ಕ್ರೀಡೆ

ರೋಹಿತ್ ಮತ್ತು ಕೊಹ್ಲಿ ಕಡೆಗಣಿಸಿದ್ದ ಆಟಗಾರನ ಕರಿಯರ್​ಗೆ 'ಗೌತಿ' ಕೊಡಲಿದ್ದಾರೆ ಹೊಸ ಸ್ಟಾರ್ಟ್​: ಸಂಜಯ್ ಭಾರದ್ವಾಜ್

ನವದೆಹಲಿ: ಐಸಿಸಿ ಟಿ20 ವಿಶ್ವಕಪ್ 2024ರ ಟೂರ್ನಿ ಮುಗಿಯುತ್ತಿದ್ದಂತೆ ರಾಹುಲ್ ದ್ರಾವಿಡ್​ ಅವರ ಕೋಚ್ ಅವಧಿ ಕೂಡ ಅಂತ್ಯಗೊಂಡಿತು. ತಮ್ಮ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ಘೋಷಿಸಿದ ದ್ರಾವಿಡ್​ ಅವರಿಗೆ ವಿಶ್ವವ್ಯಾಪಿ ವಿಶೇಷ ಗೌರವ, ಅಭಿನಂದನೆಗಳು ಹರಿದುಬಂದಿತು. ಕೋಚ್ ಹುದ್ದೆಯಿಂದ ರಾಹುಲ್ ಕೆಳಗಿಳಿಯುತ್ತಿದ್ದಂತೆ ಟೀಮ್ ಇಂಡಿಯಾದ ನೂತನ ಕೋಚ್ ಆಗಿ ಅಧಿಕಾರ ಸ್ವೀಕರಿಸಿರುವ ಗೌತಮ್ ಗಂಭೀರ್​, ಮುಂಬರುವ ಶ್ರೀಲಂಕಾ ವಿರುದ್ಧದ ವೈಟ್ ಬಾಲ್​ ಪಂದ್ಯಗಳಿಗೆ ಭಾರತ ತಂಡವನ್ನು ಮುನ್ನಡೆಸಲು ಸಜ್ಜಾಗಿದ್ದಾರೆ.

ಒಂದೆಡೆ ಶ್ರೀಲಂಕಾ ವಿರುದ್ಧದ ಪಂದ್ಯಕ್ಕೆ ಟೀಮ್ ಇಂಡಿಯಾ ಆಟಗಾರರು ಸಕಲ ತಯಾರಿ ಮಾಡಿಕೊಳ್ಳುತ್ತಿದ್ದರೆ, ಮತ್ತೊಂದೆಡೆ ಗೌತಮ್ ಗಂಭೀರ್​ ಅವರ ಬಾಲ್ಯದ ಕ್ರಿಕೆಟ್ ಕೋಚ್ ಸಂಜಯ್ ಭಾರದ್ವಾಜ್​ ನೀಡಿದ ಶಾಕಿಂಗ್ ಹೇಳಿಕೆ ಸದ್ಯ ಭಾರೀ ಚರ್ಚೆಗೆ ಕಾರಣವಾಗಿದೆ. ಭಾರತಕ್ಕೆ ಹೊಸ ಕೋಚ್ ಆಗಿರುವ ಗೌತಿ ಈ ಹಿಂದೆ ಕ್ಯಾಪ್ಟನ್ ಆಗಿದ್ದ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಕಡೆಗಣಿಸಿದ್ದ ಅದ್ಭುತ ಆಟಗಾರನ ಕರಿಯರ್​ಗೆ ಹೊಸ ಕಳೆ ನೀಡಲಿದ್ದಾರೆ ಎಂದು ಹೇಳಿದ್ದಾರೆ.

ಭಾರತ ತಂಡಕ್ಕೆ ವೇಗಿ ಸವದೀಪ್ ಸೇನಿ ಅವರನ್ನು ಗೌತಿ ಆಯ್ಕೆ ಮಾಡಲಿದ್ದಾರೆ. ಈ ಹಿಂದೆ ರವಿಶಾಸ್ರ್ತಿ ಕೋಚ್ ಆಗಿದ್ದ ಸಮಯದಲ್ಲಿ ವಿರಾಟ್ ಕ್ಯಾಪ್ಟನ್ ಆಗಿ ತಂಡವನ್ನು ಮುನ್ನಡೆಸಿದ್ದರು. ಇವರಿಬ್ಬರ ಅವಧಿಯಲ್ಲಿ ಕುಲದೀಪ್ ಯಾದವ್​ಗೆ ಮತ್ತು ಸೈನಿಗೆ ತಂಡದಲ್ಲಿ ಹೆಚ್ಚು ಅವಕಾಶ ಕೊಡಲಿಲ್ಲ. ಟಿ20 ವಿಶ್ವಕಪ್ ಗೆದ್ದ ತಂಡಕ್ಕೆ ನಾಯಕನಾಗಿದ್ದ ರೋಹಿತ್ ಶರ್ಮ ಮತ್ತು ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ಅವರ ಅವಧಿಯಲ್ಲೂ ಕೂಡ ಸೈನಿಯನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಿಲ್ಲ. ಇದು ಬೇಸರದ ಸಂಗತಿ ಎಂದರು.

ಈಗ ಭಾರತ ತಂಡಕ್ಕೆ ನೂತನ ಹೆಡ್ ಕೋಚ್ ಆಗಿರುವ ಗೌತಮ್ ಗಂಭೀರ್​ ಖಂಡಿತ ಇಂತಹ ಆಟಗಾರರನ್ನು ಪರಿಗಣಿಸುತ್ತಾರೆ. ಕುಲದೀಪ್ ಮತ್ತು ಸೈನಿ ಅಂತಹ ಕ್ರಿಕೆಟಿಗರು ಗೌತಿ ಅವರಂತೆಯೇ. 2024ರ ಐಪಿಎಲ್​ ಆವೃತ್ತಿಯಲ್ಲಿ ಕೆಕೆಆರ್​​ಗೆ ಮೆಂಟರ್​ ಆಗಿದ್ದ ಸಮಯದಲ್ಲಿಯೂ ಸುನಿಲ್ ನರೈನ್​ಗೆ ಗೌತಿ ಉತ್ತಮ ಅವಕಾಶ ಕಲ್ಪಿಸಿಕೊಟ್ಟರು. ಗಂಭೀರ್​ ಅವರ ಅವಲೋಕನ ಮತ್ತು ಕ್ರಿಕೆಟ್ ಚಾಣಾಕ್ಷತೆ ಯಾವಾಗಲೂ ಅತ್ಯುತ್ತಮ. ಅದರಲ್ಲಿ ಅನುಮಾನವಿಲ್ಲ ಎಂದು ಹೇಳಿದ್ದಾರೆ,(ಏಜೆನ್ಸೀಸ್).