ಕ್ರೀಡೆ

ಒಲಿಂಪಿಕ್ಸ್ ಪದಕ ವಿಜೇತರಿಗೂ ಪುರಸ್ಕಾರ ನೀಡುವ ಉದ್ದೇಶ, ಕ್ರೀಡಾ ಪ್ರಶಸ್ತಿ ಪ್ರಕ್ರಿಯೆ ವಿಳಂಬ

ನವದೆಹಲಿ: ಮುಂಬರುವ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಜಯಿಸುವ ಭಾರತದ ಕ್ರೀಡಾಪಟುಗಳಿಗೂ ಪುರಸ್ಕಾರ ನೀಡುವ ಉದ್ದೇಶದಿಂದ ಈ ವರ್ಷದ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಆಯ್ಕೆ ಪ್ರಕ್ರಿಯೆಯನ್ನು ವಿಳಂಬಗೊಳಿಸಲಾಗಿದೆ. ಆಗಸ್ಟ್ 8ರಂದು ಟೋಕಿಯೊ ಒಲಿಂಪಿಕ್ಸ್ ಮುಕ್ತಾಯಗೊಂಡ ಬಳಿಕವೇ ಪ್ರಶಸ್ತಿ ಆಯ್ಕೆ ಪ್ರಕ್ರಿಯೆ ನಡೆಯುವ ನಿರೀಕ್ಷೆ ಇದೆ.

ಸಾಂಪ್ರದಾಯಿಕವಾಗಿ ರಾಷ್ಟ್ರೀಯ ಕ್ರೀಡಾ ದಿನವಾದ ಆಗಸ್ಟ್ 29ರಂದು ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. ಈ ವರ್ಷವೂ ಅದೇ ದಿನ ಸಮಾರಂಭ ನಡೆಯುವ ನಿರೀಕ್ಷೆ ಇದ್ದು, ಒಲಿಂಪಿಕ್ಸ್ ಪದಕ ವಿಜೇತರನ್ನು ಒಳಗೊಂಡಂತೆ ಪ್ರಶಸ್ತಿ ಪುರಸ್ಕೃತರ ಪಟ್ಟಿ ಕೊನೇಕ್ಷಣದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಆಯ್ಕೆಗೆ ಸಮಿತಿ ಕೂಡ ಇನ್ನಷ್ಟೇ ರಚನೆಯಾಗಬೇಕಾಗಿದೆ.

‘ಹಾಲಿ ವರ್ಷದ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳಿಗೆ ನಾವು ಈಗಾಗಲೆ ಅರ್ಜಿಗಳನ್ನು ಸ್ವೀಕರಿಸಿದ್ದೇವೆ. ನಾಮನಿರ್ದೇಶನಗಳನ್ನು ಸಲ್ಲಿಸಲು ಅಂತಿಮ ಗಡುವು (ಜುಲೈ 5) ಕೂಡ ಮುಕ್ತಾಯಗೊಂಡಿದೆ. ಆದರೆ, ಒಲಿಂಪಿಕ್ಸ್ ಪದಕ ವಿಜೇತರನ್ನೂ ಪ್ರಶಸ್ತಿ ಪಟ್ಟಿಗೆ ಸೇರಿಸಲು ನಾವು ನಮ್ಮ ಕೊನೇ ಸಭೆಯಲ್ಲಿ ಚರ್ಚಿಸಿದ್ದೇವೆ. ಆಗಸ್ಟ್ 8ರಂದು ಒಲಿಂಪಿಕ್ಸ್ ಮುಗಿದ ಬಳಿಕವೇ ಆಯ್ಕೆ ಪ್ರಕ್ರಿಯೆ ನಡೆಯಬಹುದು’ ಎಂದು ಕ್ರೀಡಾ ಸಚಿವಾಲಯದ ಮೂಲಗಳು ತಿಳಿಸಿವೆ.

ಟೋಕಿಯೊ ಒಲಿಂಪಿಕ್ಸ್ ಮುಕ್ತಾಯಗೊಂಡ 10 ದಿನದೊಳಗೆ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಅಂತಿಮಗೊಳಿಸಲು ಆಯ್ಕೆ ಸಮಿತಿಗೆ ಸಾಧ್ಯವಾಗದಿದ್ದರೆ ಪ್ರಶಸ್ತಿ ಪ್ರದಾನ ಸಮಾರಂಭವೂ ಮುಂದೂಡಿಕೆಯಾಗಬಹುದು ಎನ್ನಲಾಗಿದೆ.

ಒಲಿಂಪಿಕ್ಸ್‌ನಲ್ಲಿ ಪದಕ ಜಯಿಸುವ ಎಲ್ಲ ಕ್ರೀಡಾಪಟುಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗುವುದು. ಒಲಿಂಪಿಕ್ಸ್ ಮುಗಿದ ಒಂದು ವಾರ ಅಥವಾ 10 ದಿನದೊಳಗೆ ಆಯ್ಕೆ ಸಮಿತಿ ಸಭೆ ನಡೆಯಲಿದೆ. ಇಲ್ಲದಿದ್ದರೆ ಆಗಸ್ಟ್ 29ರ ಸಮಾರಂಭ ಕೆಲದಿನಗಳ ಮಟ್ಟಿಗೆ ಮುಂದೂಡುಕೆಯಾಗಬಹುದು ಎಂದು ಮೂಲಗಳು ತಿಳಿಸಿವೆ. ಜುಲೈ 23ರಿಂದ ನಡೆಯಲಿರುವ ಟೋಕಿಯೊ ಒಲಿಂಪಿಕ್ಸ್‌ನಲ್ಲಿ 120ಕ್ಕೂ ಅಧಿಕ ಭಾರತೀಯ ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ.

ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳ ಬಹುಮಾನ ಮೊತ್ತವನ್ನು ಕಳೆದ ವರ್ಷವೇ ಭಾರಿ ಪ್ರಮಾಣದಲ್ಲಿ ಏರಿಸಲಾಗಿತ್ತು. ಖೇಲ್‌ರತ್ನ ವಿಜೇತರು 25 ಲಕ್ಷ ರೂ. ಬಹುಮಾನ ಪಡೆದರೆ, ಅರ್ಜುನ, ದ್ರೋಣಾಚಾಯ ಪ್ರಶಸ್ತಿ ವಿಜೇತರು 15 ಲಕ್ಷ ರೂ. ಗಳಿಸಲಿದ್ದಾರೆ. ಧ್ಯಾನ್‌ಚಂದ್ ವಿಜೇತರು 10 ಲಕ್ಷ ರೂ. ಗಳಿಸಲಿದ್ದಾರೆ. ಕರೊನಾದಿಂದಾಗಿ ಕಳೆದ ವರ್ಷ ವರ್ಚುವಲ್ ಮೂಲಕ ಸಮಾರಂಭ ನಡೆದಿತ್ತು.