ಹೈದರಾಬಾದ್: ಸನ್ರೈಸರ್ಸ್ ಹೈದರಾಬಾದ್ ಮತ್ತು ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಐಪಿಎಲ್-17ರಲ್ಲಿ ಶುಕ್ರವಾರ ಮುಖಾಮುಖಿ ಆಗಲಿದ್ದು, ಗೆಲುವಿನ ಹಳಿಗೆ ಮರಳಲು ಉಭಯ ತಂಡಗಳು ಪೈಪೋಟಿ ನಡೆಸಲಿವೆ.
ತವರಿನಲ್ಲಿ ಆರಂಭಿಕ 2 ಪಂದ್ಯಗಳಲ್ಲಿ ಗೆದ್ದ ಬಳಿಕ ಸಿಎಸ್ಕೆ ತಂಡ ಡೆಲ್ಲಿ ವಿರುದ್ಧದ ಕಳೆದ ಪಂದ್ಯದಲ್ಲಿ ವಿಶಾಖಪಟ್ಟಣದಲ್ಲಿ ಸೋಲು ಅನುಭವಿಸಿದ್ದರೆ, ಸನ್ರೈಸರ್ಸ್ ತಂಡ ತವರಿನ ಮೊದಲ ಪಂದ್ಯದಲ್ಲಿ ಖಾತೆ ತೆರೆದರೂ, ಅಹಮದಾಬಾದ್ನಲ್ಲಿ ಗುಜರಾತ್ ಎದುರು ಆಡಿದ ಕಳೆದ ಪಂದ್ಯದಲ್ಲಿ ಸೋಲು ಕಂಡಿತ್ತು. ಹೀಗಾಗಿ ಮತ್ತೆ ಗೆಲುವಿನ ಲಯ ಕಂಡುಕೊಳ್ಳುವುದೇ ಈಗ ಉಭಯ ತಂಡಗಳ ಪ್ರಮುಖ ಧ್ಯೇಯವಾಗಿದೆ.
ಬ್ಯಾಟಿಂಗ್ನಲ್ಲಿ ಧೋನಿಗೆ ಬಡ್ತಿ?
ತವರಿನಲ್ಲಿ ಭದ್ರ ಕೋಟೆ ನಿರ್ಮಿಸಿಕೊಂಡಿರುವ ಋತುರಾಜ್ ಗಾಯಕ್ವಾಡ್ ಪಡೆಗೆ ಎದುರಾಳಿ ನೆಲದಲ್ಲಿ ಗೆಲ್ಲುವುದೇ ಪ್ರಮುಖ ಸವಾಲೆನಿಸಿದೆ. ಡೆಲ್ಲಿ ಎದುರು ಎಂಎಸ್ ಧೋನಿ ಕೊನೇ ಹಂತದಲ್ಲಿ ಕ್ರೀಸ್ಗೆ ಇಳಿದು ಪ್ರದರ್ಶಿಸಿದ ಸ್ಫೋಟಕ ಆಟ ಸಿಎಸ್ಕೆಗೆ ಸ್ಫೂರ್ತಿದಾಯಕವೆನಿಸಿದೆ. 42 ವರ್ಷದ ಧೋನಿ ಗೆಲುವು ತಂದುಕೊಡದಿದ್ದರೂ, ಅವರ ಆಟ ಗಮನಸೆಳೆದಿತ್ತು. ಈ ಬಾರಿ ಧೋನಿ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ಪಡೆದು ಆಡುವರೇ ಎಂಬ ಕುತೂಹಲವಿದೆ.
ಮುಸ್ತಾಫಿಜುರ್ ಸ್ಥಾನಕ್ಕೆ ಯಾರು?
ಪ್ರಮುಖ ವೇಗಿ ಮುಸ್ತಾಫಿಜುರ್ ಈ ಪಂದ್ಯಕ್ಕೆ ಅಲಭ್ಯರಾಗಿರುವುದರಿಂದ ಸಿಎಸ್ಕೆ ತಂಡ ಮುಕೇಶ್ ಚೌಧರಿ ಅಥವಾ ಶಾರ್ದೂಲ್ ಠಾಕೂರ್ಗೆ ಸ್ಥಾನ ಕಲ್ಪಿಸುವ ಸಾಧ್ಯತೆಗಳಿವೆ. ವಿದೇಶಿ ಕೋಟಾದಡಿಯಲ್ಲಿ ಲಂಕಾ ಸ್ಪಿನ್ನರ್ ಮಹೀಶ್ ತೀಕ್ಷಣ ಅವಕಾಶ ಪಡೆದರೂ ಅಚ್ಚರಿ ಇಲ್ಲ. ಇಂಗ್ಲೆಂಡ್ ಆಲ್ರೌಂಡರ್ ಮೊಯಿನ್ ಅಲಿ ವಿದೇಶಿ ಕೋಟಾದಡಿಯಲ್ಲಿ ಆಡಿಸಬಹುದಾದ ಮತ್ತೊಂದು ಆಯ್ಕೆ ಆಗಿದ್ದಾರೆ.
ಮತ್ತೆ ರನ್ಮಳೆ ನಿರೀಕ್ಷೆ
ಹೈದರಾಬಾದ್ನ ಆರ್ಜಿ ಸ್ಟೇಡಿಯಂನಲ್ಲಿ ಆಡಿದ ಮೊದಲ ಪಂದ್ಯದಲ್ಲಿ ಸನ್ರೈಸರ್ಸ್ ರನ್ಮಳೆ ಹರಿಸಿ ಐಪಿಎಲ್ ಇತಿಹಾಸದಲ್ಲೇ ಸರ್ವಾಧಿಕ ಮೊತ್ತ ಪೇರಿಸಿತ್ತು. ಮುಂಬೈ ಎದುರಿನ ಆ ಪಂದ್ಯದಲ್ಲಿ 500ಕ್ಕೂ ಅಧಿಕ ರನ್ ಮತ್ತು ದಾಖಲೆಯ ಸಿಕ್ಸರ್ ಸಿಡಿದಿತ್ತು. ಸನ್ರೈಸರ್ಸ್ ಬ್ಯಾಟರ್ಗಳು ತವರಿನಲ್ಲಿ ಮತ್ತೆ ರನ್ಮಳೆ ಹರಿಸುವ ಹಂಬಲದಲ್ಲಿದ್ದಾರೆ. ಕನ್ನಡಿಗ ಮಯಾಂಕ್ ಅಗರ್ವಾಲ್ ಒಬ್ಬರೇ ಸದ್ಯ ಸನ್ ಬ್ಯಾಟಿಂಗ್ ಕ್ರಮಾಂಕದಲ್ಲಿ ರನ್ಬರ ಎದುರಿಸುತ್ತಿದ್ದಾರೆ. ವೇಗಿ ಭುವನೇಶ್ವರ್ ಕುಮಾರ್, ಸ್ಪಿನ್ನರ್ ಮಯಾಂಕ್ ಮಾರ್ಕಂಡೆ ದುಬಾರಿಯಾಗುತ್ತಿರುವುದು ಹಿನ್ನಡೆ ತಂದಿದೆ. ಭುವಿ ಮೊದಲ 3 ಪಂದ್ಯಗಳಲ್ಲಿ ಒಂದೂ ವಿಕೆಟ್ ಕೂಡ ಕಬಳಿಸಿಲ್ಲ. ನಾಯಕ ಪ್ಯಾಟ್ ಕಮ್ಮಿನ್ಸ್ 4 ವಿಕೆಟ್ ಕಬಳಿಸಿದ್ದು, ಅವರಿಗೆ ಇತರರಿಂದ ಸಮರ್ಥ ಬೆಂಬಲ ಲಭಿಸಬೇಕಿದೆ.
ಮುಖಾಮುಖಿ: 19
ಸಿಎಸ್ಕೆ: 14
ಸನ್ರೈಸರ್ಸ್: 5
ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್