ಕ್ರೀಡೆ

ಏಕದಿನ ವಿಶ್ವಕಪ್​ ವೇಳಾಪಟ್ಟಿಯಲ್ಲಿ 9 ಪಂದ್ಯಗಳ ದಿನಾಂಕ ಬದಲಾಯಿಸಿದ ಐಸಿಸಿ

ನವದೆಹಲಿ: ಮುಂಬರುವ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಆತಿಥೇಯ ಭಾರತ ಮತ್ತು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡಗಳು ನಡುವೆ ಅಹಮದಾಬಾದ್​ನಲ್ಲಿ ಅಕ್ಟೋಬರ್​ 15ರಂದು ನಡೆಯಬೇಕಿದ್ದ ಹೈ-ವೋಲ್ಟೇಜ್​ ಪಂದ್ಯವನ್ನು ಒಂದು ದಿನ ಮುನ್ನ ಅಂದರೆ ಅಕ್ಟೋಬರ್​ 14ಕ್ಕೆ ಮರುನಿಗದಿಗೊಳಿಸಲಾಗಿದೆ. ಇದರೊಂದಿಗೆ ಟೂರ್ನಿಯ ಒಟ್ಟು 9 ಪಂದ್ಯಗಳ ದಿನಾಂಕ ಬದಲಾವಣೆ ಕಂಡಿದೆ. ಪರಿಷ್ಕೃತ ವೇಳಾಪಟ್ಟಿಯನ್ನು ಐಸಿಸಿ ಬುಧವಾರ ಬಿಡುಗಡೆಗೊಳಿಸಿದೆ.

ಅಕ್ಟೋಬರ್​ 15 ನವರಾತ್ರಿ ಹಬ್ಬದ ಮೊದಲ ದಿನ ಆಗಿದ್ದು, ಇದು ಗುಜರಾತ್​ನ ಅತಿದೊಡ್ಡ ಹಬ್ಬವೆನಿಸಿದೆ. ಹೀಗಾಗಿ ಆ ದಿನದಂದು ಪಂದ್ಯಕ್ಕೆ ಭದ್ರತೆ ಒದಗಿಸುವುದು ಪೊಲೀಸರಿಗೆ ಸವಾಲೆನಿಸಿದ ಕಾರಣ ವೇಳಾಪಟ್ಟಿಯಲ್ಲಿ ಬದಲಾವಣೆ ತರಲಾಗಿದೆ. ಭಾರತದ 2 ಪಂದ್ಯಗಳ ದಿನಾಂಕ ಬದಲಾವಣೆ ಕಂಡಿದ್ದರೆ, ಪಾಕಿಸ್ತಾನ ಮತ್ತು ಇಂಗ್ಲೆಂಡ್​ ತಂಡಗಳ ತಲಾ 3 ಪಂದ್ಯಗಳ ದಿನಾಂಕ ಅಥವಾ ಸಮಯ ಬದಲಾಗಿದೆ.

ಭಾರತ-ಪಾಕ್​ ಪಂದ್ಯದ ದಿನಾಂಕ ಬದಲಾವಣೆಯಿಂದಾಗಿ, ಮೂಲ ವೇಳಾಪಟ್ಟಿಯಲ್ಲಿ ಅಕ್ಟೋಬರ್​ 14ರಂದು ನವದೆಹಲಿಯಲ್ಲಿ ನಿಗದಿಯಾಗಿದ್ದ ಇಂಗ್ಲೆಂಡ್​-ಅಫ್ಘಾನಿಸ್ತಾನ ಪಂದ್ಯವನ್ನು ಅಕ್ಟೋಬರ್​ 15ಕ್ಕೆ ಮುಂದೂಡಲಾಗಿದೆ. ಅಲ್ಲದೆ ಪಾಕ್​ ತಂಡಕ್ಕೆ ಭಾರತ ವಿರುದ್ಧದ ಪಂದ್ಯಕ್ಕೆ ಸಿದ್ಧತೆ ನಡೆಸಲು ಸೂಕ್ತ ಸಮಯ ಒದಗಿಸುವ ಸಲುವಾಗಿ ಅಕ್ಟೋಬರ್​ 11ರಂದು ಹೈದರಾಬಾದ್​ನಲ್ಲಿ ನಿಗದಿಯಾಗಿದ್ದ ಶ್ರೀಲಂಕಾ ವಿರುದ್ಧದ ಪಂದ್ಯವನ್ನು ಅಕ್ಟೋಬರ್​ 10ಕ್ಕೆ ಮರುನಿಗದಿಗೊಳಿಸಲಾಗಿದೆ. ಅಲ್ಲದೆ ಅಕ್ಟೋಬರ್​ 10ರಂದು ಧರ್ಮಶಾಲಾದಲ್ಲಿ ಅಹರ್ನಿಶಿಯಾಗಿ ನಡೆಯಬೇಕಾಗಿದ್ದ ಬಾಂಗ್ಲಾದೇಶ-ಇಂಗ್ಲೆಂಡ್​ ನಡುವಿನ ಪಂದ್ಯವನ್ನು ಈಗ ಬೆಳಗ್ಗೆ 10.30ಕ್ಕೆ ಆರಂಭಗೊಳ್ಳುವ ಹಗಲು ಪಂದ್ಯವನ್ನಾಗಿ ಬದಲಾಯಿಸಲಾಗಿದೆ.

ಅಕ್ಟೋಬರ್​ 14ರಂದು ಚೆನ್ನೈನಲ್ಲಿ ನ್ಯೂಜಿಲೆಂಡ್​-ಬಾಂಗ್ಲಾ ನಡುವೆ ಹಗಲಿನಲ್ಲಿ ನಿಗದಿಯಾಗಿದ್ದ ಪಂದ್ಯವನ್ನು ಈಗ ಅಕ್ಟೋಬರ್​ 13ರಂದು ಅಹರ್ನಿಶಿಯಾಗಿ ಆಡಿಸಲು ನಿರ್ಧರಿಸಲಾಗಿದೆ. ಅಕ್ಟೋಬರ್​ 13ರಂದು ಲಖನೌದಲ್ಲಿ ನಿಗದಿಯಾಗಿದ್ದ ಆಸ್ಟ್ರೆಲಿಯಾ-ದಕ್ಷಿಣ ಆಫ್ರಿಕಾ ನಡುವಿನ ಪಂದ್ಯವನ್ನು ಈಗ ಅಕ್ಟೋಬರ್​ 12ರಂದು ಆಡಲಾಗುವುದು ಎಂದು ಐಸಿಸಿ ತಿಳಿಸಿದೆ. ದಿನಾಂಕ ಬದಲಾವಣೆ ಕಂಡ ಎಲ್ಲ 9 ಪಂದ್ಯಗಳ ತಾಣದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

ಬೆಂಗಳೂರು ಪಂದ್ಯದ ದಿನಾಂಕವೂ ಬದಲು

ಭಾರತ ತಂಡ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ತನ್ನ 9ನೇ ಹಾಗೂ ಕೊನೇ ಲೀಗ್​ ಪಂದ್ಯವನ್ನು ನೆದರ್ಲೆಂಡ್​ ವಿರುದ್ಧ ನವೆಂಬರ್​ 12ರಂದು ಆಡಲಿದೆ. ಈ ಮೊದಲಿನ ವೇಳಾಪಟ್ಟಿ ಪ್ರಕಾರ ಈ ಪಂದ್ಯ ನವೆಂಬರ್​ 11ರಂದು ನಿಗದಿಯಾಗಿತ್ತು. ನವೆಂಬರ್​ 12ರಂದು ಕಾಳಿ ಪೂಜೆ ಇರುವುದರಿಂದ ಆ ದಿನ ಕೋಲ್ಕತದಲ್ಲಿ ನಿಗದಿಯಾಗಿದ್ದ ಪಾಕಿಸ್ತಾನ-ಇಂಗ್ಲೆಂಡ್​ ನಡುವಿನ ಪಂದ್ಯಕ್ಕೆ ಭದ್ರತೆ ಒದಗಿಸುವುದು ಕಷ್ಟ ಎಂದು ಬಂಗಾಳ ಪೊಲೀಸರು ತಿಳಿಸಿರುವ ಹಿನ್ನೆಲೆಯಲ್ಲಿ ಆ ಪಂದ್ಯವನ್ನು ಒಂದು ದಿನ ಮುನ್ನ ಅಂದರೆ ನವೆಂಬರ್​ 11ರಂದೇ ಆಡಿಸಲು ನಿರ್ಧರಿಸಲಾಗಿದೆ. ಇದರಿಂದಾಗಿ ನವೆಂಬರ್​ 11ರಂದು ನಿಗದಿಯಾಗಿದ್ದ ಬೆಂಗಳೂರಿನ ಪಂದ್ಯದ ದಿನಾಂಕವನ್ನೂ ಬದಲಾಯಿಸಲಾಗಿದೆ.