ನವದೆಹಲಿ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಟೆಸ್ಟ್ ಪಂದ್ಯ, ಏಕದಿನ ಪಂದ್ಯ, ಟಿ20 ಪಂದ್ಯಗಳು ನಡೆಯುತ್ತವೆ. ಕೆಲವೆಡೆ ಟಿ10 ಎಂಬ ಇನಿಂಗ್ಸ್‌ಗೆ 10 ಓವರ್‌ಗಳ ಫ್ರಾಂಚೈಸಿ ಲೀಗ್‌ಗಳೂ ನಡೆಯುತ್ತಿವೆ. ಈಗ ಇದೆಲ್ಲದರ ಮೇಲೆ ಮತ್ತೊಂದು ಲೀಗ್ ಬರಲಿದೆ. ಅದೇ ಹಾಂಗ್ಕಾಂಗ್ ಕ್ರಿಕೆಟ್ ಸಿಕ್ಸಸ್ ( Hong Kong Cricket Sixes ) ಟೂರ್ನಿ. ಹಾಂಗ್ಕಾಂಗ್ ( Hong Kong ) ನಲ್ಲಿ ನಡೆಯಲಿರುವ ಈ ಟೂರ್ನಿಯಲ್ಲಿ ಒಟ್ಟು 12 ದೇಶಗಳು ಭಾಗವಹಿಸಲಿವೆ. ಅದರಲ್ಲಿ ಟೀಮ್ ಇಂಡಿಯಾ ( Team India ) ಕೂಡ ಸೇರಿದೆ ಎಂದು ಟೂರ್ನಿಯ ಆಯೋಜಕರು ಅಧಿಕೃತವಾಗಿ ಪ್ರಕಟಿಸಿದ್ದಾರೆ.
ಇನ್ನು ಈ ಹಾಂಗ್ಕಾಂಗ್ ಸಿಕ್ಸರ್ ಪಂದ್ಯಾವಳಿಯು 1992ರಲ್ಲಿ ಪ್ರಾರಂಭವಾಯಿತು. 2017 ರವರೆಗೆ ಮುಂದುವರೆಯಿತು. ಇದಾದ ನಂತರ ಕೆಲ ಕಾರಣಾಂತರಗಳಿಂದ ಈ ಟೂರ್ನಿಯನ್ನು ನಿಲ್ಲಿಸಲಾಯಿತು. ಪಂದ್ಯಾವಳಿಯ ಆಯೋಜಕರು ಈ ವರ್ಷ ಮತ್ತೆ ಪ್ರಾರಂಭಿಸಲು ವ್ಯವಸ್ಥೆ ಮಾಡಿದ್ದಾರೆ. ಆದರೆ, ಈ ಪಂದ್ಯಾವಳಿಯಲ್ಲಿ ತೀರಾ ವಿಚಿತ್ರ ನಿಯಮಗಳಿವೆ. ಗಲ್ಲಿ ಕ್ರಿಕೆಟ್ನ ಕೆಲವು ನಿಯಮಗಳಿವೆ.
ಈ ಹಿಂದೆ ಟೀಮ್ ಇಂಡಿಯಾ ( Team India ) ಕೂಡ ಈ ಟೂರ್ನಿಯಲ್ಲಿ ಆಡಿದೆ. ಸಚಿನ್ ತೆಂಡೂಲ್ಕರ್, ಅಜಯ್ ಜಡೇಜಾ, ಧೋನಿ ಮುಂತಾದ ಸ್ಟಾರ್ ಕ್ರಿಕೆಟಿಗರು ಈ ಟೂರ್ನಿಯಲ್ಲಿ ಟೀಮ್ ಇಂಡಿಯಾ ಪರ ಆಡಿದ್ದರು. ಇನ್ನೊಂದು ವಿಶೇಷವೆಂದರೆ ಈ ಟೂರ್ನಿಯಲ್ಲಿ ಭಾರತದೊಂದಿಗೆ ಪಾಕಿಸ್ತಾನ ಕೂಡ ಭಾಗವಹಿಸಲಿದೆ. ಇದರೊಂದಿಗೆ ಈ ಟೂರ್ನಿಯಲ್ಲಿ ಭಾರತ-ಪಾಕಿಸ್ತಾನ ನಡುವಿನ ಪಂದ್ಯವನ್ನು ವೀಕ್ಷಿಸುವ ಅವಕಾಶ ಕ್ರಿಕೆಟ್ ಅಭಿಮಾನಿಗಳಿಗೆ ಲಭಿಸಲಿದೆ.
ನಾವೀಗ ಪಂದ್ಯಾವಳಿಯ ನಿಯಮಗಳ ಬಗ್ಗೆ ತಿಳಿಯೋಣ. ಒಟ್ಟು 12 ತಂಡಗಳು ಈ ಹಾಂಗ್ಕಾಂಗ್ ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ. ಪ್ರತಿ ತಂಡವು ಕೇವಲ ಆರು ಆಟಗಾರರನ್ನು ಹೊಂದಿರಲಿವೆ. ಸಾಮಾನ್ಯವಾಗಿ ಕ್ರಿಕೆಟ್ ತಂಡದಲ್ಲಿ 11 ಮಂದಿ ಇರುತ್ತಾರೆ. ಆದರೆ, ಇಲ್ಲಿ 6 ಮಂದಿಗೆ ಮಾತ್ರ ಸೀಮಿತವಾಗಿದೆ. ಅದೇ ಈ ಟೂರ್ನಿಯ ವಿಶೇಷ. ಇಷ್ಟೇ ಅಲ್ಲ, ಇನ್ನೂ ಹಲವು ಅಚ್ಚರಿಗಳು ಈ ಟೂರ್ನಿಯಲ್ಲಿವೆ.
ಪ್ರತಿ ತಂಡಕ್ಕೆ ಆರು ಆಟಗಾರರು ಹಾಗೂ ಪ್ರತಿ ಇನ್ನಿಂಗ್ಸ್ಗೆ ಕೇವಲ 5 ಓವರ್ಗಳು ಇರಲಿವೆ. ಹಾಗೆಯೇ ಅಂತಿಮ ಪಂದ್ಯದಲ್ಲಿ ಪ್ರತಿ ಓವರ್‌ಗೆ 8 ಎಸೆತಗಳನ್ನು ಹಾಕಲಾಗುತ್ತದೆ. ಸಾಮಾನ್ಯವಾಗಿ ನಮಗೆ ತಿಳಿದಿರುವುದು ಪ್ರತಿ ಓವರ್‌ಗೆ 6 ಎಸೆತಗಳು ಮಾತ್ರ. ಇಂಗ್ಲೆಂಡ್‌ನಲ್ಲಿ ನಡೆಯುವ ದಿ ಹಂಡ್ರೆಡ್ ಟೂರ್ನಿಯಲ್ಲಿ ಪ್ರತಿ ಓವರ್‌ಗೆ 5 ಎಸೆತಗಳನ್ನು ಹಾಕಲಾಗುತ್ತದೆ. ಈ ಹಾಂಗ್ಕಾಂಗ್ ಟೂರ್ನಿಯ ಫೈನಲ್ ಪಂದ್ಯಕ್ಕೆ ಪ್ರತಿ ಓವರ್‌ಗೆ 8 ಎಸೆತಗಳನ್ನು ಎಸೆಯಲಾಗುತ್ತದೆ. ಮತ್ತೊಂದು ರೋಚಕ ಟ್ವಿಸ್ಟ್ ಏನೆಂದರೆ ಬ್ಯಾಟರ್ 31 ರನ್ ಗಳಿಸಿದರೆ ನಿವೃತ್ತಿಯಾಗಬೇಕಾಗುತ್ತದೆ. ಉಳಿದ ಬ್ಯಾಟರ್ಗಳೆಲ್ಲ ಔಟಾದರೆ ಅಥವಾ ನಿವೃತ್ತಿಯಾದರೆ ಮತ್ತೆ ಬ್ಯಾಟಿಂಗ್ ಮಾಡುವ ಅವಕಾಶವಿದೆ. ಅಲ್ಲದೇ ಐದನೇ ವಿಕೆಟ್ ಪತನದ ನಂತರ ಆಲ್ ಔಟ್ ಎಂದು ಪರಿಗಣಿಸುವುದಿಲ್ಲ. ಕೊನೆಯ ಬ್ಯಾಟರ್ ಮಾತ್ರ ಸಿಂಗಲ್ ಬ್ಯಾಟ್ ಮಾಡಬಹುದು. ಇದು ಸಂಪೂರ್ಣವಾಗಿ ಗಲ್ಲಿ ಕ್ರಿಕೆಟ್ ನಿಯಮವಾಗಿದೆ. ಐದನೇ ವಿಕೆಟ್‌ಗೆ ಔಟಾದ ಬ್ಯಾಟರ್ ರನ್ನರ್ ಆಗಿ ಹಾಕಲಾಗುತ್ತದೆ. ಕೊನೆಯ ಬ್ಯಾಟರ್ ಬ್ಯಾಟಿಂಗ್ ಮುಂದುವರಿಸುತ್ತಾನೆ. ಒಂದು ವೇಳೆ ಎಲ್ಲ ಆರು ವಿಕೆಟ್‌ಗಳು ಪತನವಾದರೆ ಆಲೌಟ್ ಎಂದು ಲೆಕ್ಕ ಹಾಕಲಾಗುತ್ತದೆ. ಈ ಕಾರಣಕ್ಕೆ ಈ ಟೂರ್ನಿಯಲ್ಲಿ ವಿಚಿತ್ರ ನಿಯಮಗಳಿವೆ.
ಈ ಹಿಂದೆ ಈ ಟೂರ್ನಿಯಲ್ಲಿ ಆಡಿದ್ದ ದಿಗ್ಗಜ ಕ್ರಿಕೆಟಿಗ ಸಚಿನ್, ಕೇವಲ 11 ಎಸೆತಗಳಲ್ಲಿ 32 ರನ್ ಗಳಿಸಿ ನಿವೃತ್ತಿಯಾಗಿದ್ದರು. 2005ರಲ್ಲಿ ಟೀಮ್ ಇಂಡಿಯಾ ಟೂರ್ನಿಯ ಚಾಂಪಿಯನ್ ಆಗಿತ್ತು. ಇನ್ನು ಈ ಟೂರ್ನಿಯಲ್ಲಿ ಟೀಮ್ ಇಂಡಿಯಾ ಪರವಾಗಿ ಯಾವ ಆರು ಆಟಗಾರರು ಭಾಗವಹಿಸಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಏಕೆಂದರೆ, ಈ ಟೂರ್ನಿ ನವೆಂಬರ್ 1ರಿಂದ 3ರವರೆಗೆ ನಡೆಯಲಿದೆ. ಟಿ20 ಕ್ರಿಕೆಟ್ ಆಡುತ್ತಿರುವ ನಾಯಕ ಸೂರ್ಯ ಕುಮಾರ್ ಯಾದವ್, ರಿಂಕು ಸಿಂಗ್, ರಿಷಭ್ ಪಂತ್ರಂತಹ ಯುವ ಕ್ರಿಕೆಟಿಗರನ್ನು ಕಳುಹಿಸುತ್ತಾರಾ? ಅಥವಾ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಅವರನ್ನೂ ಈ ಟೂರ್ನಿಗೆ ಕಳುಹಿಸುತ್ತಾರೆಯೇ? ಅದನ್ನು ಕಾದು ನೋಡಬೇಕು.
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ರೋಹಿತ್ ಮತ್ತು ಕೊಹ್ಲಿ ನಿವೃತ್ತಿ ಘೋಷಿಸಿದ್ದು ಗೊತ್ತೇ ಇದೆ. ಆದರೆ, ಈ ಹಾಂಗ್ಕಾಂಗ್ ಟೂರ್ನಿಯು ಟಿ20 ಕ್ರಿಕೆಟ್ ಅಲ್ಲ. ಹಾಗಾಗಿ, ರೋಹಿತ್ ಹಾಗೂ ಕೊಹ್ಲಿಯನ್ನು ಕಳುಹಿಸಲು ಯಾವುದೇ ಅಭ್ಯಂತರ ಇರುವುದಿಲ್ಲ. ಮೇಲಾಗಿ ಇಬ್ಬರೂ ಆಡಿದರೆ ಆ ಟೂರ್ನಿಗೆ ಪ್ಲಸ್ ಆಗಲಿದೆ. ಅಂದಹಾಗೆ ಈ ಟೂರ್ನಿಯಲ್ಲಿ ಟೀಮ್ ಇಂಡಿಯಾ ಯಾವ ರೀತಿ ಆಡಲಿದೆ? ಯಾವ ಆಟಗಾರರು ಆಡಲಿದ್ದಾರೆ ಎಂಬುದನ್ನು ಕಾದು ನೋಡೋಣ. (ಏಜೆನ್ಸೀಸ್)