ಬೆಂಗಳೂರು: ಆಸ್ಟ್ರೆಲಿಯಾದ ಮಾಜಿ ಬ್ಯಾಟಿಂಗ್ ದೈತ್ಯ ಮ್ಯಾಥ್ಯೂ ಹೇಡನ್ ಅವರ ಪುತ್ರಿ ಗೇಸ್ ಹೇಡನ್ ಏಕದಿನ ವಿಶ್ವಕಪ್ ವೇಳೆ ಟಿವಿ ನಿರೂಪಕಿಯಾಗಿ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ವೇಳೆ ಪ್ರಸಾರ ವಾಹಿನಿಯ ಕಾರ್ಯಕ್ರಮದ ಭಾಗವಾಗಿ ದಸರಾ ಸಮಯದಲ್ಲಿ ಮೈಸೂರಿಗೆ ಭೇಟಿ ನೀಡಿದ್ದ ಗೇಸ್ ಹೇಡನ್, ಪಾರಂಪರಿಕ ಸಾಂಸತಿಕ ವೈಭವಕ್ಕೆ ಮನಸೋತಿದ್ದಾರೆ.
ಮೈಸೂರು ದಸರಾ ಅನುಭವವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಗ್ರೇಸ್ ಹೇಡನ್, 'ಮೈಸೂರು ದಸರಾ ಹಬ್ಬದ ನೆನಪು ಇನ್ನು ನನ್ನ ಮನದಲ್ಲಿ ಯಾವಾಗಲೂ ಹಸನಾಗಿರಲಿದೆ. ಶ್ರೀಮಂತ ಇತಿಹಾಸ, ಸಂಸತಿ ಮತ್ತು ವಾಸ್ತುಶಿಲ್ಪವನ್ನು ಒಳಗೊಂಡ ನಗರವಿದು. ಮೈಸೂರು ಅರಮನೆ ಅಮೋವಾದುದು. 10 ದಿನಗಳ ದಸರಾ ಸಮಯದಲ್ಲಿ ಮೈಸೂರು ನಗರ ಅಮೋಘವಾದ ಜೀವಂತಿಕೆ ಪಡೆದುಕೊಳ್ಳುತ್ತದೆ. ರಾತ್ರಿ 7 ಗಂಟೆಯ ನಂತರ ದೀಪಗಳು ಬೆಳಗಿದಾಗ ನಗರದ ಸೌಂದರ್ಯ ಇನ್ನಷ್ಟು ಹೆಚ್ಚುತ್ತದೆ. ಇದು ನಿಜಕ್ಕೂ ನಂಬಲಸಾಧ್ಯ. ನನ್ನನ್ನು ಬರಮಾಡಿಕೊಂಡಿದ್ದಕ್ಕೆ ಮೈಸೂರಿಗೆ ಧನ್ಯವಾದಗಳು. ಶೀಘ್ರದಲ್ಲೇ ಮತ್ತೊಮ್ಮೆ ಭೇಟಿಯಾಗೋಣ' ಎಂದು ಬರೆದುಕೊಂಡಿದ್ದಾರೆ.
ನವರಾತ್ರಿಯ ಸಮಯದಲ್ಲಿ ಗ್ರೇಸ್ ಹೇಡನ್, ಅಹಮದಾಬಾದ್ನಲ್ಲಿ ಗಾರ್ಬಾ ನೃತ್ಯ, ಕೋಲ್ಕತದಲ್ಲಿ ದುರ್ಗಾ ಪೂಜೆಯನ್ನೂ ಆನಂದಿಸಿದ್ದಾರೆ. ಚೆನ್ನೈನಲ್ಲೂ ನವರಾತ್ರಿ ಹಬ್ಬದ ಸಂಭ್ರಮವನ್ನು ಅನುಭವಿಸಿದ್ದಾರೆ. ತಂದೆ ಮ್ಯಾಥ್ಯೂ ಹೇಡನ್ರಂತೆ ಗ್ರೇಸ್ಗೂ ಭಾರತ ಅತ್ಯಂತ ನೆಚ್ಚಿನ ದೇಶವೆನಿಸಿದೆ.