ಕ್ರೀಡೆ

ಇಂದಿನಿಂದ ರಾಷ್ಟ್ರೀಯ ಈಜು ಚಾಂಪಿಯನ್​ಷಿಪ್​; ಮೊದಲ ಬಾರಿಗೆ ಮಂಗಳೂರು ಆತಿಥ್ಯ

ವಿಜಯವಾಣಿ ಸುದ್ದಿಜಾಲ ಮಂಗಳೂರು

ಕರ್ನಾಟಕ ಈಜು ಸಂಸ್ಥೆ ವತಿಯಿಂದ ಭಾರತೀಯ ಈಜು ಒಕ್ಕೂಟದ ಸಹಯೋಗದಲ್ಲಿ ಎಮ್ಮೆಕೆರೆಯ ಅಂತಾರಾಷ್ಟ್ರೀಯ ಈಜುಕೊಳದಲ್ಲಿ ಮಂಗಳವಾರದಿಂದ 4 ದಿನಗಳ ಕಾಲ 77ನೇ ರಾಷ್ಟ್ರೀಯ ಹಿರಿಯರ ಈಜು ಚಾಂಪಿಯನ್​ಷಿಪ್​ ನಡೆಯಲಿದೆ.

ದೇಶದ ಅತ್ಯಂತ ದೊಡ್ಡ ಈಜು ಕೂಟಕ್ಕೆ ಮಂಗಳೂರು ಇದೇ ಮೊದಲ ಬಾರಿ ಆತಿಥ್ಯ ವಹಿಸಲಿದೆ. ಕರ್ನಾಟಕ 2021ರಲ್ಲಿ ಕೊನೆಯದಾಗಿ ಬೆಂಗಳೂರಿನಲ್ಲಿ ಈ ಕೂಟಕ್ಕೆ ಆತಿಥ್ಯ ವಹಿಸಿತ್ತು. 31 ರಾಜ್ಯಗಳಿಂದ 500ಕ್ಕೂ ಅಧಿಕ ಈಜುಪಟುಗಳು ಕೂಟದಲ್ಲಿ ಭಾಗವಹಿಸಲಿದ್ದಾರೆ. ಕರ್ನಾಟಕದ ಒಲಿಂಪಿಯನ್​ ಹಾಗೂ ಬ್ಯಾಕ್​ಸ್ಟ್ರೊಕ್​ ಈಜುಪಟು ಶ್ರೀಹರಿ ನಟರಾಜ್​, ಬ್ಯಾಕ್​ಸ್ಟ್ರೊಕ್​ ಸಿಂಟರ್​ ಲಿಖಿತ್​ ಎಸ್​.ಪಿ., ರಾಷ್ಟ್ರೀಯ ದಾಖಲೆಪಟು ಮತ್ತು ಫ್ರೀಸ್ಟೆಲ್​ ಸ್ಪೆಷಲಿಸ್ಟ್​ ಅನೀಶ್​ ಗೌಡ ಭಾಗವಹಿಸಲಿದ್ದಾರೆ ಎಂದು ಕೂಟದ ಸಂಟನಾ ಕಾರ್ಯದರ್ಶಿ ಸತೀಶ್​ ಕುಮಾರ್​ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ದೇಶದ ಭರವಸೆಯ ಈಜುಪಟುಗಳಾದ ಎಸ್​.ಶಿವ, ಪೃಥ್ವಿ, ಆನಂದ್​ ಎ.ಎಸ್​., ಮಿಹಿರ್​ ಅಮ್ರೆ, ರಿಷಬ್​ ದಾಸ್​, ದೇವಾಂಶ್​ ಪರ್ಮಾರ್​, ಧನುಷ್​ ಎಸ್​., ಸೋನು ದೆಬ್ನಾತ್​ ಮತ್ತು ಯುಗ್​ ಚೆಲಾನಿ ಕೂಡ ಕೂಟದಲ್ಲಿ ಭಾಗವಹಿಸಲಿದ್ದಾರೆ. ಮಹಿಳಾ ಈಜುಪಟುಗಳಾದ ಹರ್ಷಿತಾ ಜಯರಾಂ, ಮನವಿ ವರ್ಮಾ, ಪ್ರತಿಷ್ಟಾ ದಾಂಗಿ, ಆಸ್ತಾ ಚೌಧುರಿ, ಶಿವಾಂಗಿ ಶರ್ಮಾ ಮತ್ತು ಭವ್ಯಾ ಸಹದೇವ್​ ಚಾಂಪಿಯನ್​ಷಿಪ್​ನಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ಭಾರತದ ಈಜುಪಟುಗಳಿಗೆ 2028ರ ಲಾಸ್​ ಏಂಜಲಿಸ್​ ಒಲಿಂಪಿಕ್ಸ್​ಗೆ ಎ ದರ್ಜೆಯ ಅರ್ಹತೆ ಒಲಿಸಿಕೊಳ್ಳುವ ಮೊದಲ ಅವಕಾಶ ಈ ಚಾಂಪಿಯನ್​ಷಿಪ್​ನಲ್ಲಿದೆ. ಕೂಟದಲ್ಲಿ ಆತಿಥೇಯ ಕರ್ನಾಟಕ ತಂಡ ಹಾಲಿ ಚಾಂಪಿಯನ್​ ಆಗಿ ಕಣಕ್ಕಿಳಿಯಲಿದೆ. ಇತ್ತೀಚೆಗೆ ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ 100 ಮೀ. ಬ್ಯಾಕ್​ಸ್ಟ್ರೊಕ್​ ವಿಭಾಗದಲ್ಲಿ ಸ್ಪರ್ಧಿಸಿದ್ದ ಶ್ರೀಹರಿ ನಟರಾಜ್​, "ಉತ್ತಮ ಫಾಮ್​ರ್ನಲ್ಲಿರುವುದರಿಂದ ನಾನು ಸ್ಪರ್ಧೆಗೆ ಕಾತುರಗೊಂಡಿದ್ದೇನೆ. ತವರಿನ ಲಾಭವನ್ನು ಸಮರ್ಥವಾಗಿ ಬಳಸಿಕೊಂಡು ನಾನು ಭಾಗವಹಿಸುವ ಎಲ್ಲ ಸ್ಪರ್ಧೆಗಳಲ್ಲಿ ಚಿನ್ನ ಗೆಲ್ಲುವ ಗುರಿ ಹೊಂದಿದ್ದೇನೆ' ಎಂದು ತಿಳಿಸಿದರು.