Mumbai Indians: ಪ್ರಸಕ್ತ ಭಾರತದಲ್ಲಿ ನಡೆಯುತ್ತಿರುವ ಐಪಿಎಲ್ ದ್ವಿತೀಯ ಇನ್ನಿಂಗ್ಸ್ ಕ್ರಿಕೆಟ್ ಅಭಿಮಾನಿಗಳಲ್ಲಿ ಹೊಸ ಉತ್ಸಾಹವನ್ನೇ ನೀಡಿದೆ. ಈ ಹಿಂದೆ ಗೆಲುವಿನ ರೇಸ್ನಿಂದ ದೂರವಿದ್ದ ತಂಡಗಳು ಇದೀಗ ಪ್ಲೇಆಫ್ನತ್ತ ದಾಪುಗಾಲಿಟ್ಟಿರುವುದು ನೋಡುಗರ ಹುಬ್ಬೇರಿಸಿದೆ. ನಿನ್ನೆ (ಮೇ.21) ನಡೆದ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ರೋಚಕ ಪಂದ್ಯದಲ್ಲಿ ಎಂಐ ಬರೋಬ್ಬರಿ 59 ರನ್ಗಳಿಂದ ಭರ್ಜರಿ ಜಯ ದಾಖಲಿಸಿತು. ಈ ಮೂಲಕ ತನ್ನ ಪ್ಲೇಆಫ್ ಕನಸನ್ನು ನನಸಾಗಿಸಿಕೊಂಡಿದೆ.
ಇದನ್ನೂ ಓದಿ: ರಾಮನಗರ ಮತ್ತೆ ‘ಬೆಂಗಳೂರು ದಕ್ಷಿಣ’ ಜಿಲ್ಲೆಯಾಗಿ ಮರುನಾಮಕರಣ: ಸಂಪುಟ ಸಭೆಯಲ್ಲಿ ನಿರ್ಧಾರ | Cabinet Meeting
ಐಪಿಎಲ್ ಆರಂಭದ ಪಂದ್ಯದಲ್ಲೇ ಸಿಎಸ್ಕೆ ಎದುರು ಮಂಡಿಯೂರಿದ್ದ ಮುಂಬೈ ಇಂಡಿಯನ್ಸ್ ಮೊದಲ 7 ಪಂದ್ಯಗಳಲ್ಲಿ ಸತತ ಸೋಲಿನಿಂದ ಕಂಗೆಟ್ಟಿತ್ತು. ಅದಾದ ನಂತರ ಸರಣಿ ಗೆಲುವಿನ ಮೂಲಕ ಇದೀಗ ಸಖತ್ ಕಮ್ಬ್ಯಾಕ್ ಮಾಡಿರುವ ಹಾರ್ದಿಕ್ ಪಾಂಡ್ಯ ತಂಡ, ಒಂದೊಂದು ಪಂದ್ಯದಲ್ಲಿಯೂ ತಮ್ಮ ತಂಡದ ಸಾಮರ್ಥ್ಯವನ್ನು ಪ್ರದರ್ಶಿಸುತ್ತಿದೆ. ಇದೀಗ ಪ್ಲೇಆಫ್ಗೆ ಲಗ್ಗೆಯಿಟ್ಟಿರುವ ಮುಂಬೈ ಪಡೆ ಕುರಿತು ಟೀಮ್ ಇಂಡಿಯಾದ ಮಾಜಿ ಹಿರಿಯ ಕ್ರಿಕೆಟಿಗ ನವಜೋತ್ ಸಿಂಗು ಸಿಧು ಪ್ರತಿಕ್ರಿಯಿಸಿದ್ದಾರೆ.
"ಒಂದು ಬಾರಿ ಮುಂಬೈ ಇಂಡಿಯನ್ಸ್ ಗೆಲ್ಲಲು ಪ್ರಾರಂಭಿಸಿದರೆ ಮುಂದೆ ಅವರನ್ನು ತಡೆಯುವುದು ಅಷ್ಟು ಸುಲಭವಲ್ಲ. ಆ ತಂಡ ಮತ್ತಷ್ಟು ಶಕ್ತಿಶಾಲಿ ಆದಂತೆ. ಕಳೆದ 8 ಪಂದ್ಯಗಳನ್ನು ಸತತವಾಗಿ ಗೆದ್ದು ಬೀಗಿರುವ ಮುಂಬೈ ಇಂಡಿಯನ್ಸ್, ಈ ಬಾರಿಯ ಟ್ರೋಫಿ ಎತ್ತಿಹಿಡಿಯುವ ಮಹಾದಾಸೆ ಹೊಂದಿದೆ. ಇಂಥಾ ಅದ್ಭುತ ಪ್ರದರ್ಶನ ನೀಡುವ ಸಾಮರ್ಥ್ಯ ಮುಂಬೈ ಇಂಡಿಯನ್ಸ್ಗೆ ಮಾತ್ರ ಇರೋದು. ಟೀಮ್ ಇಂಡಿಯಾದ ಅರ್ಧ ಆಟಗಾರರು ಮುಂಬೈ ಫ್ರಾಂಚೈಸಿಗೆ ಆಡುತ್ತಿದ್ದಾರೆ" ಎಂದು ಸಿಧು ಗುಣಗಾನ ಮಾಡಿದ್ದಾರೆ,(ಏಜೆನ್ಸೀಸ್).