More

    ವಿಶ್ವಕಪ್​ನಲ್ಲಿ ಸ್ಫೋಟಕ ಶತಕ ಸಿಡಿಸಿ ಬ್ಯಾಟನ್ನೇ ಮಗುವಿನಂತೆ ಹಿಡಿದ ಮ್ಯಾಕ್ಸ್​ವೆಲ್​! ಹೀಗಿದೆ ಕಾರಣ…

    ನವದೆಹಲಿ: ಆಸ್ಟ್ರೇಲಿಯಾದ ಬ್ಯಾಟರ್​ ಗ್ಲೆನ್​ ಮ್ಯಾಕ್ಸ್​ವೆಲ್​ ಬುಧವಾರ ನಡೆದ ಏಕದಿನ ವಿಶ್ವಕಪ್​ ಟೂರ್ನಿಯ ಪಂದ್ಯದಲ್ಲಿ ನೆದರ್ಲೆಂಡ್​ ಎದುರು 40 ಎಸೆತಗಳಲ್ಲೇ ಸ್ಪೋಟಕ ಶತಕ ಸಿಡಿದರು. ಈ ಮೂಲಕ ಏಕದಿನ ವಿಶ್ವಕಪ್​ ಇತಿಹಾಸದ ಅತಿವೇಗದ ಶತಕ ಸಾಧಕ ಎನಿಸಿದರು. ಇದರ ಬೆನ್ನಲ್ಲೇ ಅವರು ತಮ್ಮ ಬ್ಯಾಟ್​​ಅನ್ನು ಮಗುವಿನಂತೆ ಹಿಡಿದ ಸಂಭ್ರಮಿಸಿದರು. ಅದರ ಹಿಂದೆ ವಿಶೇಷವಾದ ಕಾರಣವೊಂದಿದೆ!

    ಆಸೀಸ್​ ಇನಿಂಗ್ಸ್​ನಲ್ಲಿ ವಾರ್ನರ್​ ನಿರ್ಗಮನದ ಬಳಿಕ 40ನೇ ಓವರ್​ನಲ್ಲಿ ಕ್ರೀಸ್​ಗಿಳಿದ ಮ್ಯಾಕ್ಸ್​ವೆಲ್​ ಬೌಂಡರಿ-ಸಿಕ್ಸರ್​ಗಳ ಮಳೆ ಹರಿಸಿದರು. ಮೊನಚಿಲ್ಲದ ಡಚ್ಚರ ದಾಳಿಯನ್ನು ಪುಡಿಗಟ್ಟಿದ ಮ್ಯಾಕ್ಸ್​ವೆಲ್​, ಪಂದ್ಯದ 49ನೇ ಓವರ್​ನಲ್ಲಿ 28 ರನ್​ ಕಸಿದು ಕೇವಲ 40 ಎಸೆತಗಳಲ್ಲಿ ವಿಶ್ವಕಪ್​ನ ವೇಗದ ಶತಕ ಸಿಡಿಸಿದರು. ಬಳಿಕ ಬ್ಯಾಟನ್ನೇ ಮಗುವಿನಂತೆ ಹಿಡಿದು, ಇತ್ತೀಚೆಗೆ ಜನಿಸಿದ್ದ ತನ್ನ ಮೊದಲ ಮಗುವಿಗೆ ಶತಕವನ್ನು ಅರ್ಪಿಸಿದರು. ವಿಶ್ವಕಪ್​ಗೆ ಮುನ್ನ ಸೆಪ್ಟೆಂಬರ್​ 15ರಂದು ಅವರ ಪತ್ನಿ ಹಾಗೂ ಭಾರತದ ಮೂಲದ ವಿನಿ ರಾಮನ್​ ಗಂಡು ಮಗುವಿಗೆ ಜನ್ಮ ನೀಡಿದ್ದರು.

    ಏಳನೇ ವಿಕೆಟ್​ಗೆ ನಾಯಕ ಪ್ಯಾಟ್​ ಕಮ್ಮಿನ್ಸ್​ (12*) ಜತೆಯಾಗಿ 44 ಎಸೆತಗಳಲ್ಲಿ 103 ರನ್​ ಚಚ್ಚಿದರು. ಇದರಲ್ಲಿ ಮ್ಯಾಕ್ಸ್​ವೆಲ್​ ಒಬ್ಬರೇ 91 ರನ್​ ಪೇರಿಸಿದರು. ಕೊನೇ 10 ಓವರ್​ಗಳಲ್ಲಿ ಆಸೀಸ್​ 131 ರನ್​ ಕಸಿಯಿತು. 44 ಎಸೆತಗಳ ಇನಿಂಗ್ಸ್​​ನಲ್ಲಿ ಮ್ಯಾಕ್ಸ್​​ವೆಲ್ 9 ಬೌಂಡರಿ, 8 ಸಿಕ್ಸರ್​ ಸಹಿತ 106 ರನ್​ ಸಿಡಿಸಿದರು.

    ಮ್ಯಾಕ್ಸ್​ವೆಲ್​ ಅತಿ ವೇಗದ ಶತಕ
    ಏಕದಿನ ವಿಶ್ವಕಪ್​ನಲ್ಲಿ ಅತಿ ಕಡಿಮೆ ಎಸೆತದಲ್ಲಿ ಶತಕಗಳಿಸಿದ ಐರ್ಲೆಂಡ್​ನ ಬ್ಯಾಟರ್​ ಕೆವಿನ್​ ಓಬ್ರಿಯನ್​ (50 ಎಸೆತ) ಹೆಸರಿನಲ್ಲಿದ್ದ 12 ವರ್ಷ ಹಳೆಯ ದಾಖಲೆಯನ್ನು ದಕ್ಷಿಣ ಆಫ್ರಿಕಾದ ಏಡೆನ್​ ಮಾರ್ಕ್ರಮ್​ (49 ಎಸೆತ) ಹಾಲಿ ವಿಶ್ವಕಪ್​ನ 4ನೇ ಪಂದ್ಯದಲ್ಲಿ ಮುರಿದಿದ್ದರು. ಇದೀಗ ಗ್ಲೆನ್​ ಮ್ಯಾಕ್ಸ್​ವೆಲ್​ (40 ಎಸೆತ) ಆ ದಾಖಲೆಯನ್ನು 18 ದಿನಗಳ ಅಂತರದಲ್ಲೇ ಅಳಿಸಿಹಾಕಿದ್ದಾರೆ. ಒಟ್ಟಾರೆಯಾಗಿ ಇದು ಏಕದಿನ ಕ್ರಿಕೆಟ್​ನಲ್ಲಿ ದಾಖಲಾದ 4ನೇ ವೇಗದ ಶತಕ ಎನಿಸಿದೆ. ಎಬಿ ಡಿವಿಲಿಯರ್ಸ್​ (31), ಕೋರಿ ಆಂಡರ್​ಸನ್​ (36), ಶಾಹಿದ್​ ಅಫ್ರಿದಿ (37) ಮೊದಲ 3 ಸ್ಥಾನದಲ್ಲಿದ್ದಾರೆ.

    ಹಾಲಿ ಚಾಂಪಿಯನ್ ಇಂಗ್ಲೆಂಡ್​ ಸೆಮೀಸ್​ ಹಾದಿ ದುರ್ಗಮ; ಇನ್ನು ಪ್ರತಿ ಪಂದ್ಯವೂ ಕ್ವಾರ್ಟರ್​ಫೈನಲ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts