ಕ್ರೀಡೆ

ದೇಶ ಕ್ರಿಕೆಟ್ ಆಡುವ ಸ್ಥಿತಿಯಲ್ಲಿಲ್ಲ; ದಿಗ್ಗಜ ರಾಹುಲ್ ದ್ರಾವಿಡ್ ಅಭಿಮತ

ಬೆಂಗಳೂರು: ದೇಶದಲ್ಲಿ ಕ್ರಿಕೆಟ್ ಚಟುವಟಿಕೆ ಪುನರಾರಂಭಿಸುವ ಸ್ಥಿತಿ ಇನ್ನೂ ಬಂದಿಲ್ಲ. ಮುಂದಿನ ಕೆಲ ಸಮಯ ಕಾದು ನೋಡಬೇಕಾಗಿದೆ ಎಂದು ಭಾರತ ತಂಡದ ಮಾಜಿ ನಾಯಕ ಹಾಗೂ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥ ರಾಹುಲ್ ದ್ರಾವಿಡ್ ಅಭಿಪ್ರಾಯಪಟ್ಟಿದ್ದಾರೆ. ಜತೆಗೆ ಮುಂದಿನ ದೇಶೀಯ ಕ್ರಿಕೆಟ್ ಋತು ನಿಗದಿತ ಸಮಯದಲ್ಲಿ ಆರಂಭಗೊಳ್ಳದಿದ್ದರೆ, ಅದನ್ನು ಕಿರಿದಾಗಿಸಬೇಕು ಎಂದು ಸಲಹೆ ನೀಡಿದ್ದಾರೆ.

‘ನಾವಿನ್ನೂ ಕ್ರಿಕೆಟ್ ಪುನರಾರಂಭ ಮಾಡುವ ಸ್ಥಿತಿಯಲ್ಲಿಲ್ಲ. ತಾಳ್ಮೆಯಿಂದ ಕಾದು ನೋಡುವುದು ಉತ್ತಮ. ಪ್ರತಿ ತಿಂಗಳು ಈ ಬಗ್ಗೆ ಪರಿಶೀಲನೆ ನಡೆಸಬೇಕಾಗಿದೆ. ಎಲ್ಲ ಆಯ್ಕೆಗಳನ್ನೂ ಪರಿಶೀಲಿಸಬೇಕು’ ಎಂದು ದ್ರಾವಿಡ್ ಮ್ಯಾಗಝಿನ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ; 

‘ಈಗ ಎಲ್ಲವೂ ಅನಿಶ್ಚಿತವಾಗಿದೆ. ಸರ್ಕಾರದ ಮಾರ್ಗಸೂಚಿ ಮತ್ತು ವೈದ್ಯಕೀಯ ತಜ್ಞರ ಅಭಿಪ್ರಾಯದ ಆಧಾರದಲ್ಲಿ ಯಾವಾಗ ಕ್ರಿಕೆಟ್ ಆಡಬಹುದೆಂದು ತಿಳಿದುಕೊಳ್ಳಬಹುದಾಗಿದೆ. ಎನ್​ಸಿಎ ಸಾಮಾನ್ಯವಾಗಿ ಏಪ್ರಿಲ್​ನಿಂದ ಜೂನ್​ವರೆಗೆ ಬಿಡುವಿಲ್ಲದೆ ಇರುತ್ತದೆ. ಇದೇ ಸಮಯದಲ್ಲಿ 16, 19, 23 ವಯೋಮಿತಿ ಶಿಬಿರಗಳು ನಡೆಯುತ್ತಿರುತ್ತವೆ. ಆದರೆ ಈಗ ಇವೆಲ್ಲದರ ಬಗ್ಗೆ ಹೊಸದಾಗಿ ಯೋಜನೆ ರೂಪಿಸಬೇಕಾಗಿದೆ. ಈ ವರ್ಷವೇ ಮತ್ತೆ ಕ್ರಿಕೆಟ್ ಪುನರಾರಂಭಗೊಳ್ಳುವ ನಿರೀಕ್ಷೆ ನಮ್ಮದಾಗಿದೆ’ ಎಂದು ದ್ರಾವಿಡ್ ವಿವರಿಸಿದ್ದಾರೆ.

ಇಂಗ್ಲೆಂಡ್​ನಲ್ಲಿ ಜೈವಿಕ-ಸುರಕ್ಷಾ ವಾತಾವರಣದಲ್ಲಿ ಕ್ರಿಕೆಟ್ ಆಡಲು ಸಿದ್ಧತೆಗಳು ನಡೆದಿವೆ. ಆದರೆ ಭಾರತದ ದೇಶೀಯ ಕ್ರಿಕೆಟ್​ನಲ್ಲಿ ಆ ರೀತಿ ಆಡುವುದು ಸುಲಭವಲ್ಲ. ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿಗಳಿಗೆ ಇಂಗ್ಲೆಂಡ್-ವಿಂಡೀಸ್ ನಡುವಿನ ಸರಣಿ ಮಾದರಿಯಾಗಬಹುದು ಎಂದು ದ್ರಾವಿಡ್ ಹೇಳಿದ್ದಾರೆ. -ಏಜೆನ್ಸೀಸ್