ಕ್ರೀಡೆ

ವೆಸ್ಟ್ ಇಂಡೀಸ್ ವಿರುದ್ಧ ಗೆಲುವಿನಂಚಿನಲ್ಲಿ ಆತಿಥೇಯ ನ್ಯೂಜಿಲೆಂಡ್

ವೆಲ್ಲಿಂಗ್ಟನ್: ಬೌಲರ್‌ಗಳ ಅಬ್ಬರದ ಫಲವಾಗಿ ಆತಿಥೇಯ ನ್ಯೂಜಿಲೆಂಡ್ ತಂಡ 2ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ವೆಸ್ಟ್ ಇಂಡೀಸ್ ಎದುರು ಇನಿಂಗ್ಸ್ ಗೆಲುವಿನ ಸನಿಹದಲ್ಲಿದೆ. ಬಸಿನ್ ರಿಸರ್ವ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ 8 ವಿಕೆಟ್‌ಗೆ 124 ರನ್‌ಗಳಿಂದ ಭಾನುವಾರ ಮೊದಲ ಇನಿಂಗ್ಸ್ ಆರಂಭಿಸಿದ ವೆಸ್ಟ್ ಇಂಡೀಸ್ 131 ರನ್‌ಗಳಿಗೆ ಸರ್ವಪತನ ಕಂಡಿತು.

ಇದರಿಂದ 329 ರನ್ ಇನಿಂಗ್ಸ್ ಮುನ್ನಡೆ ಸಾಧಿಸಿದ ನ್ಯೂಜಿಲೆಂಡ್, ಪ್ರವಾಸಿ ತಂಡಕ್ಕೆ ಫಾಲೋಆನ್ ಹೇರಿತು. ಭಾರಿ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ವೆಸ್ಟ್ ಇಂಡೀಸ್, ಟ್ರೆಂಟ್ ಬೌಲ್ಟ್ (75ಕ್ಕೆ 3) ಹಾಗೂ ಕೈಲ್ ಜೇಮಿಸನ್ (43ಕ್ಕೆ 2) ಜೋಡಿ ಮಾರಕ ದಾಳಿಗೆ ನಲುಗಿ ಮೂರನೇ ದಿನದಾಟದ ಅಂತ್ಯಕ್ಕೆ 6 ವಿಕೆಟ್‌ಗೆ 244 ರನ್ ಪೇರಿಸಿದ್ದು, ಇನಿಂಗ್ಸ್ ಸೋಲು ತಪ್ಪಿಸಿಕೊಳ್ಳಲು ಇನ್ನು 85 ರನ್ ಗಳಿಸಬೇಕಿದೆ. ನ್ಯೂಜಿಲೆಂಡ್ ಮೊದಲ ಇನಿಂಗ್ಸ್ 460 ರನ್ ಕಲೆಹಾಕಿತ್ತು.

ನ್ಯೂಜಿಲೆಂಡ್ : 460, ವೆಸ್ಟ್ ಇಂಡೀಸ್: 131 (ಟೀಮ್ ಸೌಥಿ 32ಕ್ಕೆ 5) ಮತ್ತು 6 ವಿಕೆಟ್‌ಗೆ 244 (ಕ್ರೇಗ್ ಬ್ರಾಥ್‌ವೇಟ್ 24, ಜಾನ್ ಕ್ಯಾಂಪ್‌ಬೆಲ್ 68, ಶಾಮಹ ಬ್ರೂಕ್ಸ್ 36, ಜೇಸನ್ ಹೋಲ್ಡರ್ 60*, ಜೋಶ್ವಾ ಡಿ ಸಿಲ್ವಾ 25*, ಟ್ರೆಂಟ್ ಬೌಲ್ಟ್ 75ಕ್ಕೆ 3, ಕೈಲ್ ಜೇಮಿಸನ್ 43ಕ್ಕೆ 2, ನೀಲ್ ವಾಗ್ನರ್ 53ಕ್ಕೆ 1).