ಕ್ರೀಡೆ

ಹಾರ್ದಿಕ್ ಈ​ ವರ್ತನೆಯೇ ಡಿವೋರ್ಸ್​ಗೆ ಕಾರಣ! ನಿತ್ಯವೂ ನತಾಶಾ ಕಣ್ಣೀರು.. ಕೊನೆಗೂ ನಿಜಾಂಶ ಬಯಲು

ನವದೆಹಲಿ: ಟೀಮ್​ ಇಂಡಿಯಾದ ಸ್ಟಾರ್​ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ಜನಪ್ರಿಯ ಮಾಡೆಲ್ ನತಾಶಾ ಸ್ಟಾಂಕೋವಿಕ್​ ತಮ್ಮ ನಾಲ್ಕು ವರ್ಷಗಳ ದಾಂಪತ್ಯ ಜೀವನಕ್ಕೆ ಪೂರ್ಣ ವಿರಾಮ ಘೋಷಿಸಿದ್ದಾರೆ. ಕೆಲ ತಿಂಗಳುಗಳ ಕಾಲ ಇಬಬ್ಬರ ಡಿವೋರ್ಸ್​ ವಿಚಾರವಾಗಿ ಸಾಕಷ್ಟು ವದಂತಿಗಳು ಹರಿದಾಡಿದ್ದವು. ಜುಲೈ 18ರಂದು ಸಾಮಾಜಿಕ ಜಾಲತಾಣದ ಮೂಲಕ ಇಬ್ಬರು ತಮ್ಮ ವಿಚ್ಛೇದನವನ್ನು ಖಚಿತಪಡಿಸುವ ಮೂಲಕ ವದಂತಿಗಳು ನಿಜ ಎಂದು ಒಪ್ಪಿಕೊಂಡರು.

ಡಿವೋರ್ಸ್​ ಅಧಿಕೃತವಾಗಿ ಘೋಷಣೆಯಾದಗಿನಿಂದ ಜಾಲತಾಣದಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಲೇ ಇದೆ. ಇಬ್ಬರ ಡಿವೋರ್ಸ್​ಗೆ ಕಾರಣ ಏನಿರಬಹುದು ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ. ಬಹಳ ದಿನಗಳ ಬಳಿಕ ಇದೀಗ ಹಾರ್ದಿಕ್​ ಮತ್ತು ನತಾಶಾರ ಆಪ್ತ ಸ್ನೇಹಿತರೊಬ್ಬರು ಸ್ಫೋಟಕ ಸಂಗತಿಯೊಂದನ್ನು ಬಹಿರಂಗಪಡಿಸಿದ್ದಾರೆ.

ನಾನೇ ಸರ್ವಸ್ವ ಮತ್ತು ನಾನೇ ಗ್ರೇಟ್​ ಎಂಬ ಹಾರ್ದಿಕ್ ವರ್ತನೆಯೇ ವಿಚ್ಛೇದನಕ್ಕೆ ಕಾರಣ ಎಂದು ಸ್ನೇಹಿತರೊಬ್ಬರು ರಾಷ್ಟ್ರೀಯ ಮಾಧ್ಯಮಕ್ಕೆ ತಿಳಿಸಿದ್ದಾರೆ. ಹಾರ್ದಿಕ್​ ವರ್ತನೆಯನ್ನು ಸಹಿಸಿಕೊಳ್ಳಲು ನತಾಶಾ ಸಾಕಷ್ಟು ಪ್ರಯತ್ನಿಸಿದರು. ಆದರೆ, ಹಾರ್ದಿಕ್​ ವರ್ತನೆ ಮಿತಿ ಮೀರಿದ್ದರಿಂದ ನತಾಶಾ ಅವರೇ ಮೊದಲು ವಿಚ್ಛೇದನ ನಿರ್ಧಾರಕ್ಕೆ ಬಂದರು ಎಂದು ಫ್ರೆಂಡ್​ ತಿಳಿಸಿದ್ದಾರೆ.

ಇನ್ನು ಹಾರ್ದಿಕ್ ಯಾವಾಗಲೂ ತನ್ನ ಸ್ವಂತ ವ್ಯವಹಾರಗಳಿಗೆ ಮಾತ್ರ ಪ್ರಾಮುಖ್ಯತೆ ನೀಡುತ್ತಿದ್ದನು. ತನ್ನ ಬಿಜಿನೆಸ್​ ಬಗ್ಗೆಯೇ ಹೆಚ್ಚು ಯೋಚಿಸುತ್ತಿದನು. ಸದಾ ಸ್ಟೈಲಿಶ್ ಆಗಿ ಇರಲು ಪ್ರಯತ್ನಿಸುವ ಹಾರ್ದಿಕ್, ಜನರ ಗಮನವನ್ನು ತನ್ನಡೆಗೆ ಸೆಳೆಯಲು ಬಯಸುತ್ತಾರೆ. ಮೊದಲಿಗೆ ಇದೆಲ್ಲವನ್ನು ನತಾಶಾ ಸಹಿಸಿಕೊಂಡರು. ಆದರೆ, ಹಾರ್ದಿಕ್ ಮತ್ತು ತನ್ನ ನಡುವೆ ಸಾಕಷ್ಟು ವ್ಯತ್ಯಾಸಗಳು ಇವೆ ಎಂಬುದನ್ನು ಅರಿತುಕೊಂಡ ಬಳಿಕ ಡಿವೋರ್ಸ್​ ನಿರ್ಧಾರಕ್ಕೆ ಬಂದರು ಎಂದು ನತಾಶಾ ಫ್ರೆಂಡ್ ಹೇಳಿದ್ದಾರೆ.​

ಆರಂಭದಲ್ಲಿ ಎಲ್ಲವನ್ನು ಹೊಂದಿಕೊಂಡು ಬದುಕುವ ಪ್ರಯತ್ನ ಮಾಡಿದರು. ಆದರೆ ಇದು ನತಾಶಾಗೆ ಆಗಾಗ ಅಹಿತಕರವಾಗಿತ್ತು. ಇದು ಎಂದಿಗೂ ಕೊನೆಗೊಳ್ಳುವುದಿಲ್ಲ ಎಂದು ಅರಿತುಕೊಂಡರು. ಹೀಗಾಗಿ ಸಂಬಂಧದಿಂದ ಹಿಂದೆ ಸರಿಯಲು ನಿರ್ಧರಿಸಿದರು. ಇದು ಒಂದು ದಿನ ಅಥವಾ ವಾರದಲ್ಲಿ ತೆಗೆದುಕೊಂಡ ನಿರ್ಧಾರವಲ್ಲ ಎಂದು ನತಾಶಾ ಫ್ರೆಂಡ್​ ಹೇಳಿರುವುದಾಗಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಡಿವೋರ್ಸ್​ ಬಗ್ಗೆ ಪಾಂಡ್ಯ ಹೇಳಿದ್ದೇನು?

ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿರುವ ಹಾರ್ದಿಕ್ ಪಾಂಡ್ಯ, ನಾಲ್ಕು ವರ್ಷಗಳ ಜೊತೆ ಪಯಣ ಇಂದು ಅಂತ್ಯಗೊಂಡಿದೆ. ವೈವಾಹಿಕ ಬದುಕಿನಲ್ಲಿ ಯಾವುದೇ ಬಿರುಕು ಬರದಂತೆ ತಡೆಯಲು ಸಾಕಷ್ಟು ಪ್ರಯತ್ನಪಟ್ಟೆವು. ಆದರೆ ಅದು ಸಾಧ್ಯವಾಗದಿದ್ದಾಗ ಪರಸ್ಪರ ಒಪ್ಪಿಗೆಯೊಂದಿಗೆ ಬೇರ್ಪಡುತ್ತಿದ್ದೇವೆ. ಇದು ಕಠಿಣ ನಿರ್ಧಾರವಾಗಿದ್ದು, ನಮ್ಮ ಭವಿಷ್ಯದ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಂಡಿದ್ದೇವೆ. ಈ ದುಃಖದ ಸಮಯದಲ್ಲಿ ತಮ್ಮ ಖಾಸಗಿತನವನ್ನು ಗೌರವಿಸುವಂತೆ ಹಾರ್ದಿಕ್ ಪಾಂಡ್ಯ ಅಭಿಮಾನಿಗಳು ಮತ್ತು ಜನರಿಗೆ ಮನವಿ ಮಾಡಿದರು. ನಾವು ಅಗಸ್ತ್ಯನನ್ನು ಪಡೆದಿದ್ದೇವೆ. ಅವನು ನಮ್ಮಿಬ್ಬರ ಜೀವನದ ಕೇಂದ್ರಬಿಂದುವಾಗಿ ಮುಂದುವರಿಯುತ್ತಾನೆ ಮತ್ತು ಅವನ ಸಂತೋಷಕ್ಕಾಗಿ ನಾವು ನಮ್ಮಿಂದ ಸಾಧ್ಯವಾದ ಎಲ್ಲವನ್ನೂ ನೀಡುತ್ತೇವೆ. ಈ ಕಷ್ಟಕರ ಮತ್ತು ಸೂಕ್ಷ್ಮ ಸಮಯದಲ್ಲಿ ನಮ್ಮ ಗೌಪ್ಯತೆ ಕಾಪಾಡಲು ನಾವು ಕಳಕಳಿಯಿಂದ ವಿನಂತಿಸುತ್ತೇವೆ ಎಂದು ಹಾರ್ದಿಕ್​ ಮನವಿ ಮಾಡಿಕೊಂಡಿದ್ದಾರೆ. (ಏಜೆನ್ಸೀಸ್​)