ಬುಡಾಪೆಸ್ಟ್ (ಹಂಗೆರಿ): ಟೋಕಿಯೊ ಒಲಿಂಪಿಕ್ಸ್ನಲ್ಲಿ ನೀರಜ್ ಚೋಪ್ರಾ ಸ್ವರ್ಣ ಪದಕ ಗೆದ್ದು ಇತಿಹಾಸ ಬರೆದ ಬಳಿಕ ಅದರಿಂದ ಸ್ಫೂರ್ತಿ ಪಡೆದ ಭಾರತದ ಅಥ್ಲೀಟ್ಗಳು ಜಾಗತಿಕ ಮಟ್ಟದಲ್ಲಿ ಪ್ರಗತಿಯ ಹಾದಿಯಲ್ಲಿದ್ದಾರೆ. ಕಳೆದ ವರ್ಷ ಕಾಮನ್ವೆಲ್ತ್ ಗೇಮ್ಸ್ ಮತ್ತು ವಿಶ್ವ ಚಾಂಪಿಯನ್ಷಿಪ್ನಲ್ಲಿ ಭಾರತದ ಅಥ್ಲೀಟ್ಗಳು ಭರ್ಜರಿ ಯಶಸ್ಸು ಕಂಡಿದ್ದರು. ಇದೀಗ ಶನಿವಾರ ಆರಂಭಗೊಳ್ಳಲಿರುವ 19ನೇ ಆವೃತ್ತಿಯ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ನಲ್ಲೂ ಯಶಸ್ಸಿನ ಅಲೆ ಮುಂದುವರಿಸಲು ಭಾರತದ ಅಥ್ಲೀಟ್ಗಳು ಸಜ್ಜಾಗಿದ್ದಾರೆ. ಈ ಬಾರಿ ದಾಖಲೆಯ 28 ಭಾರತೀಯ ಅಥ್ಲೀಟ್ಗಳು ಕಣದಲ್ಲಿದ್ದು, ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಕಳೆದ ಆವೃತ್ತಿಯಲ್ಲಿ ಗೆದ್ದಿದ್ದ ರಜತವನ್ನು ಸ್ವರ್ಣ ಪದಕವಾಗಿ ಬದಲಾಯಿಸಲು ಸಜ್ಜಾಗಿದ್ದಾರೆ.
ಜಾವೆಲಿನ್ ಎಸೆತದಲ್ಲಿ ಭಾರತದ ಮೂವರು ಸ್ಪರ್ಧಿಸಲಿದ್ದರೆ, ಲಾಂಗ್ಜಂಪ್ನಲ್ಲೂ ಭಾರತದ ಇಬ್ಬರು ಸ್ಪರ್ಧಿಗಳಾದ ಮುರಳಿ ಶ್ರೀಶಂಕರ್ ಮತ್ತು ಜೆಸ್ವಿನ್ ಅಲ್ಡ್ರಿನ್ ಪದಕ ಆಕಾಂಗಳಾಗಿದ್ದಾರೆ. ಕಳೆದ ಬಾರಿ 3000ಮೀ. ಸ್ಟೀಪಲ್ಚೇಸ್ನಲ್ಲಿ ಫೈನಲ್ಗೇರಿದ್ದ ರಾಷ್ಟ್ರೀಯ ದಾಖಲೆ ವೀರ ಅವಿನಾಶ್ ಸಾಬ್ಲೆ ಈ ಬಾರಿ ಪದಕ ಒಲಿಸಿಕೊಳ್ಳುವ ಹಂಬಲದಲ್ಲಿದ್ದಾರೆ. ಮಹಿಳಾ ವಿಭಾಗದಲ್ಲಿ ಹರ್ಡಲ್ಸ್ ತಾರೆ ಜ್ಯೋತಿ ಯರಾಜಿ ಮತ್ತು ಲಾಂಗ್ಜಂಪ್ ಪಟು ಶೈಲಿ ಸಿಂಗ್ ಭಾರತದ ಪ್ರಮುಖ ಆಶಾಕಿರಣವೆನಿಸಿದ್ದಾರೆ.
ಒಟ್ಟು 9 ದಿನಗಳ ಕಾಲ ನಡೆಯಲಿರುವ ಜಾಗತಿಕ ಕ್ರೀಡಾಕೂಟದಲ್ಲಿ 200ಕ್ಕೂ ಅಧಿಕ ದೇಶಗಳಿಂದ ಅಥ್ಲೀಟ್ಗಳು ಭಾಗವಹಿಸಲಿದ್ದು, ಒಟ್ಟು 49 ಸ್ವರ್ಣ ಪದಕಗಳಿಗೆ ಟ್ರಾ$್ಯಕ್ ಆಂಡ್ ಫೀಲ್ಡ್ ಸ್ಪರ್ಧೆಗಳು ನಡೆಯಲಿವೆ.
ನೀರಜ್ಗೆ 90 ಮೀಟರ್ ಗುರಿ
ಒಲಿಂಪಿಕ್ಸ್ ಚಾಂಪಿಯನ್ ನೀರಜ್ ಚೋಪ್ರಾ ಚಿನ್ನ ಗೆದ್ದು ವಿಶ್ವ ಚಾಂಪಿಯನ್ ಪಟ್ಟವೇರುವ ಜತೆಗೆ ಮೊದಲ ಬಾರಿಗೆ 90 ಮೀ. ಗಡಿಯನ್ನು ದಾಟುವ ಹಂಬಲದಲ್ಲಿದ್ದಾರೆ. 90 ಮೀ. ದಾಟುವ ಸನಿಹದಲ್ಲಿರುವೆ. ಅದಕ್ಕೆ ಅನುಕೂಲಕರ ವಾತಾವರಣದ ನೆರವಷ್ಟೇ ಸಿಗಬೇಕಾಗಿದೆ ಎಂದು ನೀರಜ್ ಹೇಳಿದ್ದಾರೆ. ಕಳೆದ ವರ್ಷ ಡೈಮಂಡ್ ಲೀಗ್ನಲ್ಲಿ 89.94 ಮೀ. ಎಸೆದಿದ್ದು ಅವರ ಗರಿಷ್ಠ ದೂರದ ಎಸೆತವಾಗಿದೆ. ಜೂನ್ 30ರ ಲಾಸನ್ನೆ ಡೈಮಂಡ್ ಲೀಗ್ ಬಳಿಕ 25 ವರ್ಷದ ನೀರಜ್ ಮೊದಲ ಬಾರಿ ಕಣಕ್ಕಿಳಿಯಲಿದ್ದಾರೆ. ಈ ಕೂಟದ ಬೆನ್ನಲ್ಲೇ ಡೈಮಂಡ್ ಲೀಗ್ ಫೈನಲ್ ಮತ್ತು ಏಷ್ಯನ್ ಗೇಮ್ಸ್ ಸವಾಲುಗಳೂ ಅವರ ಮುಂದಿವೆ. ಗಾಯದಿಂದಾಗಿ 2 ತಿಂಗಳು ವಿಶ್ರಾಂತಿ ಪಡೆದ ಬಳಿಕ ಮರಳಿ ಕಣಕ್ಕಿಳಿಯುತ್ತಿರುವ ನೀರಜ್ಗೆ ಜೆಕ್ ಗಣರಾಜ್ಯದ ಜೇಕಬ್ ವಡ್ಲೆಜ್, ಜರ್ಮನಿಯ ಜೂಲಿಯನ್ ವೆಬರ್, ಹಾಲಿ ಚಾಂಪಿಯನ್ ಆಂಡರ್ಸನ್ ಪೀಟರ್ಸ್ ಪ್ರಬಲ ಪ್ರತಿಸ್ಪರ್ಧಿಗಳಾಗಿದ್ದಾರೆ. ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದರೆ, ಒಲಿಂಪಿಕ್ಸ್ ಮತ್ತು ವಿಶ್ವ ಚಾಂಪಿಯನ್ಷಿಪ್ ಎರಡರಲ್ಲೂ ಚಿನ್ನ ಗೆದ್ದ 2ನೇ ಭಾರತೀಯ ಎನಿಸಲಿದ್ದಾರೆ. ಶೂಟರ್ ಅಭಿನವ್ ಬಿಂದ್ರಾ ಮೊದಲ ಸಾಧಕ.
ಕಣದಲ್ಲಿ ಇಬ್ಬರು ಕನ್ನಡಿಗರು
ಜಾವೆಲಿನ್ ಎಸೆತ ಸ್ಪರ್ಧೆಯಲ್ಲಿ ನೀರಜ್ ಜತೆಗೆ ಕನ್ನಡಿಗ ಮನು ಡಿ.ಪಿ. ಕಣಕ್ಕಿಳಿಯಲಿದ್ದಾರೆ. ಕಳೆದ ಏಷ್ಯನ್ ಚಾಂಪಿಯನ್ಷಿಪ್ ರಜತ ಪದಕ ಗೆದ್ದಿದ್ದ 23 ವರ್ಷದ ಮನುಗೆ ಕನ್ನಡಿಗರೇ ಆದ ಕಾಶಿನಾಥ್ ನಾಯ್ಕ್ ಕೋಚ್ ಆಗಿದ್ದಾರೆ. ಸೈನಿಕರಾಗಿರುವ ಮನು, ಗರಿಷ್ಠ 84.35 ಮೀ. ಎಸೆತದ ದಾಖಲೆ ಹೊಂದಿದ್ದಾರೆ. ಪುರುಷರ 4/400 ಮೀ. ರಿಲೇ ತಂಡದಲ್ಲಿರುವ ಮಿಜೋ ಚಾಕೋ ಕುರಿಯನ್ ಕಣದಲ್ಲಿರುವ ಮತ್ತೋರ್ವ ಕನ್ನಡಿಗರಾಗಿದ್ದಾರೆ.
ಭಾರತದ ಪದಕ ಆಕಾಂಕ್ಷಿಗಳು
*ನೀರಜ್ ಚೋಪ್ರಾ (ಜಾವೆಲಿನ್ ಎಸೆತ)
ಸ್ಪರ್ಧೆ ದಿನಾಂಕ: ಅರ್ಹತಾ ಸುತ್ತು: ಆ. 25, ಫೈನಲ್: ಆ. 27
*ಮುರಳಿ ಶ್ರೀಶಂಕರ್ (ಲಾಂಗ್ಜಂಪ್)
ಸ್ಪರ್ಧೆ ದಿನಾಂಕ: ಅರ್ಹತಾ ಸುತ್ತು: ಆ.23, ಫೈನಲ್: ಆ.24
*ಪ್ರವಿಣ್ ಚಿತ್ರವೆಲ್ (ಟ್ರಿಪಲ್ ಜಂಪ್)
ಸ್ಪರ್ಧೆ ದಿನಾಂಕ: ಅರ್ಹತಾ ಸುತ್ತು: ಆ.19, ಫೈನಲ್: ಆ.21
*ಅವಿನಾಶ್ ಸಾಬ್ಲೆ (3000 ಮೀ. ಸ್ಟೀಪಲ್ಚೇಸ್)
ಸ್ಪರ್ಧೆ ದಿನಾಂಕ: ಹೀಟ್ಸ್: ಆ.19, ಫೈನಲ್: ಆ.22
*ಜ್ಯೋತಿ ಯರಾಜಿ (100 ಮೀ. ಹರ್ಡಲ್ಸ್)
ಸ್ಪರ್ಧೆ ದಿನಾಂಕ: ಹೀಟ್ಸ್: ಆ.22, ಸೆಮೀಸ್: ಆ.23, ಫೈನಲ್: ಆ24
*ಶೈಲಿ ಸಿಂಗ್ (ಲಾಂಗ್ಜಂಪ್)
ಸ್ಪರ್ಧೆ ದಿನಾಂಕ: ಅರ್ಹತಾ ಸುತ್ತು: ಆ.19, ಫೈನಲ್: ಆ.20
ಭಾರತ ಎರಡೇ ಪದಕ ಸಾಧನೆ
ವಿಶ್ವ ಅಥ್ಲೆಟಿಕ್ಸ್ನಲ್ಲಿ ಭಾರತ ಇದುವರೆಗೆ ಕೇವಲ 2 ಪದಕ ಗೆದ್ದುಕೊಂಡಿದೆ. 2003ರ ಪ್ಯಾರಿಸ್ ಕೂಟದಲ್ಲಿ ಅಂಜು ಬಾಬಿ ಜಾರ್ಜ್ ಲಾಂಗ್ಜಂಪ್ನಲ್ಲಿ ಕಂಚಿಗೆ ಕೊರಳೊಡ್ಡಿದ್ದರೆ, ಕಳೆದ ವರ್ಷ ನೀರಜ್ ಬೆಳ್ಳಿ ಪದಕ ಗೆದ್ದಿದ್ದರು. ಇದಲ್ಲದೆ ಕಳೆದ ವರ್ಷ ಭಾರತದ 6 ಅಥ್ಲೀಟ್ಗಳು ಫೈನಲ್ಗೇರಿದ್ದು ದಾಖಲೆ ಎನಿಸಿತ್ತು.