ಕ್ರೀಡೆ

ಬಿಸಿಸಿಐ ಟಾಸ್ಕ್ ಫೋರ್ಸ್‌ಗೆ ರಾಹುಲ್ ದ್ರಾವಿಡ್ ಸಾರಥ್ಯ?

ಬೆಂಗಳೂರು: ಎನ್‌ಸಿಎ ಮುಖ್ಯಸ್ಥ ರಾಹುಲ್ ದ್ರಾವಿಡ್ ಅವರನ್ನು ಒಳಗೊಂಡ ಕೋವಿಡ್-19 ಟಾಸ್ಕ್ ಫೋರ್ಸ್ ರಚಿಸಲು ಬಿಸಿಸಿಐ ನಿರ್ಧರಿಸಿದೆ. ಟಾಸ್ಕ್ ಫೋರ್ಸ್‌ಗೆ ದ್ರಾವಿಡ್ ಅವರೇ ಮುಖ್ಯಸ್ಥರಾಗಿರುವ ನಿರೀಕ್ಷೆ ಇದೆ.

ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥರಾಗಿರುವ ಹಿನ್ನೆಲೆಯಲ್ಲಿ ದ್ರಾವಿಡ್ ಅವರನ್ನೇ ಟಾಸ್ಕ್ ಫೋರ್ಸ್‌ಗೂ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಬಿಸಿಸಿಐ ಒಲವು ತೋರಿದೆ ಎನ್ನಲಾಗಿದೆ. ಓರ್ವ ವೈದ್ಯಕೀಯ ಅಧಿಕಾರಿ, ನೈರ್ಮಲ್ಯ ಅಧಿಕಾರಿ ಮತ್ತು ಬಿಸಿಸಿಐನ ಸಹಾಯಕ ಜನರಲ್ ಮ್ಯಾನೇಜರ್ (ಕ್ರಿಕೆಟ್ ವ್ಯವಹಾರ) ಕೂಡ ಈ ಟಾಸ್ಕ್ ಫೋರ್ಸ್‌ನಲ್ಲಿರಲಿದ್ದಾರೆ.

ಆಟಗಾರರಿಗೆ ನಿಯಮಾವಳಿಗಳ ಬಗ್ಗೆ ವಿವರಣೆ ನೀಡುವುದು, ಸಂಬಂಧಿತ ಉನ್ನತ ವ್ಯವಸ್ಥಾಪಕರಿಗೆ ಕೋವಿಡ್-19 ಪ್ರಕರಣಗಳ ಬಗ್ಗೆ ಮಾಹಿತಿ ಮತ್ತು ಸೂಕ್ತ ಸಲಹೆಗಳನ್ನು ನೀಡುವುದು, ಅಪಾಯದ ಬಗ್ಗೆ ಎಚ್ಚರಿಸುವುದು ಟಾಸ್ಕ್ ಫೋರ್ಸ್ ಹೊಣೆಯಾಗಿರುತ್ತದೆ. ಇತರ ರಾಜ್ಯ ಕ್ರಿಕೆಟ್ ಸಂಸ್ಥೆಗಳಂತೆ ಬೆಂಗಳೂರಿನ ಎನ್‌ಸಿಎಯಲ್ಲಿ ಕ್ರಿಕೆಟ್ ತರಬೇತಿ ಆರಂಭಿಸುವ ಮುನ್ನವೂ ಆಟಗಾರರು, ತಮ್ಮ ಸುರಕ್ಷತೆಯ ಹೊಣೆಯನ್ನು ತಾವೇ ಹೊತ್ತುಕೊಳ್ಳುವ ಬಗ್ಗೆ ಸಮ್ಮತಿ ಪತ್ರ ಬರೆದುಕೊಡಬೇಕು.

ಅರುಣ್‌ಲಾಲ್, ವಾಟ್ಮೋರ್‌ಗೆ ಕೋಚಿಂಗ್ ಅವಕಾಶವಿಲ್ಲ

ಬಿಸಿಸಿಐ ಎಸ್‌ಒಪಿಯಲ್ಲಿ 60 ಮೇಲ್ಮಟ್ಟವರಿಗೆ ತರಬೇತಿ ಶಿಬಿರಗಳಿಂದ ನಿರ್ಬಂಧ ಹೇರಿರುವುದರಿಂದ ಬಂಗಾಳ ತಂಡದ ಕೋಚ್ ಅರುಣ್ ಲಾಲ್ ಮತ್ತು ಬರೋಡ ತಂಡದ ಕೋಚ್ ಡ್ಯಾವ್ ವಾಟ್ಮೋರ್ ದೂರ ಉಳಿಯಬೇಕಾಗಿದೆ. ಕಳೆದ ಏಪ್ರಿಲ್‌ನಲ್ಲಷ್ಟೇ ನೇಮಕಗೊಂಡ ವಾಟ್ಮೋರ್‌ಗೆ 66 ವರ್ಷವಾಗಿದ್ದರೆ, ಕಳೆದ ರಣಜಿಯಲ್ಲಿ ತಂಡವನ್ನು ಫೈನಲ್‌ಗೇರಿಸಿದ್ದ ಅರುಣ್‌ಲಾಲ್‌ಗೆ 65 ವರ್ಷವಾಗಿದೆ. ಡಯಾಬಿಟಿಸ್ ಅಥವಾ ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವವರಿಗೂ ತರಬೇತಿ ಶಿಬಿರಗಳಿಂದ ನಿರ್ಬಂಧ ಹೇರಲಾಗುವುದು.