ನವದೆಹಲಿ: ಒಲಿಂಪಿಕ್ಸ್‌ನಲ್ಲಿ ಪದಕಗಳ ಮೂಲಕ ಭಾರತದ ಕೀರ್ತಿ ಪತಾಕೆಯನ್ನು ಹೆಚ್ಚಿಸಿರುವ ಖ್ಯಾತ ಅಥ್ಲೀಟ್ ಮತ್ತು ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ತಮ್ಮ ಗಳಿಕೆಯ ವಿಷಯದಲ್ಲೂ ಇದೀಗ ಎಲ್ಲರ ಗಮನ ಸೆಳೆದಿದ್ದಾರೆ. ಕ್ರಿಕೆಟಿಗರನ್ನು ದೇವಮಾನವರೆಂದೂ ಪರಿಗಣಿಸುವ ನಮ್ಮ ದೇಶದಲ್ಲಿ, ಕ್ರೀಡಾಪಟು ಒಬ್ಬ ಇಷ್ಟೊಂದು ಮನ್ನಣೆ ಪಡೆಯುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.
ಇತ್ತೀಚೆಗೆ ಮುಕ್ತಾಯಗೊಂಡ ಪ್ಯಾರಿಸ್ ಒಲಿಂಪಿಕ್ಸ್ ನಂತರ ನೀರಜ್ ಚೋಪ್ರಾ ಅವರ ಬ್ರ್ಯಾಂಡ್ ಮೌಲ್ಯವು ಶೇ. 50 ರಷ್ಟು ಹೆಚ್ಚಾಗಿದೆ ಎಂದು ಮನಿ ಕಂಟ್ರೋಲ್ ವೆಬ್‌ಸೈಟ್ ವರದಿ ಮಾಡಿದೆ. ಬ್ರ್ಯಾಂಡ್ ಮೌಲ್ಯದ ಹೆಚ್ಚಳದ ಜತೆಗೆ, ಅವರು ಜಾಹೀರಾತಿಗೆ ಅನುಮೋದಿಸುತ್ತಿರುವ ಕಂಪನಿಗಳ ಸಂಖ್ಯೆಯು ಸಹ ಬೃಹತ್ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಇದರಿಂದ ನೀರಜ್ ಚೋಪ್ರಾ ಅವರ ಗಳಿಕೆಯೂ ಕೂಡ ಹೆಚ್ಚಾಗಲಿದೆ ಎಂದು ಮನಿ ಕಂಟ್ರೋಲ್ ಬಹಿರಂಗಪಡಿಸಿದೆ.
ಟೋಕಿಯೋ ಒಲಿಂಪಿಕ್ಸ್ 2020ರಲ್ಲಿ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಮತ್ತು ಇತ್ತೀಚೆಗೆ ಮುಕ್ತಾಯಗೊಂಡ ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ಬೆಳ್ಳಿ ಪದಕ ಗೆದ್ದ ನಂತರ ನೀರಜ್ ಚೋಪ್ರಾ ಅವರ ಬ್ರ್ಯಾಂಡ್ ಮೌಲ್ಯವು ಹೆಚ್ಚಾಗಿದೆ. ಇದಕ್ಕೂ ಮೊದಲು ನೀರಜ್ ಚೋಪ್ರಾ 21 ಬ್ರಾಂಡ್‌ಗಳ ಪ್ರಚಾರಕರಾಗಿದ್ದರು. ಈಗ ಇವರ ಕ್ರೇಜ್ ನೋಡಿ ಇನ್ನಷ್ಟು ಕಂಪನಿಗಳು ಇವರನ್ನು ತಮ್ಮ ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಿಕೊಳ್ಳಲು ಮುಂದೆ ಬರಬಹುದು. 2024ರ ಅಂತ್ಯದ ವೇಳೆಗೆ ಈ ಕಂಪನಿಗಳ ಸಂಖ್ಯೆ 32 ರಿಂದ 34 ತಲುಪಬಹುದು ಎಂದು ಅಂದಾಜಿಸಲಾಗಿದೆ.
ಈ ಮೊದಲು ನೀರಜ್ ಚೋಪ್ರಾ ಅವರು ಕಂಪನಿಗಳ ಬ್ರಾಂಡ್ ಅಂಬಾಸಿಡರ್ ಆಗಿ ವರ್ಷಕ್ಕೆ 3 ಕೋಟಿ ರೂ. ದುಡಿಯುತ್ತಿದ್ದರು. ಇದೀಗ ಅವರ ಬ್ರಾಂಡ್ ವ್ಯಾಲ್ಯೂ ಹೆಚ್ಚಳದಿಂದ ವರ್ಷಕ್ಕೆ 4.5 ಕೋಟಿಯಿಂದ 5 ಕೋಟಿ ರೂ.ವರೆಗೆ ಆದಾಯ ಸಿಗುವ ನಿರೀಕ್ಷೆ ಇದೆ. ಈ ವಿಚಾರದಲ್ಲಿ ನೀರಜ್ ಚೋಪ್ರಾ ಅವರು ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಅವರನ್ನು ಹಿಂದಿಕ್ಕಿದ್ದಾರೆ.
ಸದ್ಯ ನೀರಜ್ ಚೋಪ್ರಾ ಅವರು ಹಾರ್ದಿಕ್ ಪಾಂಡ್ಯಕ್ಕಿಂತ ಹೆಚ್ಚಿನ ಕಂಪನಿಗಳಿಗೆ ಬ್ರಾಂಡ್ ಅಂಬಾಸಿಡರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವುದರೊಂದಿಗೆ ನೀರಜ್ ಚೋಪ್ರಾ ಸಂಪತ್ತಿನಲ್ಲೂ ಉತ್ತುಂಗಕ್ಕೇರಿದ್ದಾರೆ. ಇವರ ಯಶಸ್ಸು ಹೀಗೆ ಮುಂದುವರಿಯಲಿ ಎಂದು ಕ್ರೀಡಾಭಿಮಾನಿಗಳು ಆಶಿಸಿದ್ದಾರೆ. (ಏಜೆನ್ಸೀಸ್)