ್ಮ ದಿನಚರಿ ಉತ್ತಮವಾಗಿರಬೇಕು. ನೀವು ಆಟವನ್ನು ಹೇಗೆ ಆಡುತ್ತೀರಿ, ನಿಮ್ಮ ಫಿಟ್ನೆಸ್, ಮನಸ್ಸನ್ನು ನೀವು ಹೇಗೆ ನಿರ್ವಹಿಸುತ್ತೀರಿ ಮತ್ತು ನೀವೇ ಹೇಗೆ ತರಬೇತಿ ನೀಡುತ್ತೀರಿ ಎಂಬುದು ಮುಖ್ಯವಾಗಿದೆ. ಆಟಕ್ಕೆ ಹೇಗೆ ತಯಾರಾಗುತ್ತೀರಿ, ದಿನದ ಕೊನೆಯಲ್ಲಿ ಪಂದ್ಯಗಳನ್ನು ಗೆಲ್ಲಲು ನೂರರಷ್ಟು ಕೊಡುಗೆ ನೀಡಲು ಸಾಧ್ಯವಾಯ್ತಾ ಎಂಬುದು ಪ್ರತಿಯೊಂದು ಅಂಶವು ಲೆಕ್ಕಕ್ಕೆ ಬರುತ್ತದೆ. ಇದಕ್ಕೆಲ್ಲ ನಿಮ್ಮ ಮಾನಸಿಕ ಫಿಟ್ನೆಸ್ ಕೂಡ ಅಷ್ಟೇ ಮುಖ್ಯ ಎಂದು ಟೀಮ್​ ಇಂಡಿಯಾ ನಾಯಕ ರೋಹಿತ್​ ಶರ್ಮ ಚುಟುಕು ಮಾದರಿಗೆ ನಿವೃತ್ತಿ ಘೋಷಿಸಿದರ ಕುರಿತು ಕಾರಣವನ್ನು ತಿಳಿಸಿದ್ದಾರೆ.