ಪರ್ತ್: ಯುವ ವೇಗದ ಬೌಲಿಂಗ್ ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಪರ್ತ್ನಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಪರ ಪದಾರ್ಪಣೆ ಮಾಡುವ ಸಾಧ್ಯತೆಗಳಿವೆ. ಈ ಮೂಲಕ 4ನೇ ವೇಗದ ಬೌಲರ್ ಆಗಿಯೂ ಅವರನ್ನು ಬಳಸಿಕೊಳ್ಳಲು ಭಾರತ ಯೋಜಿಸಿದೆ. ಪರ್ತ್ನ ಆಪ್ಟಸ್ ಸ್ಟೇಡಿಯಂನ ಪಿಚ್ ಭಾರಿ ಬೌನ್ಸ್ನಿಂದ ಕೂಡಿದೆ. ಹೀಗಾಗಿ ಅವರ ಬೌಲಿಂಗ್ ಕೂಡ ಭಾರತಕ್ಕೆ ನೆರವಾಗುವ ನಿರೀಕ್ಷೆ ಇದೆ. 21 ವರ್ಷದ ನಿತೀಶ್ ಇದುವರೆಗೆ ಆಂಧ್ರ ಪರ 21 ಪ್ರಥಮ ದರ್ಜೆ ಪಂದ್ಯಗಳನ್ನಷ್ಟೇ ಆಡಿದ್ದು, 1 ಶತಕ, 2 ಅರ್ಧಶತಕ ಬಾರಿಸಿದ್ದು, 56 ವಿಕೆಟ್ ಕಬಳಿಸಿದ್ದಾರೆ. ಐಪಿಎಲ್ನಲ್ಲಿ ಸನ್ರೈಸರ್ಸ್ ಪರವೂ ಮಿಂಚಿದ್ದಾರೆ.
ಶಮಿ ಸೇರ್ಪಡೆಗೆ ಅವಸರವಿಲ್ಲ
ರಣಜಿ ಟ್ರೋಫಿಯಲ್ಲಿ ಬಂಗಾಳ ಪರ ಮರಳಿ ಕಣಕ್ಕಿಳಿದು 7 ವಿಕೆಟ್ ಕಬಳಿಸಿ ಮಿಂಚಿರುವ ವೇಗಿ ಮೊಹಮದ್ ಶಮಿ ಅವರನ್ನು ಆಸೀಸ್ ಪ್ರವಾಸದಲ್ಲಿರುವ ಭಾರತ ಟೆಸ್ಟ್ ತಂಡಕ್ಕೆ ಸೇರ್ಪಡೆಗೊಳಿಸಲು ಬಿಸಿಸಿಐ ಅವಸರ ತೋರುವುದಿಲ್ಲ ಎನ್ನಲಾಗಿದೆ. ಶಮಿ ಇನ್ನಷ್ಟು ದೇಶೀಯ ಪಂದ್ಯಗಳಲ್ಲಿ ಆಡಿ ಹಿಂದಿನ ಲಯ ಕಂಡುಕೊಳ್ಳಲಿ ಎಂದು ಟೀಮ್ ಇಂಡಿಯಾದ ಮ್ಯಾನೇಜ್ಮೆಂಟ್ ಕೂಡ ಬಯಸಿದೆ. ಇದರಿಂದಾಗಿ ಶಮಿ ಮುಂಬರುವ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲೂ ಆಡುವ ನಿರೀಕ್ಷೆ ಇದೆ.