ಹಾಂಗ್ರೆೌ: ಎರಡು ಬಾರಿಯ ವಿಶ್ವ ಚಾಂಪಿಯನ್ ಬಾಕ್ಸರ್ ನಿಖತ್ ಜರೀನ್ ಏಷ್ಯನ್ ಗೇಮ್ಸ್ನಲ್ಲಿ ಸೆಮಿಫೈನಲ್ ಪ್ರವೇಶಿಸುವುದರೊಂದಿಗೆ ಪದಕ ಖಚಿತಪಡಿಸಿಕೊಂಡಿದ್ದು, ಮುಂದಿನ ವರ್ಷದ ಪ್ಯಾರಿಸ್ ಒಲಿಂಪಿಕ್ಸ್ಗೂ ಭಾರತಕ್ಕೆ ಕೋಟಾ ಸ್ಥಾನ ಗೆದ್ದುಕೊಟ್ಟಿದ್ದಾರೆ.
ಮಹಿಳೆಯರ 50 ಕೆಜಿ ವಿಭಾಗದಲ್ಲಿ ಶುಕ್ರವಾರ ನಡೆದ ಕ್ವಾರ್ಟರ್ಫೈನಲ್ನಲ್ಲಿ ಜರೀನ್, ಜೋರ್ಡನ್ನ ನಸಾರ್ ಹನನ್ಗೆ ಸತತ ಪಂಚ್ ನೀಡಿ ಕಂಗೆಡಿಸಿದಾಗ ರೆಫ್ರಿ ಪಂದ್ಯವನ್ನು ನಿಲ್ಲಿಸಿ (ಆರ್ಎಸ್ಸಿ) ಭಾರತದ ಬಾಕ್ಸರ್ ವಿಜಯಿ ಎಂದು ಘೋಷಿಸಿದರು. ಇದರಿಂದ ಜರೀನ್ 3 ನಿಮಿಷಕ್ಕೂ ಕಡಿಮೆ ಸಮಯದಲ್ಲಿ ಗೆಲುವು ಒಲಿಸಿಕೊಂಡರು.
ಮಹಿಳೆಯರ 57 ಕೆಜಿ ವಿಭಾದಲ್ಲಿ ಪ್ರವಿಣ್ ಹೂಡಾ ಕ್ವಾರ್ಟರ್ಫೈನಲ್ಗೇರಿದರು. ಅವರು ಚೀನಾದ ಝಿಚುನ್ ಕ್ಸು ವಿರುದ್ಧ 5-0ಯಿಂದ ಗೆದ್ದರು. ಪುರುಷರ 80 ಕೆಜಿ ವಿಭಾಗದಲ್ಲಿ ಲಕ್ಷ್ಯ ಚಹರ್ ಪ್ರಿ ಕ್ವಾರ್ಟರ್ಫೈನಲ್ನಲ್ಲೇ ಮುಗ್ಗರಿಸಿದರು.