ನವದೆಹಲಿ: ಭಾರತದ ಚಿನ್ನದ ಹುಡುಗ ನೀರಜ್ ಚೋಪ್ರಾ ಮೊಟ್ಟಮೊದಲ ಬಾರಿಗೆ ತವರು ನೆಲದಲ್ಲೇ ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್ ಕೂಟವೊಂದರಲ್ಲಿ ಸ್ಪರ್ಧಿಸುವ ಅವಕಾಶ ಪಡೆದುಕೊಂಡಿದ್ದಾರೆ. ಮೇ 24ರಂದು ಹರಿಯಾಣದ ಪಂಚಕುಲದಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್ ಆಡಳಿತ ಸಂಸ್ಥೆಯ ಕೂಟದಲ್ಲಿ ನೀರಜ್ ಚೋಪ್ರಾ ಪ್ರಮುಖ ವಿದೇಶಿ ಜಾವೆಲಿನ್ ಥ್ರೋ ತಾರೆಯರ ಎದುರು ತವರಿನ ಪ್ರೇಕ್ಷಕರ ಬೆಂಬಲದೊಂದಿಗೆ ಸ್ಪರ್ಧಿಸಲಿದ್ದಾರೆ.
ತವು ದೇವಿ ಲಾಲ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಕ್ರೀಡಾಕೂಟ ವಿಶ್ವ ಅಥ್ಲೆಟಿಕ್ಸ್ನ ಎ ದರ್ಜೆ ಮಾನ್ಯತೆಯನ್ನು ಪಡೆದಿದೆ. ಈ ಕೂಟವು ಜಾಗತಿಕ ಅಥ್ಲೆಟಿಕ್ಸ್ನಲ್ಲಿ ಭಾರತದ ವರ್ಚಸ್ಸು ಹೆಚ್ಚಿಸಲು ನೆರವಾಗಲಿದೆ ಎಂದು ಭಾರತೀಯ ಅಥ್ಲೆಟಿಕ್ಸ್ ಒಕ್ಕೂಟದ ಅಧ್ಯಕ್ಷ ಬಹದೂರ್ ಸಿಂಗ್ ಸಗೂ ಹೇಳಿದ್ದಾರೆ. "ನೀರಜ್ ಚೋಪ್ರಾ ತನ್ನ ಜೂನಿಯರ್ ಶಿಬಿರದ ಹೆಚ್ಚಿನ ಸಮಯವನ್ನು ಕಳೆದ ತಾಣದಲ್ಲೇ ಈ ಕ್ರೀಡಾಕೂಟ ನಡೆಯಲಿದೆ. ತನ್ನ ತವರು ನೆಲದಲ್ಲೇ ಸ್ಪರ್ಧಿಸುವುದು ಅವರ ಬಯಕೆಯೂ ಆಗಿತ್ತು. ನೀರಜ್ ಚೋಪ್ರಾ ಪಾಲ್ಗೊಳ್ಳುತ್ತಿರುವ ಜಾಗತಿಕ ಕೂಟವೊಂದರ ಆತಿಥ್ಯ ಭಾರತೀಯ ಅಥ್ಲೆಟಿಕ್ಸ್ಗೆ ಅತ್ಯುತ್ತಮ ಅವಕಾಶವಾಗಿದೆ' ಎಂದು ಬಹದೂರ್ ತಿಳಿಸಿದ್ದಾರೆ.
ಹಾಲಿ ವರ್ಷಾರಂಭದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ 27 ವರ್ಷದ ನೀರಜ್, ಮೇ 16ರಂದು ದೋಹಾ ಡೈಮಂಡ್ ಲೀಗ್ನಲ್ಲಿ ಹಾಲಿ ವರ್ಷದ ಮೊದಲ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಪಂಚಕುಲದ ಕೂಟ ಅವರ ಹಾಲಿ ವರ್ಷದ 2ನೇ ಸ್ಪರ್ಧೆ ಆಗಿರಲಿದೆ.