ಬೆಂಗಳೂರು: ಚೀನಾ ಮೂಲದ ಮೊಬೈಲ್ ಕಂಪನಿ ಕೊನೇಕ್ಷಣದಲ್ಲಿ ಹಿಂದೆ ಸರಿದ ಬಳಿಕ ಕೊನೆಗೂ ಬಿಸಿಸಿಐ, ಐಪಿಎಲ್ 13ನೇ ಆವೃತ್ತಿಗೆ ಹೊಸ ಶೀರ್ಷಿಕೆ ಪ್ರಾಯೋಜಕರನ್ನು ಕಂಡುಕೊಳ್ಳುವಲ್ಲಿ ಸಫಲವಾಗಿದೆ. ಈ ಹಿಂದೆ ಪತಂಜಲಿ, ಜಿಯೋ ಕಂಪನಿಗಳು ಐಪಿಎಲ್ ಪ್ರಾಯೋಜಕತ್ವಕ್ಕೆ ಆಸಕ್ತಿ ತೋರಿದಾಗ ಟ್ರೋಲ್ ಮಾಡಿದ್ದ ನೆಟ್ಟಿಗರು ಇದೀಗ ಡ್ರೀಮ್11ಗೆ ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವ ಒಲಿದಿರುವುದಕ್ಕೂ ಭರ್ಜರಿ ಕಾಲೆಳೆದಿದ್ದಾರೆ.
ಡ್ರೀಮ್11 ನಿರೀಕ್ಷೆಗಿಂತ ಕಡಿಮೆ ಎನಿಸಿದ 222 ಕೋಟಿ ರೂ. ಮೊತ್ತಕ್ಕೆ ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವ ಒಲಿಸಿಕೊಂಡ ಬೆನ್ನಲ್ಲೇ ಟ್ವಿಟರ್ನಲ್ಲಿ 'ಡ್ರೀಮ್11ಐಪಿಎಲ್' ಹ್ಯಾಷ್ಟ್ಯಾಗ್ ಭರ್ಜರಿ ಟ್ರೆಂಡಿಂಗ್ನಲ್ಲಿ ಕಾಣಿಸಿದ್ದು, ನೆಟ್ಟಿಗರು ವಿವಿಧ ಮೀಮ್ಸ್ಗಳ ಮೂಲಕ ನಗು ಮೂಡಿಸಿದ್ದಾರೆ.
ವಿಶ್ವದ ಅತ್ಯಂತ ವೇಗದ ಓಟಗಾರ ಉಸೇನ್ ಬೋಲ್ಟ್ ರೀತಿಯಲ್ಲಿ ಡ್ರೀಮ್11 ರೇಸ್ನಲ್ಲಿದ್ದ ಇತರ ಕಂಪನಿಗಳನ್ನು ಹಿಂದಿಕ್ಕಿ ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವ ಬಾಚಿಕೊಂಡಿತು ಎಂಬ ರೀತಿಯಲ್ಲೂ ಟ್ರೋಲ್ ಮಾಡಲಾಗಿದೆ. ಡ್ರೀಮ್11ಗೆ ಟೈಟಲ್ ಸ್ಪಾನ್ಸರ್ಶಿಪ್ ಒಲಿದ ಬಳಿಕ ಪತಂಜಲಿ, ಜಿಯೋ ಸಹಿತ ಇತರ ಕಂಪನಿಗಳು ಯಾವ ರೀತಿಯಲ್ಲಿ ನಿರಾಸೆ ಎದುರಿಸುತ್ತಿರಬಹುದು ಎಂಬುದನ್ನು ವಿವಿಧ ಮೀಮ್ಸ್ಗಳ ಮೂಲಕ ತೋರಿಸಲಾಗಿದೆ.