ಕ್ರೀಡೆ

ಈ ಬಾರಿ ಏಷ್ಯಾಡ್​ನಲ್ಲಿ ಪಬ್​ಜಿ ವಿಡಿಯೋ ಗೇಮ್​, ಬ್ರೇಕ್​ ಡ್ಯಾನ್ಸಿಂಗ್​ಗೂ ಪದಕ ಸ್ಪರ್ಧೆ!

ಹಾಂಗ್​ರೆೌ: ಆಧುನಿಕ ಕ್ರೀಡಾಸ್ಪರ್ಧೆಗಳಾಗಿ ಇ-ಸ್ಪೋರ್ಟ್ಸ್​ (ವಿಡಿಯೋಗೇಮ್​) ಮತ್ತು ಬ್ರೇಕ್​ ಡ್ಯಾನ್ಸಿಂಗ್​ ಈ ಬಾರಿ ಏಷ್ಯಾಡ್​ಗೆ ಹೊಸದಾಗಿ ಸೇರ್ಪಡೆಗೊಂಡಿವೆ. ಪಬ್​ಜಿ, ಸ್ಟ್ರೀಟ್ ಫೈಟರ್​-5 ಸಹಿತ ಒಟ್ಟು 7 ವಿಡಿಯೋ ಗೇಮ್​ ಸ್ಪರ್ಧೆಗಳು ಇ-ಸ್ಪೋರ್ಟ್ಸ್​ನಲ್ಲಿರಲಿವೆ. ಭಾರತವೂ ಇದಕ್ಕೆ 15 ಸ್ಪರ್ಧಿಗಳನ್ನು ಕಳುಹಿಸಿದ್ದು, ಫಿಫಾ ಆನ್​ಲೈನ್​ ಗೇಮ್​ನಲ್ಲಿ ಪದಕ ಗೆಲ್ಲುವ ನಿರೀಕ್ಷೆಯೂ ಇದೆ.

ನೃತ್ಯ ಕೌಶಲ ಪ್ರಾಮುಖ್ಯತೆಯ ಬ್ರೇಕ್​ ಡ್ಯಾನ್ಸಿಂಗ್​ ಮುಂದಿನ ವರ್ಷದ ಪ್ಯಾರಿಸ್​ ಒಲಿಂಪಿಕ್ಸ್​ನಲ್ಲೂ ಇರಲಿದ್ದು, ಅದಕ್ಕೆ ಪೂರ್ವಭಾವಿಯಾಗಿ ಏಷ್ಯಾಡ್​ನಲ್ಲಿ ಈ ಸ್ಪರ್ಧೆಯನ್ನು ಪರಿಚಯಿಸಲಾಗುತ್ತಿದೆ. ಕಳೆದ ಆವೃತ್ತಿಯಲ್ಲಿ ಹೊಸದಾಗಿ ಸೇರ್ಪಡೆಯಾಗಿದ್ದ ಕಾರ್ಡ್​ಗೇಮ್​ "ಬ್ರಿಡ್ಜ್​' ಈ ಸಲವೂ ಮುಂದುವರಿದಿದೆ.

ಏಷ್ಯಾಡ್​ನಲ್ಲಿ 13 ವರ್ಷಗಳ ಬಳಿಕ ಚೆಸ್​, 9 ವರ್ಷಗಳ ಬಳಿಕ ಕ್ರಿಕೆಟ್​ನಲ್ಲಿ ಚಿನ್ನ ಗೆಲ್ಲುವ ಅವಕಾಶ

ಏಷ್ಯನ್​ ಗೇಮ್ಸ್​ನಲ್ಲಿ ಈ ಬಾರಿ ಚೆಸ್​ ಮತ್ತು ಕ್ರಿಕೆಟ್​ ಸ್ಪರ್ಧೆಗಳು ಮರುಸೇರ್ಪಡೆಯಾಗಿವೆ. ಚೆಸ್​ 13 ವರ್ಷಗಳ ಬಳಿಕ ಮತ್ತು ಕ್ರಿಕೆಟ್​ 9 ವರ್ಷಗಳ ಬಳಿಕ ಮರಳುತ್ತಿದೆ. ಇವೆರಡರಲ್ಲೂ ಭಾರತ ಹೆಚ್ಚಿನ ಪದಕ ಗೆಲ್ಲುವ ನಿರೀಕ್ಷೆ ಇದೆ. ಚೆಸ್​ನಲ್ಲಿ ಬಲಿಷ್ಠ ತಂಡವೇ ಕಣಕ್ಕಿಳಿಯುತ್ತಿದ್ದರೆ, ವಿಶ್ವಕಪ್​ ಹಿನ್ನೆಲೆಯಲ್ಲಿ ಪುರುಷರ ಕ್ರಿಕೆಟ್​ನಲ್ಲಿ ಭಾರತ ಮಾತ್ರವಲ್ಲದೆ, ಪಾಕ್​, ಶ್ರೀಲಂಕಾ, ಬಾಂಗ್ಲಾದೇಶವೂ 2ನೇ ದರ್ಜೆ ತಂಡವನ್ನು ಕಣಕ್ಕಿಳಿಸುತ್ತಿದೆ.

ಒಲಿಂಪಿಕ್ಸ್​ ಅರ್ಹತೆ ಅವಕಾಶ

ಮುಂದಿನ ವರ್ಷದ ಪ್ಯಾರಿಸ್​ ಒಲಿಂಪಿಕ್ಸ್​ಗೆ ಸಿದ್ಧತೆ ನಡೆಸಲು ಮತ್ತು ಅರ್ಹತೆ ಸಂಪಾದಿಸಲು ಕೂಡ ಏಷ್ಯನ್​ ಗೇಮ್ಸ್​ನಲ್ಲಿ ಅವಕಾಶವಿದೆ. 9 ಕ್ರೀಡೆಗಳಾದ ಆರ್ಚರಿ, ಆರ್ಟಿಸ್ಟಿಕ್​ ಸ್ವಿಮ್ಮಿಂಗ್​, ಬಾಕ್ಸಿಂಗ್​, ಬ್ರೇಕ್​ ಡ್ಯಾನ್ಸ್​, ಹಾಕಿ, ಸೈಲಿಂಗ್​, ಟೆನಿಸ್​, ವಾಟರ್​ಪೋಲೋ ಮತ್ತು ಮಾಡರ್ನ್​ ಪೆಂಟಾಥ್ಲಾನ್​ನಲ್ಲಿ ಚಿನ್ನ ಗೆದ್ದರೆ ಒಲಿಂಪಿಕ್ಸ್​ ಅರ್ಹತೆ ಗಳಿಸಬಹುದಾಗಿದೆ. ಇನ್ನು ಅಥ್ಲೆಟಿಕ್ಸ್​, ಈಜಿನಲ್ಲಿ ಪದಕ ಗೆಲ್ಲದಿದ್ದರೂ, ಒಲಿಂಪಿಕ್ಸ್​ ಅರ್ಹತಾ ಮಾನದಂಡದ ನಿರ್ವಹಣೆ ತೋರಿದರೆ ಅರ್ಹತೆ ಗಳಿಸಬಹುದಾಗಿದೆ.