ಕ್ರೀಡೆ

349 ದಿನಗಳ ಬಳಿಕ ರಾಫೆಲ್​ ನಡಾಲ್​ ಗೆಲುವಿನ ಪುನರಾಗಮನ

ಬ್ರಿಸ್ಬೇನ್​: ಸ್ಪೇನ್​ ತಾರೆ ರಾಫೆಲ್​ ನಡಾಲ್​ ಸರಿಸುಮಾರು ಒಂದು ವರ್ಷದ ಬಳಿಕ ವೃತ್ತಿಪರ ಟೆನಿಸ್​ ಪಂದ್ಯವಾಡಿದ್ದು, ಗೆಲುವಿನೊಂದಿಗೆ ಯಶಸ್ವಿ ಪುನರಾಗಮನ ಕಂಡಿದ್ದಾರೆ.

ಬ್ರಿಸ್ಬೇನ್​ ಇಂಟರ್​ನ್ಯಾಷನಲ್​ ಟೆನಿಸ್​ ಟೂರ್ನಿಯಲ್ಲಿ ನಡಾಲ್​ ಮಂಗಳವಾರ ಡೊಮಿನಿಕ್​ ಥೀಮ್​ ವಿರುದ್ಧ ಆಡಿದ ಮೊದಲ ಸುತ್ತಿನ ಪಂದ್ಯದಲ್ಲಿ 7-6, 6-1 ನೇರಸೆಟ್​ಗಳಿಂದ ಗೆದ್ದರು. ಕಳೆದ ವರ್ಷ ಜನವರಿಯಲ್ಲಿ ಆಸ್ಟ್ರೆಲಿಯನ್​ ಓಪನ್​ನಲ್ಲಿ ಕೊನೆಯದಾಗಿ ಆಡಿದ್ದ ನಡಾಲ್​ ಅಲ್ಲಿ 2ನೇ ಸುತ್ತಿನಲ್ಲೇ ಹೊರಬಿದ್ದಿದ್ದರು. ಬಳಿಕ ಗಾಯದಿಂದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ 37 ವರ್ಷದ ನಡಾಲ್​ ಇದೀಗ 349 ದಿನಗಳ ಬಳಿಕ ಮರಳಿ ಕಣಕ್ಕಿಳಿದಿದ್ದಾರೆ.

22 ಗ್ರಾಂಡ್​ ಸ್ಲಾಂ ಪ್ರಶಸ್ತಿಗಳ ಒಡೆಯ ಹಾಗೂ ಮಾಜಿ ವಿಶ್ವ ನಂ. 1 ನಡಾಲ್​ ಈಗ ವಿಶ್ವ ರ್ಯಾಂಕಿಂಗ್​ನಲ್ಲಿ 672ನೇ ಸ್ಥಾನಕ್ಕೆ ಕುಸಿದಿದ್ದಾರೆ.