ಲಖನೌ: ಬೃಹತ್ ಮೊತ್ತದ ಚೇಸಿಂಗ್ ವೇಳೆ 23 ಎಸೆತಗಳಲ್ಲಿ 25 ರನ್ ಗಳಿಸಿ ಪರದಾಡುತ್ತಿದ್ದ ಇಂಪ್ಯಾಕ್ಟ್ ಪ್ಲೇಯರ್ ತಿಲಕ್ ವರ್ಮರನ್ನು "ರಿಟೈರ್ಡ್ ಔಟ್' ಮೂಲಕ ಡಗೌಟ್ಗೆ ಮರಳಿ ಕರೆಸಿದ ಮುಂಬೈ ಇಂಡಿಯನ್ಸ್ ತಂಡದ ಕ್ರಮ ಮಾಜಿ ಕ್ರಿಕೆಟಿಗರು ಮತ್ತು ಅಭಿಮಾನಿಗಳಿಂದ ತೀವ್ರ ಟೀಕೆಗೆ ಗುರಿಯಾಗಿರುವ ನಡುವೆ, ತಂಡದ ಮುಖ್ಯ ಕೋಚ್ ಮಹೇಲ ಜಯವರ್ಧನೆ ಸಮರ್ಥನೆ ನೀಡಿದ್ದಾರೆ.
"ನಾವು ಬೇಗನೆ ವಿಕೆಟ್ಗಳನ್ನು ಕಳೆದುಕೊಂಡಾಗ ತಿಲಕ್, ಸೂರ್ಯಕುಮಾರ್ ಜತೆಗೂಡಿ ಉತ್ತಮ ಜತೆಯಾಟವನ್ನೇ ನಡೆಸಿದರು. ಆದರೆ ಕೊನೆಯಲ್ಲಿ ಅವರಿಗೆ ದೊಡ್ಡ ಹೊಡೆತಗಳನ್ನು ಬಾರಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ನಾವು ಯಾರಾದರೂ ಹೊಸದಾಗಿ ಕ್ರೀಸ್ಗೆ ಇಳಿಸಲು ಬಯಸಿದೆವು. ಅದೊಂದು ಕಾರ್ಯತಂತ್ರದ ನಿರ್ಧಾರವಾಗಿತ್ತು' ಎಂದು ಜಯವರ್ಧನೆ ವಿವರಣೆ ನೀಡಿದ್ದಾರೆ.
ಕೊನೇ ಓವರ್ನಲ್ಲಿ 22 ರನ್ ಬೇಕಿದ್ದಾಗ ಮುಂಬೈ ತಂಡ, ಭಾರತ ಪರ ಟಿ20ಯಲ್ಲಿ 2 ಶತಕ ಸಿಡಿಸಿರುವ ತಿಲಕ್ ಬದಲಿಗೆ ಐಪಿಎಲ್ನಲ್ಲಿ ಕೇವಲ 106 ಸ್ಟ್ರೈಕ್ರೇಟ್ ಹೊಂದಿರುವ ಮಿಚೆಲ್ ಸ್ಯಾಂಟ್ನರ್ರನ್ನು ಆಡಿಸಿದ್ದು ವ್ಯಾಪಕ ಟೀಕೆಗೆ ಗುರಿಯಾಗಿದೆ. ಈ ನಿರ್ಧಾರದ ವೇಳೆ ಡಗೌಟ್ನಲ್ಲಿ ಸೂರ್ಯಕುಮಾರ್ ಮುಖದಲ್ಲಿ ವ್ಯಕ್ತಪಡಿಸಿದ ಪ್ರತಿಕ್ರಿಯೆಯೂ ಮುಂಬೈ ಟೀಮ್ ಮ್ಯಾನೇಜ್ಮೆಂಟ್ ವಿರುದ್ಧ ವ್ಯಕ್ತಪಡಿಸಿದ ಅಸಮಾಧಾನದಂತಿತ್ತು.