ನವದೆಹಲಿ: ಟೀಮ್ ಇಂಡಿಯಾದಲ್ಲಿ ಆಡಿದ ಲೆಜೆಂಡರಿ ಕ್ರಿಕೆಟಿಗರು ತಮ್ಮ ವೃತ್ತಿ ಜೀವನದಲ್ಲಿ ಎಷ್ಟು ರನ್ ಗಳಿಸಿದ್ದಾರೆ ಮತ್ತು ಅವರ ಖಾತೆಯಲ್ಲಿ ಎಷ್ಟು ಐಸಿಸಿ ಟ್ರೋಫಿಗಳಿವೆ ಎಂಬುದನ್ನು ಕ್ರಿಕೆಟ್ ಅಭಿಮಾನಿಗಳು ಗಮನಿಸುತ್ತಾರೆ. ಮತ್ತೊಂದೆಡೆ ಆಟಗಾರರು ಕೂಡ ತಮ್ಮ ವೃತ್ತಿ ಜೀವನದಲ್ಲಿ ಒಮ್ಮೆಯಾದರೂ ವಿಶ್ವಕಪ್ ಗೆಲ್ಲುವ ಗುರಿಯನ್ನು ಹೊಂದಿರುತ್ತಾರೆ. ಐದು ಬಾರಿ ವಿಶ್ವಕಪ್ ಆಡಿದ ಕ್ರಿಕೆಟ್ ದಂತಕತೆ ಸಚಿನ್ ಒಮ್ಮೆ ಮಾತ್ರ ವಿಶ್ವಕಪ್ ವಿಜೇತ ತಂಡದ ಭಾಗವಾದರು. 2011ರಲ್ಲಿ ಧೋನಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ವಿಶ್ವಕಪ್ ಗೆದ್ದಾಗ ಸಚಿನ್ ತಂಡದಲ್ಲಿದ್ದರು.
ವಿರಾಟ್ ಕೊಹ್ಲಿ ಟೀಮ್ ಇಂಡಿಯಾದಲ್ಲಿ 15 ವರ್ಷಗಳ ಕಾಲ ಇದ್ದರೂ ಕೂಡ ಈಗಷ್ಟೇ ಟಿ20 ವಿಶ್ವಕಪ್ ಸ್ವೀಕರಿಸಿದ್ದಾರೆ. ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ದಿಗ್ಗಜ ಕ್ರಿಕೆಟಿಗರಾದ ಸೌರವ್ ಗಂಗೂಲಿ ಹಾಗೂ ರಾಹುಲ್ ದ್ರಾವಿಡ್ ಒಮ್ಮೆಯು ವಿಶ್ವಕಪ್ಗೆ ಮುತ್ತಿಡಲು ಸಾಧ್ಯವಾಗಲಿಲ್ಲ. ಸದ್ಯ ಭಾರತ ತಂಡದ ನಾಯಕ ರೋಹಿತ್ ಶರ್ಮ ಅವರ ಖಾತೆಯಲ್ಲಿ ಏಕದಿನ ವಿಶ್ವಕಪ್ ಕೂಡ ಇಲ್ಲ. ಆದರೆ, ಟಿ20 ವಿಶ್ವಕಪ್ ಕೈಸೇರಿದೆ. ಪ್ರತಿಯೊಬ್ಬ ಲೆಜೆಂಡರಿ ಆಟಗಾರನ ವೃತ್ತಿಜೀವನವು ಒಂದಲ್ಲ ಒಂದು ರೀತಿಯಲ್ಲಿ ವಿಶ್ವಕಪ್‌ನೊಂದಿಗೆ ಕೊನೆಗೊಂಡಿದೆ.
ಆದರೆ, ಟೀಮ್ ಇಂಡಿಯಾ ಅತ್ಯಂತ ದುರದೃಷ್ಟಕರ ಆಟಗಾರರನ್ನು ಸಹ ಹೊಂದಿದೆ. ಈವರೆಗೆ ಆ ಸಾಲಿನಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮ ಸೇರಿಕೊಂಡಿದ್ದರು. ಏಕೆಂದರೆ, ಸುದೀರ್ಘ ಕಾಲ ತಂಡದ ನಾಯಕರಾಗಿ ಮತ್ತು ಉಪನಾಯಕರಾಗಿ ಆಡಿದರೂ ವಿಶ್ವಕಪ್ ದೂರದ ಕನಸಾಗಿತ್ತು. ಆದರೆ, ಈಗ ಅದು ನನಸಾಗಿದೆ. ಇಬ್ಬರಲ್ಲೂ ಟನ್‌ಗಟ್ಟಲೆ ಪ್ರತಿಭೆಗಳಿದ್ದರೂ ಅದೃಷ್ಟ ತಡವಾಗಿ ಕೈಹಿಡಿದಿದೆ. ಆದರೆ, ಅದಕ್ಕೂ ಮೀರಿದ ದುರಾದೃಷ್ಟ ಆಟಗಾರ ಟೀಮ್ ಇಂಡಿಯಾದಲ್ಲಿದ್ದಾರೆ. ಆತ ಯಾರು ಅಂದರೆ, ಕನ್ನಡಿಗ ಕೆ.ಎಲ್. ರಾಹುಲ್. 2014ರಿಂದ ಟೀಮ್ ಇಂಡಿಯಾದಲ್ಲಿದ್ದಾರೆ. ಆದರೆ, ಅವರ ಖಾತೆಯಲ್ಲಿ ಒಂದೇ ಒಂದು ಐಸಿಸಿ ಟ್ರೋಫಿ ಇಲ್ಲ. ಈ 10 ವರ್ಷಗಳ ಅವಧಿಯಲ್ಲಿ ಟೀಮ್ ಇಂಡಿಯಾ ಗೆದ್ದಿದ್ದು ಒಂದೇ ಒಂದು ಐಸಿಸಿ ಟ್ರೋಫಿ. ಆದರೆ, ದುರದೃಷ್ಟವಶಾತ್ ಅವರು ಅದರ ಭಾಗವಾಗಲು ಸಾಧ್ಯವಾಗಲಿಲ್ಲ.
ಐಪಿಎಲ್ 2024ಕ್ಕೂ ಮುನ್ನ ಅಮೋಘ ಫಾರ್ಮ್‌ನಲ್ಲಿದ್ದ ಕೆಎಲ್ ರಾಹುಲ್ ಭಾರತ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದಾರೆ. ಐಪಿಎಲ್ನಲ್ಲೂ ರಾಹುಲ್ ಮಿಂಚಿದರು. ಆದರೂ ಭಾರತದ ಆಯ್ಕೆಗಾರರು ಅವರನ್ನು ಆಯ್ಕೆ ಮಾಡಲಿಲ್ಲ. ಇದರೊಂದಿಗೆ ಟಿ20 ವಿಶ್ವಕಪ್ ವಿಜೇತ ತಂಡದ ಭಾಗವಾಗುವ ಅವಕಾಶವನ್ನು ಕಳೆದುಕೊಂಡರು. ರಾಹುಲ್ ಅವರು ಏಕದಿನ ವಿಶ್ವಕಪ್ 2019 ಮತ್ತು 2023 ಹಾಗೂ ಟಿ20 ವಿಶ್ವಕಪ್ 2022ರಲ್ಲಿ ತಂಡದ ಭಾಗವಾಗಿದ್ದರೂ. ಆದರೆ, ಈ ಅವಧಿಯಲ್ಲಿ ಟೀಮ್ ಇಂಡಿಯಾ ಕಪ್ ಗೆಲ್ಲಲು ವಿಫಲವಾಗಿದೆ. ದುರದೃಷ್ಟವಶಾತ್, ಕೆಎಲ್ ರಾಹುಲ್ ಒಂದೇ ಒಂದು ಟ್ರೋಫಿ ಇಲ್ಲದೆ ಸ್ಟಾರ್ ಆಟಗಾರನಾಗಿ ಉಳಿದಿದ್ದಾರೆ.
2025ರ ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿಯಾದರೂ ಆಯ್ಕೆಯಾಗಿ ಆ ಕಪ್ ಗೆದ್ದು ಐಸಿಸಿ ಟ್ರೋಫಿಯ ಕೊರತೆಯನ್ನು ನೀಗಿಸುವರೇ ಕಾದು ನೋಡಬೇಕಿದೆ. (ಏಜೆನ್ಸೀಸ್)