ಮುಂಬೈ: ಆಫ್-ಸೀಸನ್ ಅಲ್ಟಿಮೇಟ್ (OSU) ಮುಂಬೈ ಅಲ್ಟಿಮೇಟ್ ಲೀಗ್ (MUL) ಸೀಸನ್ 5 ಅನ್ನು ಘೋಷಣೆ ಮಾಡಿದೆ. ಮುಂಬೈನಲ್ಲಿ ಫ್ರಿಸ್ಬಿ ಗೇಮ್ ಅತಿ ವೇಗವಾಗಿ ಬೆಳೆಯುತ್ತಿದೆ. ಏಪ್ರಿಲ್ 13ರಿಂದ ಮೇ 4ರವರೆಗೆ ಬಾಂದ್ರಾದ ವಿಂಗ್ಸ್ ಅರೇನಾದಲ್ಲಿ ಮುಂಬೈ ಅಲ್ಟಿಮೇಟ್ ಲೀಗ್ ಸೀಸನ್ 5 ನಡೆಯಲಿದೆ. ದೇಶದ ಪ್ರಮುಖ ಪ್ರತಿಭೆಗಳನ್ನು ಈ ಲೀಗ್ ನಲ್ಲಿ ಪಾಲ್ಗೊಳ್ಳಲಿದ್ದಾರೆ.
ಮುಂಬೈ ಅಲ್ಟಿಮೇಟ್ ಲೀಗ್ ನ ಸೀಸನ್ 5, ಇದೇ ಏಪ್ರಿಲ್ 13, 19, 20, 26, 27 ಮತ್ತು ಮೇ 4ರಂದು ನಡೆಯಲಿದ್ದು, ಎಲ್ಲ ಪಂದ್ಯಗಳನ್ನು ಒಎಸ್ಯು ಯೂಟ್ಯೂಬ್ ಚಾನಲ್ @offseasonultimate ನಲ್ಲಿ ಲೈವ್ ಸ್ಟ್ರೀಮ್ ಮಾಡಲಾಗುತ್ತದೆ. ಈ ಟೂರ್ನಿಯಲ್ಲಿ ಆರು ಸ್ಪರ್ಧಾತ್ಮಕ ತಂಡಗಳಿರಲಿದ್ದು ಮುಂಬೈ, ಸೂರತ್, ಪುಣೆ, ಮತ್ತು ಅಹಮದಾಬಾದ್ ನಿಂದ ಅಲ್ಟಿಮೇಟ್ ಫ್ರಿಸ್ಬೀ ಆಟಗಾರರು ಭಾಗವಹಿಸಲಿದ್ದಾರೆ.
ಹಾಲಿ ಚಾಂಪಿಯನ್‌ಗಳಾದ ಡ್ಯಾನ್ಸಿಂಗ್ ಡ್ರಾಗನ್ಸ್ ತಮ್ಮ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ರೀಬಾರ್ನ್ ಫೈರ್, ಬುಂಬೈ ಬಂಟೈಸ್, ದಿ ಆಫ್ಟರ್‌ಬರ್ನರ್ಸ್, ಬಾಂಬೆ ರೈನೋಸ್ ಮತ್ತು ದೇಸಿ ಹಾಕ್ಸ್ ಚಾಂಪಿಯನ್‌ಶಿಪ್‌ಗಾಗಿ ಸ್ಪರ್ಧಿಸಲಿವೆ. ಒಟ್ಟು 127 ಆಟಗಾರರು ಕಣಕ್ಕಿಳಿಯಲಿದ್ದು, ಇದರಲ್ಲಿ ದಾಖಲೆ ಮಟ್ಟದ 45 ಮಹಿಳಾ ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ. ಮುಂಬೈ ಅಲ್ಟಿಮೇಟ್ ಲೀಗ್ ಭಾರತದ ಅಲ್ಟಿಮೇಟ್ ಫ್ರಿಸ್ಬೀ ಕ್ರಿಯಾಶೀಲತೆಯಲ್ಲಿ ಪ್ರಮುಖ ಸ್ಪರ್ಧೆಯಾಗಿ ಮಿಂಚುತ್ತಿದೆ.
ಈ ಬಗ್ಗೆ ಮಾತನಾಡಿದ ಆಫ್-ಸೀಸನ್ ಅಲ್ಟಿಮೇಟ್ ನ ಸಹ ಸಂಸ್ಥಾಪಕ ರಿಷಭ್ ಕಿಶೋರ್ 'ಮುಂಬೈ ಅಲ್ಟಿಮೇಟ್ ಲೀಗ್ ಸೀಸನ್ 5 ಅನ್ನು ಆರಂಭಿಸಲು ನಾವು ತುಂಬ ಉತ್ಸಾಹಿತರಾಗಿದ್ದು, ಭಾರತದಲ್ಲಿ ಈ ಕ್ರೀಡೆಯ ಬೆಳವಣಿಗೆಗೆ ಸಹಕರಿಸಲು ಹಂಬಲಿಸುತ್ತಿದ್ದೇವೆ. ಈ ಲೀಗ್ ಆಟಗಾರರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಕೇವಲ ಒಂದು ವೇದಿಕೆಯಾಗಿ ಕಾರ್ಯನಿರ್ವಹಿಸುವುದಿಲ್ಲ ಬದಲಾಗಿ ಇದು ಅಲ್ಟಿಮೇಟ್ ಫ್ರಿಸ್ಬೀಯ ಉತ್ಸಾಹ ಮತ್ತು ಚೈತನ್ಯದ ಆಚರಣೆಯಾಗಿದೆ. ಈ ಕ್ರೀಡೆಯು ದೇಶದ ವಿವಿಧ ಭಾಗಗಳ ಆಟಗಾರರನ್ನು ಒಟ್ಟುಗೂಡಿಸಲಿದೆ. ಕ್ರೀಡೆಯು ವೇಗವನ್ನು ಪಡೆಯುತ್ತಿರುವುದನ್ನು ನೋಡಿ ನಮಗೆ ಹೆಮ್ಮೆಯಿದೆ. ಈ ಬಾರಿ ಸ್ಪರ್ಧೆಯು ಇನ್ನಷ್ಟು ಜನರನ್ನು ಆಟಗಾರರಾಗಿ, ಅಭಿಮಾನಿಗಳಾಗಿ ಅಥವಾ ಬೆಂಬಲಿಗರಾಗಿ ಈ ಕ್ರೀಡೆಯೊಂದಿಗೆ ಜೊತೆಯಾಗಲು ಪ್ರೇರೇಪಿಸುತ್ತದೆ ಎಂಬ ನಿರೀಕ್ಷೆಯಲ್ಲಿದ್ದೇವೆ ಎಂದಿದ್ದಾರೆ.
ಈ ಲೀಗ್ ಗೆ ಆಟಗಾರರ ಹರಾಜು ಮಾರ್ಚ್ 14ರಂದು ನಡೆದಿದ್ದು, 102 ಆಟಗಾರರನ್ನು ಆರು ತಂಡಗಳಿಗೆ ಹರಾಜು ಮಾಡಲಾಗಿದೆ. ಈ ಲೀಗ್ನ ಒಡೆತನ ಹೊಂದಿರುವವರು ತಮ್ಮ ತಮ್ಮ ತಂಡಗಳ ಆಟಗಾರರೂ ಆಗಿರುವುದು ಈ ಲೀಗ್ನ ವಿಶೇಷತೆಗಳಲ್ಲೊಂದಾಗಿದೆ.