ಬುಡಾಪೆಸ್ಟ್: ಟೋಕಿಯೊ ಒಲಿಂಪಿಕ್ಸ್ ಸ್ವರ್ಣ ಪದಕ ವಿಜೇತ ನೀರಜ್ ಚೋಪ್ರಾ, ಕನ್ನಡಿಗ ಮನು ಡಿ.ಪಿ. ಮತ್ತು ಕಿಶೋರ್ ಜೆನಾ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ನ ಜಾವೆಲಿನ್ ಎಸೆತ ಸ್ಪರ್ಧೆಯಲ್ಲಿ ಫೈನಲ್ ಪ್ರವೇಶಿಸುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ. ವಿಶ್ವ ಅಥ್ಲೆಟಿಕ್ಸ್ನ ಒಂದೇ ಸ್ಪರ್ಧೆಯಲ್ಲಿ ಮೂವರು ಭಾರತೀಯರು ಫೈನಲ್ಗೇರಿದ ಮೊಟ್ಟಮೊದಲ ದೃಷ್ಟಾಂತ ಇದಾಗಿದೆ. ಮೊದಲ ಯತ್ನದಲ್ಲೇ 88.77 ಮೀ. ದೂರ ಜಾವೆಲಿನ್ ಎಸೆದ ಚಿನ್ನದ ಹುಡುಗ ನೀರಜ್ ಚೋಪ್ರಾ ಮುಂದಿನ ವರ್ಷದ ಪ್ಯಾರಿಸ್ ಒಲಿಂಪಿಕ್ಸ್ಗೂ ಅರ್ಹತೆ ಸಂಪಾದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶುಕ್ರವಾರ ನಡೆದ ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ 23 ವರ್ಷದ ಮನು ಡಿ.ಪಿ. 81.31 ಎಸೆದು 6ನೇ ಸ್ಥಾನದೊಂದಿಗೆ ಮತ್ತು ಕಿಶೋರ್ ಜೆನಾ 80.55 ಮೀ. ಎಸೆದು 9ನೇ ಸ್ಥಾನದೊಂದಿಗೆ ಫೈನಲ್ ಪ್ರವೇಶಿಸಿದರು. 83 ಮೀ.ಗಿಂತ ಅಧಿಕ ದೂರ ಎಸೆದವರು ಮತ್ತು ಅಗ್ರ 12 ಸ್ಪರ್ಧಿಗಳು ಫೈನಲ್ ಪ್ರವೇಶಿಸಿದರು.
25 ವರ್ಷದ ನೀರಜ್ ಅರ್ಹತಾ ಸುತ್ತಿನಲ್ಲಿ ಒಂದೇ ಎಸೆತ ಎಸೆದು ಮತ್ತು ಸ್ಪರ್ಧೆಗಿಳಿದ ಕೆಲವೇ ನಿಮಿಷಗಳಲ್ಲಿ ಫೈನಲ್ ಸ್ಥಾನ ಗಿಟ್ಟಿಸಿಕೊಂಡರು. ಇದು ಅವರ ಹಾಲಿ ಋತುವಿನ ಗರಿಷ್ಠ ಎಸೆತವೂ ಆಗಿದ್ದು, ಅರ್ಹತಾ ಸುತ್ತಿನಲ್ಲಿ ಅಗ್ರಸ್ಥಾನವನ್ನೂ ಸಂಪಾದಿಸಿದರು. 86.79 ಮೀ. ಎಸೆದ ಪಾಕಿಸ್ತಾನದ ಅರ್ಷದ್ ನದೀಮ್ ಅರ್ಹತಾ ಸುತ್ತಿನಲ್ಲಿ 2ನೇ ಸ್ಥಾನ ಪಡೆದರೆ, ಜೆಕ್ ಗಣರಾಜ್ಯದ ಜೇಕಬ್ ವಡ್ಲೆಜ್ (83.50 ಮೀ.) ಅರ್ಹತಾ ಸುತ್ತಿನಲ್ಲಿ 83 ಮೀ.ಗಿಂತ ಅಧಿಕ ದೂರ ಎಸೆದ ಮತ್ತೋರ್ವ ಸ್ಪರ್ಧಿಯಾಗಿದ್ದಾರೆ. ಜರ್ಮನಿಯ ಜೂಲಿಯನ್ ವೆಬರ್ (82.39ಮೀ) 4ನೇ ಸ್ಥಾನ ಪಡೆದರು.
2022ರ ವಿಶ್ವ ಚಾಂಪಿಯನ್ಷಿಪ್ನಲ್ಲಿ ರಜತ ಗೆದ್ದಿದ್ದ ನೀರಜ್ ಈ ಬಾರಿ ಚಿನ್ನ ಗೆಲ್ಲುವತ್ತ ದೃಷ್ಟಿ ನೆಟ್ಟಿದ್ದಾರೆ. ಗರಿಷ್ಠ 89.94 ಮೀ. ಎಸೆತದ ದಾಖಲೆ ಹೊಂದಿರುವ ನೀರಜ್, ಭಾನುವಾರ ನಡೆಯಲಿರುವ ಫೈನಲ್ನಲ್ಲಿ 90 ಮೀ. ಗಡಿಯನ್ನೂ ದಾಟುವ ಹಂಬಲದಲ್ಲಿದ್ದಾರೆ.