ಕ್ರೀಡೆ

ಟೆಸ್ಟ್ ವಿಶ್ವಕಪ್ ಫೈನಲ್‌ಗೇರಿದ ನ್ಯೂಜಿಲೆಂಡ್; ಟೀಮ್​ ಇಂಡಿಯಾದ ಹಾದಿ ಹೀಗಿದೆ...

ಸಿಡ್ನಿ: ಮುಂದಿನ ಮಾರ್ಚ್ ತಿಂಗಳಲ್ಲಿ ನಡೆಯಬೇಕಾಗಿದ್ದ ಆಸ್ಟ್ರೇಲಿಯಾ ತಂಡದ ದಕ್ಷಿಣ ಆಫ್ರಿಕಾ ಪ್ರವಾಸ ಕರೊನಾ ಭೀತಿಯಿಂದಾಗಿ ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾಗಿದೆ. ಇದರ ಪರಿಣಾಮವಾಗಿ ನ್ಯೂಜಿಲೆಂಡ್ ತಂಡ, ‘ಟೆಸ್ಟ್ ವಿಶ್ವಕಪ್’ ಖ್ಯಾತಿಯ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ (ಡಬ್ಲ್ಯುಟಿಸಿ) ಮೊಟ್ಟಮೊದಲ ತಂಡವಾಗಿ ಫೈನಲ್ ಪ್ರವೇಶವನ್ನು ಖಚಿತಪಡಿಸಿಕೊಂಡಿದೆ.

ಆಸ್ಟ್ರೇಲಿಯಾ ತಂಡಕ್ಕೆ ಡಬ್ಲ್ಯುಟಿಸಿ ಫೈನಲ್‌ಗೇರಲು ದಕ್ಷಿಣ ಆಫ್ರಿಕಾ ಪ್ರವಾಸದ 3 ಪಂದ್ಯಗಳ ಟೆಸ್ಟ್ ಸರಣಿ ನಿರ್ಣಾಯಕವೆನಿಸಿತ್ತು. ಇದೀಗ ಸರಣಿ ಮುಂದೂಡಿಕೆಯಿಂದಾಗಿ ಆಸ್ಟ್ರೇಲಿಯಾ ತಂಡದ ಫೈನಲ್ ಪ್ರವೇಶ ಅವಕಾಶಕ್ಕೆ ಭಾರಿ ಹಿನ್ನಡೆಯಾಗಿದೆ. ಆದರೂ, ಭಾರತ-ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಫಲಿತಾಂಶದ ಆಧಾರದಲ್ಲಿ ಆಸೀಸ್ ಭವಿಷ್ಯ ನಿರ್ಧಾರವಾಗಲಿದೆ.

ದಕ್ಷಿಣ ಆಫ್ರಿಕಾದಲ್ಲಿ ಕರೊನಾ ಹಾವಳಿಯಿಂದಾಗಿ ಆಸೀಸ್ ತಂಡ ಪ್ರವಾಸದಿಂದ ಹಿಂದೆ ಸರಿದಿದೆ. ದಕ್ಷಿಣ ಆಫ್ರಿಕಾ ಕರೊನಾ ಹೊಡೆತದ 2ನೇ ಅಲೆಯಿಂದ ಇತ್ತೀಚೆಗಷ್ಟೇ ತುಸು ಚೇತರಿಕೆ ಕಂಡಿದೆ. ಆದರೂ ದಕ್ಷಿಣ ಆಫ್ರಿಕಾದಲ್ಲಿ ಈಗಲೂ ಪ್ರತಿದಿನ 5 ಸಾವಿರ ಹೊಸ ಪ್ರಕರಣಗಳು ದಾಖಲಾಗುತ್ತಿವೆ.

ಕರೊನಾ ಕಾಲದಲ್ಲಿ ದಕ್ಷಿಣ ಆಫ್ರಿಕಾಕ್ಕೆ ಇಂಗ್ಲೆಂಡ್ ಮತ್ತು ಶ್ರೀಲಂಕಾ ತಂಡಗಳು ಪ್ರವಾಸ ಕೈಗೊಂಡು ಆಡಿದ್ದವು. ಆದರೆ ಬಯೋ-ಬಬಲ್‌ನಲ್ಲೇ ಕರೊನಾ ಸೋಂಕು ಪತ್ತೆಯಾದ ಬಳಿಕ ಇಂಗ್ಲೆಂಡ್ ತಂಡ ಪ್ರವಾಸವನ್ನು ಮೊಟಕುಗೊಳಿಸಿ ತವರಿಗೆ ಮರಳಿತ್ತು.

ಆಸೀಸ್ ತಂಡದ ಆಟಗಾರರು ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಸಿದ್ಧವಾಗಿದ್ದರು ಮತ್ತು ಈಗಾಗಲೆ ತಂಡವನ್ನೂ ಪ್ರಕಟಿಸಲಾಗಿತ್ತು. ಆದರೆ ವೈದ್ಯಕೀಯ ತಜ್ಞರ ಸಲಹೆಯ ಮೇರೆಗೆ ಆಸ್ಟ್ರೇಲಿಯಾ ತಂಡ ‘ಆರೋಗ್ಯದ ಅಪಾಯ’ದ ಕಾರಣದಿಂದ ಮಾರ್ಚ್‌ನಲ್ಲಿ ಪ್ರವಾಸ ಕೈಗೊಳ್ಳದಿರಲು ನಿರ್ಧರಿಸಿದೆ.

ಏಕದಿನ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ 11ನೇ ಆವೃತ್ತಿಯಲ್ಲಿ ಫೈನಲ್‌ಗೇರಿತ್ತು. ಟಿ20 ವಿಶ್ವಕಪ್‌ನಲ್ಲಿ ಇದುವರೆಗಿನ 6 ಆವೃತ್ತಿಗಳಲ್ಲೂ ಫೈನಲ್‌ಗೇರಿಲ್ಲ. ಆದರೆ ಟೆಸ್ಟ್ ವಿಶ್ವಕಪ್‌ನಲ್ಲಿ ಕಿವೀಸ್ ಮೊದಲ ಆವೃತ್ತಿಯಲ್ಲೇ ಫೈನಲ್‌ಗೇರಿದೆ.

ಭಾರತ, ಇಂಗ್ಲೆಂಡ್, ಆಸೀಸ್ ತ್ರಿಕೋನ ಸ್ಪರ್ಧೆ

ಜೂನ್‌ನಲ್ಲಿ ಲಾರ್ಡ್ಸ್‌ನಲ್ಲಿ ನಡೆಯಲಿರುವ ಡಬ್ಲ್ಯುಟಿಸಿ ಫೈನಲ್ ಪಂದ್ಯದಲ್ಲಿ ‘ವಿಶ್ವ ಟೆಸ್ಟ್ ಚಾಂಪಿಯನ್’ ಪಟ್ಟಕ್ಕೆ ನ್ಯೂಜಿಲೆಂಡ್‌ಗೆ ಸವಾಲೊಡ್ಡುವ ಅವಕಾಶಕ್ಕಾಗಿ ಇದೀಗ ಭಾರತ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ದಕ್ಷಿಣ ಆಫ್ರಿಕಾ ಪ್ರವಾಸ ಮುಂದೂಡಿಕೆಯಿಂದಾಗಿ ಈಗ ಆಸೀಸ್ ಭವಿಷ್ಯ ಅದರ ಕೈಯಲ್ಲಿಲ್ಲ. ಅದಕ್ಕೆ ಬದಲಾಗಿ ಭಾರತ-ಇಂಗ್ಲೆಂಡ್ ನಡುವಿನ ಸರಣಿಯ ಫಲಿತಾಂಶವನ್ನು ಅವಲಂಭಿಸಿದೆ. ಭಾರತ-ಇಂಗ್ಲೆಂಡ್ ಸರಣಿ ಡ್ರಾಗೊಂಡರೆ ಆಸ್ಟ್ರೇಲಿಯಾಕ್ಕೆ ಫೈನಲ್‌ಗೇರುವ ಅವಕಾಶವಿದೆ.

ಡಬ್ಲ್ಯುಟಿಸಿ ಫೈನಲ್ ಲೆಕ್ಕಾಚಾರ (ಭಾರತ-ಇಂಗ್ಲೆಂಡ್ ಸರಣಿ ಫಲಿತಾಂಶದ ಆಧಾರದಲ್ಲಿ):

*ಭಾರತ 4-0, 3-0, 3-1, 2-0 ಅಥವಾ 2-1ರಿಂದ ಗೆದ್ದರೆ ಫೈನಲ್‌ಗೇರಲಿದೆ.

*ಭಾರತ 1-0ಯಿಂದಷ್ಟೇ ಗೆದ್ದರೆ, ಸರಣಿ ಸಮಬಲಗೊಂಡರೆ, ಇಂಗ್ಲೆಂಡ್ 1-0, 2-1, 2-0ಯಿಂದಷ್ಟೇ ಗೆದ್ದರೆ ಆಗ ಆಸ್ಟ್ರೇಲಿಯಾ ಫೈನಲ್‌ಗೇರಲಿದೆ.

*ಇಂಗ್ಲೆಂಡ್ 3-1, 3-0 ಅಥವಾ 4-0ಯಿಂದ ಗೆದ್ದರೆ ಫೈನಲ್‌ಗೇರಲಿದೆ.